ಮೈಸೂರು: ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ವರಿಷ್ಠರ ವಿರುದ್ಧ ಜಿಲ್ಲೆಯಲ್ಲಿ ಟಿಕೆಟ್ ಆಕಾಂಕ್ಷಿಗಳ ಅಸಮಾಧಾನ ಭುಗಿಲೆದ್ದಿದೆ. ಚಾಮರಾಜ ಕ್ಷೇತ್ರದಲ್ಲಿ (Karnataka Election) ಟಿಕೆಟ್ ವಂಚಿತ ಮಾಜಿ ಶಾಸಕ ವಾಸು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದಲೇ ತಮಗೆ ಟಿಕೆಟ್ ಕೈತಪ್ಪಿದೆ ಎಂದು ಕಿಡಿಕಾರಿದ್ದರೆ, ಮತ್ತೊಂದೆಡೆ ಕೃಷ್ಣರಾಜ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡ ನವೀನ್ ಕುಮಾರ್ ಬಂಡಾಯ ಸ್ಪರ್ಧೆಗೆ ಮುಂದಾಗಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಮಾಜಿ ಶಾಸಕ ವಾಸು, ಟಿಕೆಟ್ ವಿಚಾರ ಕೈ ತಪ್ಪಿದ್ದು ಅನಿರೀಕ್ಷಿತ ಬೆಳವಣಿಗೆ. ಬ್ಲಾಕ್ ಮಟ್ಟದಿಂದ, ರಾಷ್ಟಮಟ್ಟದವರೆಗೂ ನಾಯಕರು ನನ್ನ ಬೆನ್ನಿಗೆ ನಿಂತಿದ್ದರು. 40 ವರ್ಷಗಳಿಂದ ಪಕ್ಷದಲ್ಲಿ ಇದ್ದೇನೆ. ಸಾಕಷ್ಟು ನೋವು ಆದಾಗಲೂ ಪಕ್ಷ ವಿರೋಧ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ. ಬೇರೆ ಕ್ಷೇತ್ರಗಳಲ್ಲಿ ಹೀಗೆ ಆಗಿದ್ದರೆ ನಾನು ಕೇಳುತ್ತಿರಲಿಲ್ಲ. 1999ರಿಂದಲೂ ರಾಜಕಾರಣದಲ್ಲಿ ಇದ್ದೇನೆ. ಆದರೂ ಟಿಕೆಟ್ ಕೈತಪ್ಪಿದೆ ಎಂದು ಅಸಮಾಧಾನ ಹೊರಹಾಕಿದರು.
ಟಿಕೆಟ್ ಸಿಗದಿರಲು ಸಿದ್ದರಾಮಯ್ಯ ಕಾರಣ
ನನಗೆ ಟಿಕೆಟ್ ಸಿಗದೇ ಇರಲು ಸಿದ್ದರಾಮಯ್ಯ ಕಾರಣ. ಜಿಲ್ಲೆ, ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ನನ್ನ ಹೆಸರು ಶಿಫಾರಸು ಆಗಿತ್ತು. ಒಬ್ಬ ನಾಯಕ ಮಾತ್ರ ನನ್ನ ವಿರುದ್ಧ ಇದ್ದರು. ಆ ಕಾರಣಕ್ಕೆ ನನಗೆ ಟಿಕೆಟ್ ಮಿಸ್ ಆಗಿದೆ. ನಾನು ನೇರ, ನಿಷ್ಠುರವಾಗಿ ಮಾತನಾಡಿದ್ದಕ್ಕೆ ನನ್ನ ವಿರುದ್ಧ ನಿಂತಿದ್ದಾರೆ. ಕಾಂಗ್ರೆಸ್ ಸೇರಿ ಎಲ್ಲ ಪಕ್ಷದಲ್ಲೂ ಜೀತದಾಳು ಪದ್ಧತಿ ಇದೆ. ನೀನು ಮಾಡಿದ್ದೇ ಸರಿ ಅಣ್ಣ, ನಿನ್ನ ಕುದುರೆ ಓಡುತ್ತೆ ಅಣ್ಣ ಎಂದವರಿಗೆ ಗೌರವ ಸಿಗುತ್ತದೆ. ಕೆಲವರಿಗೆ ಗೆಲ್ಲಿಸುವ ಶಕ್ತಿ ಇರುತ್ತೆ. ಅವರ ಬಗ್ಗೆ ಪಕ್ಷದಲ್ಲಿ ಗೌರವ ಇರುತ್ತೆ. ಆದರೆ ಕೆಲವರಿಗೆ ಸೋಲಿಸುವ ಶಕ್ತಿ ಇರುತ್ತದೆ. ಅಂಥವರನ್ನು ಕಂಡರೆ ಪಕ್ಷಗಳಿಗೆ ಭಯ. ಸಿದ್ದರಾಮಯ್ಯ ಸ್ವಪಕ್ಷದವರನ್ನೇ ಸೋಲಿಸುವ ನಾಯಕ ಎಂದು ವಾಸು ಆರೋಪಿಸಿದರು.
ಇದನ್ನೂ ಓದಿ | Karnataka Election 2023: ಕರ್ನಾಟಕದ ಬ್ಯಾಂಕ್‌ಗಳ ನುಂಗಿದ ಕೇಂದ್ರವೀಗ ನಂದಿನಿ ನುಂಗಲು ಹೊರಟಿದೆ: ಸಿದ್ದರಾಮಯ್ಯ
ನನಗೆ ಯಾರು ಟಿಕೆಟ್ ತಪ್ಪಿಸಿದರೋ ಅವರಿಗೆ ದೇವರು ಒಳ್ಳೆಯದು ಮಾಡಲಿ. ನನಗೆ ಅವಕಾಶ ಕೊಟ್ಟ ಪಕ್ಷ ಬಿಡುವುದಿಲ್ಲ. ಬೇರೆ ಪಕ್ಷಗಳಿಂದ ಒತ್ತಡ ಇದೆ. ನನ್ನ ಹಿತೈಷಿಗಳು ಪಕ್ಷೇತರ ಸ್ಪರ್ಧೆ ಮಾಡಿ ಅಂತ ಕೇಳುತ್ತಿದ್ದಾರೆ. ಇದರಿಂದ ಏನು ಪರಿಣಾಮ ಆಗುತ್ತದೆ ಅಂತ ಯೋಚನೆ ಮಾಡುತ್ತಿದ್ದೇನೆ. ಪಕ್ಷದಲ್ಲೇ ಇದ್ದುಕೊಂಡು ನನಗೆ ಅನ್ಯಾಯ ಮಾಡಿದವರನ್ನು ದ್ವೇಷ ಮಾಡುವುದು ನಿಜ. ನನ್ನನ್ನು ನಂಬಿದವರನ್ನು ಕೈಬಿಡುವುದಿಲ್ಲ. ಇನ್ನೂ ನಾಮಪತ್ರ ಸಲ್ಲಿಕೆ ಕಡೆ ದಿನಕ್ಕೆ ಬಾಕಿ ಇದೆ. ಏನು ಮಾಡಬೇಕು ಅಂತ ಎರಡು ಮೂರು ದಿನಗಳಲ್ಲಿ ಸೂಕ್ತ ತೀರ್ಮಾನ ಮಾಡುತ್ತೇನೆ. ಸೀಟ್ ತಪ್ಪಿಸಿದ್ದಕ್ಕೆ ನನ್ನನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಲಕ್ಷ್ಮಣ ಸವದಿ ವಿರುದ್ಧ ಪ್ರತಿಪಕ್ಷ ನಾಯಕರು ಸದನದಲ್ಲೇ ಗಲಾಟೆ ಮಾಡಿದ್ದರು. ಈಗ ಪಕ್ಷಕ್ಕೆ ಸೇರಿಸಿಕೊಂಡು ಟಿಕೆಟ್ ಕೊಟ್ಟಿದ್ದಾರೆ ಎಂದು ಕೈ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದರು.
ನನ್ನ ಮಗನಿಗೆ (ಕವೀಶ್ ಗೌಡ) ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಟಿಕೆಟ್ ಸಿಕ್ಕಿರುವುದಕ್ಕೆ ಹಾಗೂ ನನಗೆ ಕಾಂಗ್ರೆಸ್ ಟಿಕೆಟ್ ಮಿಸ್ ಆಗಿರುವುದಕ್ಕೂ ಯಾವುದೇ ಸಂಬಂಧ ಇಲ್ಲ ಎಂದ ಅವರು, ಕೇರಳದ ಎ.ಕೆ. ಆ್ಯಂಟನಿ ಅವರಿಗೆ ಪಕ್ಷ ಪ್ರಧಾನಿ ಹುದ್ದೆ ಬಿಟ್ಟು ಎಲ್ಲವನ್ನೂ ಕೊಟ್ಟಿತ್ತು. ಅವರ ಮಗ ಅನಿಲ್ ಆ್ಯಂಟನಿ ಬಿಜೆಪಿ ಪಕ್ಷಕ್ಕೆ ಹೋದರೂ ಹೈಕಮಾಂಡ್ ಕೇಳುತ್ತಿಲ್ಲ. ಎ.ಮಂಜು ನಮ್ಮಲ್ಲಿ ಸಚಿವರಾಗಿದ್ದರು. ಬಿಜೆಪಿಗೆ ಹೋಗಿ ಈಗ ಜೆಡಿಎಸ್‌ಗೆ ಹೋಗಿದ್ದಾರೆ. ಅವರ ಮಗ ಮಂಥರ್ ಗೌಡಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿಲ್ಲವೇ? ಬಚ್ಚೇಗೌಡ ಬಿಜೆಪಿ ಸಂಸದರಾದರೂ ಶರತ್ ಬಚ್ಚೇಗೌಡ ಅವರಿಗೆ ಕೈ ಟಿಕೆಟ್ ಕೊಟ್ಟಿಲ್ಲವೇ ಎಂದು ತಮಗೆ ಟಿಕೆಟ್ ಕೈತಪ್ಪಿರುವುದಕ್ಕೆ ಆಕ್ರೋಶ ಹೊರಹಾಕಿದ್ದಾರೆ.
ನನಗೂ ಸಿದ್ದರಾಮಯ್ಯಗೂ ಹಲವು ವರ್ಷಗಳಿದಂಲೂ ಅಷ್ಟಕ್ಕಷ್ಟೆ. ಹೀಗಿದ್ದರೂ ನಾನು ಅವರ ಪರವಾಗಿ ಕೆಲಸ ಮಾಡಿದ್ದೇನೆ. ನನ್ನಿಂದ ಅವರಿಗೆ ಲಾಭ ಆಗಿದೆ. ನನಗೆ ಅವರಿಂದ ಕಿಂಚಿತ್ತೂ ಲಾಭ ಆಗಿಲ್ಲ. ಯಾವ ಹಂತದಲ್ಲೂ ನಾನು ಅವರ ಬಳಿ ವೈಯಕ್ತಿಕ ಬೇಡಿಕೆ ಇಟ್ಟಿಲ್ಲ. ಸೋಲು ಗೆಲುವು ಹೊಸದಲ್ಲ. 1999ರಲ್ಲಿ ಉಪ ಮುಖ್ಯಮಂತ್ರಿ, 2018ರಲ್ಲಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಸೋತರು. ಈಗ ಟಿಕೆಟ್ ತಪ್ಪಿಸಿದರೆ ಅದು ದೊಡ್ಡ ಸಾಧನೆ ಅಲ್ಲ ಎಂದು ಕುಟುಕಿದರು.
ಇದನ್ನೂ ಓದಿ | BJP Karnataka: ನೂರು ಶೆಟ್ಟರ್‌ಗಳನ್ನು ತಯಾರಿಸುವ ತಾಕತ್ತು ಬಿಜೆಪಿಗಿದೆ: ಬಿಜೆಪಿ ಮುಖ್ಯ ವಕ್ತಾರ ಎಂ.ಜಿ. ಮಹೇಶ್
ಕೃಷ್ಣರಾಜ ಕ್ಷೇತ್ರಕ್ಕೂ ಹರಡಿದ ಬಂಡಾಯದ ಕಾಳ್ಗಿಚ್ಚು
ಮೈಸೂರು: ಚಾಮರಾಜ ಆಯ್ತು, ಈಗ ಕೃಷ್ಣರಾಜಕ್ಕೂ ಬಂಡಾಯದ ಕಾಳ್ಗಿಚ್ಚು ಹರಡಿದೆ. ಟಿಕೆಟ್ ಸಿಗುವ ಭರವಸೆ ಮೇಲೆ ತಯಾರಿ ಮಾಡಿಕೊಂಡಿದ್ದ ಮುಖಂಡ ನವೀನ್ ಕುಮಾರ್, ಟಿಕೆಟ್ ಮಿಸ್ ಆದ ಹಿನ್ನೆಲೆಯಲ್ಲಿ ಬಂಡಾಯ ಸ್ಪರ್ಧೆಗೆ ಮುಂದಾಗಿದ್ದಾರೆ. ಚಾಮರಾಜಕ್ಕೆ ಕೆ.ಹರೀಶ್‌ಗೌಡ, ಕೃಷ್ಣರಾಜಕ್ಕೆ ಎಂ.ಕೆ. ಸೋಮಶೇಖರ್ ಹೆಸರನ್ನು ಕಾಂಗ್ರೆಸ್ ಘೋಷಿಸಿದೆ. ಇದೀಗ ಎರಡೂ ಕ್ಷೇತ್ರಗಳಲ್ಲಿ ಬಂಡಾಯ ಸಾಧ್ಯತೆ ಇದೆ. ಬೆಳಗ್ಗೆ ಸಿದ್ದರಾಮಯ್ಯ ವಿರುದ್ಧವೇ ಮಾಜಿ ಶಾಸಕ ವಾಸು ತೊಡೆತಟ್ಟಿದ್ದು, ಮಧ್ಯಾಹ್ನ ಎಂ.ಎನ್.ನವೀನ್ ಕುಮಾರ್ ಮನೆಯಲ್ಲಿ ಬೆಂಬಲಿಗರ ಸಭೆ ನಡೆಸಿದ್ದಾರೆ. ತಮ್ಮ ನಾಯಕನಿಗೆ ಟಿಕೆಟ್ ಕೈತಪ್ಪಿದ್ದಕ್ಕೆ ಕಾರ್ಯಕರ್ತರು ಅಸಮಾಧಾನ ಹೊರಹಾಕಿದ್ದಾರೆ. ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ನವೀನ್ ಕುಮಾರ್ ತಿಳಿಸಿದ್ದಾರೆ.
ವಾಸು ಬರಲ್ಲ, ಮಾರುತಿ ರಾವ್ ಪವಾರ್‌ರನ್ನು ಕರೆದಿಲ್ಲ: ಸಾ.ರಾ.ಮಹೇಶ್
ಮೈಸೂರು: ಚಾಮರಾಜ ಕ್ಷೇತ್ರದ ಮಾಜಿ ಶಾಸಕ ವಾಸು ಜೆಡಿಎಸ್‌ಗೆ ಬರುವುದಿಲ್ಲ ಹಾಗೂ ನರಸಿಂಹರಾಜ ಕ್ಷೇತ್ರದ ಮಾಜಿ ಶಾಸಕ ಮಾರುತಿ ರಾವ್ ಪವಾರ್ ಪಕ್ಷಕ್ಕೆ ಬರಲ್ಲ ಎಂದು ಕೆ.ಆರ್.ನಗರ ಶಾಸಕ ಸಾ.ರಾ.ಮಹೇಶ್ ಹೇಳಿದ್ದಾರೆ. ವಾಸು ಹಿರಿಯರು, ಪಕ್ಷ ನಿಷ್ಠೆ ಇಟ್ಟುಕೊಂಡಿದ್ದಾರೆ. ಚಾಮರಾಜ ಕ್ಷೇತ್ರದಲ್ಲಿ ಹಿಡಿತ ಹೊಂದಿದ್ದಾರೆ. ಆದರೆ ಅವರು ಜೆಡಿಎಸ್‌ಗೆ ಬರಲ್ಲ. ಒಂದು ವೇಳೆ ಬಂದರೆ ನಾಯಕರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ. ಇನ್ನು ನರಸಿಂಹರಾಜ ಕ್ಷೇತ್ರದ ಅಭ್ಯರ್ಥಿ ಘೋಷಣೆ ಹಲವು ಕಾರಣಕ್ಕೆ ಬಾಕಿ ಇದೆ ಎಂದು ತಿಳಿಸಿದರು.
ಮಾರುತಿ ರಾವ್ ಪವಾರ್ ಅವರನ್ನು ಬಿಜೆಪಿಯಿಂದ ಸೆಳೆಯುವ ಅಗತ್ಯವಿಲ್ಲ. ನಮ್ಮಲ್ಲೇ ಸಮರ್ಥ ಅಭ್ಯರ್ಥಿಗಳು ಇದ್ದಾರೆ. ಜನ ಕಾಂಗ್ರೆಸ್, ಬಿಜೆಪಿ ಆಡಳಿತ ನೋಡಿದ್ದಾರೆ. ಜೆಡಿಎಸ್‌ಗೆ ಜನ ಒಂದು ಅವಕಾಶ ಕೊಡುತ್ತಾರೆ ಎಂದು
ವಿಶ್ವಾಸ ವ್ಯಕ್ತಪಡಿಸಿದರು.