ದೇವನಹಳ್ಳಿ: ವಿದೇಶದಿಂದ ಅಪರೂಪದ ಕಾಡುಪ್ರಾಣಿಗಳನ್ನು (exotic animals) ಬೆಂಗಳೂರಿಗೆ ಕದ್ದು ಸಾಗಿಸುತ್ತಿದ್ದ (wildlife trafficking) ವ್ಯಕ್ತಿಯೊಬ್ಬನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (kempegowda international airport) ಕಸ್ಟಮ್ಸ್ ಅಧಿಕಾರಿಗಳು (customs officers) ಬಂಧಿಸಿದ್ದಾರೆ. ಈತನ ಲಗ್ಗೇಜ್‌ನಲ್ಲಿ ಅಪರೂಪದ ಹಾವು, ಉಡ, ಆಮೆ, ಕಾಂಗರೂ ಮರಿ ಮುಂತಾದ ಸುಮಾರು 234 ವನ್ಯಜೀವಿಗಳು ಪತ್ತೆಯಾಗಿವೆ!
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಇದೆಲ್ಲ ಪತ್ತೆಯಾಯಿತು. ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಏರ್ಪೋರ್ಟ್ ಮೂಲಕ ಈ ಸರಿಸೃಪಗಳ ಸಾಗಣೆಗೆ (wildlife smuggling) ಯತ್ನಿಸಲಾಗಿತ್ತು. ಈ ಸಂಬಂಧ 32 ವರ್ಷದ ವ್ಯಕ್ತಿಯೊಬ್ಬನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಬ್ಯಾಂಕಾಕ್‌ನಿಂದ ಬಂದಿದ್ದ ವ್ಯಕ್ತಿಗೆ ಸಂಬಂಧಿಸಿದ 2 ಟ್ರ್ಯಾಲಿ ಬ್ಯಾಗ್‌ಗಳಲ್ಲಿ ಇವುಗಳನ್ನು ಬಚ್ಚಿಡಲಾಗಿತ್ತು. ಹೆಬ್ಬಾವು, ಊಸರವಳ್ಳಿ, ಇಗ್ವಾನಾ, ಅಲಿಗೇಟರ್, ಭಾರಿ ಪ್ರಮಾಣದ ಆಮೆಗಳು, ಹಾವುಗಳು ಸೇರಿದಂತೆ ಹಲವು ಸರೀಸೃಪಗಳು ಕಂಡುಬಂದವು. ಇವುಗಳನ್ನು ಕಂಡು ಅಧಿಕಾರಿಗಳೇ ಬೆಚ್ಚಿಬಿದ್ದರು. ಮರಿ ಕಾಂಗರೂ ಒಂದನ್ನು ಈತ ಸಾಗಿಸುತ್ತಿದ್ದು, ಈ ವೇಳೆ ಸೂಟ್‌ಕೇಸ್‌ನಲ್ಲಿಯೇ ಉಸಿರುಗಟ್ಟಿ ಅದು ಸಾವಿಗೀಡಾಗಿದೆ.
ಜೀವಂತ ಪ್ರಾಣಿಗಳನ್ನು ಕಸ್ಟಮ್ ಅಧಿಕಾರಿಗಳು ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ವ್ಯಕ್ತಿಯನ್ನು ಹೆಚ್ಚಿನ ವಿಚಾರಣೆ ಮಾಡಲಾಗುತ್ತಿದೆ.
ಬೆಂಗಳೂರಿನಲ್ಲಿ ಹಲವು ಅಪರೂಪದ ವಿದೇಶಿ ಮೂಲದ ವನ್ಯಜೀವಿಗಳನ್ನು (Exotic animals) ಸಾಕುವ ಹವ್ಯಾಸ ಹೊಂದಿದ್ದಾರೆ. ಇವುಗಳನ್ನು ಸರ್ಕಾರದ ಪರವಾನಗಿ ಪಡೆದು ಮಾತ್ರ ಸಾಕಬಹುದಾಗಿದೆ. ಇವುಗಳ ಸಾಗಣೆ ಮಾಡುವುದು, ದೇಶದೊಳಕ್ಕೆ ತರುವುದು ಭಾರತದ ಕಾನೂನು ರೀತ್ಯಾ ಗಂಭೀರ ಅಪರಾಧವಾಗಿದೆ. ಆದರೆ ಲಕ್ಷಾಂತರ ರೂಪಾಯಿ ಬೆಲೆಬಾಳುವ ಈ ವನ್ಯಜೀವಿಗಳನ್ನು ಶ್ರೀಮಂತರು ಸಾಕಲು ಇಷ್ಟಪಡುತ್ತಿದ್ದು, ಅವರಿಗಾಗಿ ಈ ಕಳ್ಳಸಾಗಣೆ ನಡೆಯುತ್ತದೆ ಎನ್ನಲಾಗಿದೆ.