Site icon Vistara News

Vande Bharat Express : ಬೆಳಗಾವಿಗೂ ವಂದೇ ಭಾರತ್‌ ವಿಸ್ತರಿಸಿ; ರೈಲ್ವೆ ಸಚಿವರಿಗೆ ಸಿಎಂ ಪತ್ರ

vande bharat express and CM Siddaramaiah

ಬೆಂಗಳೂರು: ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು (Vande Bharat Express) ಬೆಳಗಾವಿ‌ (Belagavi Region) ತನಕ ವಿಸ್ತರಣೆ ಮಾಡಿ ಎಂದು ರೈಲ್ವೆ ಸಚಿವರಿಗೆ (Minister of Railways) ಸಿಎಂ ಸಿದ್ದರಾಮಯ್ಯ (CM Siddaramaiah) ಪತ್ರ ಬರೆದು ಕೋರಿದ್ದಾರೆ.

ವಂದೇ ಭಾರತ್‌ ರೈಲನ್ನು ಬೆಳಗಾವಿ ವರೆಗೆ ವಿಸ್ತರಣೆ ಮಾಡುವುದರಿಂದ ವಿವಿಧ ಕಡೆ ಸಂಪರ್ಕ ಸೇರಿದಂತೆ ಹಲವು ರೀತಿಯಿಂದ ಅನುಕೂಲವಾಗುತ್ತದೆ. ಹೀಗಾಗಿ ಈ ಬಗ್ಗೆ ಕೂಡಲೇ ಕ್ರಮವಹಿಸಬೇಕು ಎಂದು ಕೇಂದ್ರ ರೈಲ್ವೆ ಮಂತ್ರಿ ಅಶ್ವಿನಿ ವೈಷ್ಣವ್‌ಗೆ ಪತ್ರದ ಮುಖೇನ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಬೆಂಗಳೂರಿನಿಂದ – ಹುಬ್ಬಳ್ಳಿ ಧಾರವಾಡ ತನಕ ಇರುವ ವಂದೇ ಭಾರತ್ ರೈಲು ಸಂಪರ್ಕ ಬೆಳಗಾವಿ ತನಕ ವಿಸ್ತರಣೆ ಮಾಡಬೇಕು. ವಂದೇ ಭಾರತ್ ರೈಲು ಸಂಪರ್ಕ ವಿಸ್ತರಣೆಯಿಂದ ಬೆಳಗಾವಿ ಜಿಲ್ಲೆಗೆ ಸಾಕಷ್ಟು ಅನುಕೂಲವಾಗಲಿದೆ. ಬೆಳಗಾವಿ ಜಿಲ್ಲೆಯತನಕ ವಿಸ್ತರಣೆ ಮಾಡಿದರೆ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಗೂ ಉತ್ತಮ ಸಂಪರ್ಕ ಕಲ್ಪಿಸಲು ಅನುಕೂಲವಾಗಲಿದೆ. ಹೀಗಾಗಿ ವಂದೇ ಭಾರತ್ ರೈಲು ಸಂಪರ್ಕವನ್ನು ಹುಬ್ಬಳ್ಳಿ – ಧಾರವಾಡದಿಂದ ಬೆಳಗಾವಿ ತನಕ ವಿಸ್ತರಣೆ ಮಾಡಿದರೆ ಅನಕೂಲವಾಗಲಿದೆ ಎಂದು ಪತ್ರದ ಮುಖೇನ ಮನವಿ ಮಾಡಿದ್ದಾರೆ.

ಸಿದ್ದರಾಮಯ್ಯ ಅವರ ಪತ್ರದ ಸಾರಾಂಶ ಏನು?

ಕರ್ನಾಟಕದ ವಾಯವ್ಯ ಭಾಗದ ಜಿಲ್ಲೆಯಾದ ಬೆಳಗಾವಿಯ ಕಿತ್ತೂರು ಕರ್ನಾಟಕ ಪ್ರದೇಶದಲ್ಲಿ ನೆಲೆಸಿರುವ ಲಕ್ಷಾಂತರ ಕನ್ನಡಿಗರ ಪರವಾಗಿ ನಾನು ನಿಮಗೆ ಈ ಪತ್ರವನ್ನು ಬರೆಯುತ್ತಿದ್ದೇನೆ. ಕೇಂದ್ರ ಸರ್ಕಾರವು ಬೆಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ ನಡುವೆ ಜೂನ್ 27, 2023 ರಂದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಪ್ರಾರಂಭಿಸಿದೆ. ಇದರಿಂದ ಧಾರವಾಡ, ಹುಬ್ಬಳ್ಳಿ ಮತ್ತು ದಾವಣಗೆರೆ ಭಾಗಗಳ ನಡುವೆ ಬೆಂಗಳೂರಿನ ಸಂಪರ್ಕವು ಸುಗಮಗೊಂಡಿದ್ದು, ಮಾದರಿ ಬದಲಾವಣೆಯನ್ನು ತರಲು ಕಾರಣವಾಗಿದೆ.

ಬೆಳಗಾವಿಯು ಕೈಗಾರಿಕೋದ್ಯಮಿಗಳು, ವಿದ್ಯಾರ್ಥಿಗಳು ಮತ್ತು ಪ್ರವಾಸಿಗರಿಗೆ ಅನುಕೂಲಕರ ಪ್ರದೇಶವಾಗಿದೆ. ಬೆಳಗಾವಿ ಭಾಗದಲ್ಲಿ ಸಕ್ಕರೆ ಕಾರ್ಖಾನೆ, ಅಲ್ಯೂಮಿನಿಯಂ ಮತ್ತು ಪ್ರಮುಖ ಕೈಗಾರಿಕೆಗಳನ್ನು ಹೊಂದಲಾಗಿದ್ದು, ಆರ್ಥಿಕವಾಗಿ ಬೆಳೆಯುತ್ತಿರುವ ಜಿಲ್ಲೆಯಾಗಿದೆ. ಇನ್ನು ಹಲವಾರು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಹೊರತುಪಡಿಸಿ ಆಟೋಮೊಬೈಲ್ ಮತ್ತು ಏರೋಸ್ಪೇಸ್ ಕೈಗಾರಿಕೆಗಳಿಗೂ ಈ ಜಿಲ್ಲೆ ಆಧಾರವಾಗಿದೆ. ಇನ್ನು ಇತರೆ ಮಾರ್ಗವನ್ನು ನೋಡುವುದಾದರೆ ಬೆಳಗಾವಿಯು ಸಾಂಸ್ಕೃತಿಕ ಮತ್ತು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಅತ್ಯುತ್ತಮ ಪ್ರವಾಸಿ ತಾಣವಾಗಿದೆ.

ಈ ಎಲ್ಲ ಕಾರಣಗಳಿಂದಾಗಿ ಬೆಂಗಳೂರು- ಹುಬ್ಬಳ್ಳಿ-ಧಾರವಾಡ ವಂದೇ ಭಾರತ್ ರೈಲು ಸೇವೆಯನ್ನು ಬೆಳಗಾವಿ ನಗರಕ್ಕೆ ವಿಸ್ತರಿಸಲು ನಾನು ನಿಮ್ಮನ್ನು ಕೋರುತ್ತೇನೆ. ಇದು ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವಿನ ಸಂಪರ್ಕ ಸಾಧಿಸಲು ಗಮನಾರ್ಹ ಕೊಡುಗೆಯನ್ನು ನೀಡುತ್ತದೆ.

ಇದನ್ನೂ ಓದಿ: Kannada Rajyotsava : ರಾಜ್ಯೋತ್ಸವ ದಿನ ಹಾಡಬೇಕಾದ 5 ಹಾಡುಗಳು ಇಲ್ಲಿವೆ; ಸಾಹಿತ್ಯ ಸಂಗೀತ ಸಹಿತ!

ಈ ಬಗ್ಗೆ ವಿಧಾನ ಪರಿಷತ್ ಸದಸ್ಯ ಪ್ರಕಾಶ್‌ ಹುಕ್ಕೇರಿ ಅವರೂ ತಮಗೆ ಪತ್ರ ಬರೆದಿದ್ದಾರೆ. ಹೀಗಾಗಿ ಈ ಬಗ್ಗೆ ಗಮನಹರಿಸಿ ಅಗತ್ಯಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಒತ್ತಾಯಿಸುತ್ತೇನೆ. ಸಕಾರಾತ್ಮಕ ಕ್ರಮಕ್ಕಾಗಿ ಎದುರು ನೋಡುತ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಅವರು ಪತ್ರದ ಮುಖೇನ ಕೋರಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version