ನವ ದೆಹಲಿ: ಇತ್ತೀಚಿನ ಕೆಲವು ದಿನಗಳಿಂದ ಮಕ್ಕಳ ಕಳ್ಳತನ ಪ್ರಕರಣಗಳು ವರದಿಯಾಗುತ್ತಿವೆ. ಮಕ್ಕಳನ್ನು ಅಪಹರಿಸಿ ಮತ್ತು ಅಂಗಾಂಗಗಳನ್ನು ಕದಿಯುವ ಫೋಟೋ, ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಷೇರ್ ಆಗುತ್ತಿವೆ. ಆದರೆ, ಸುದ್ದಿಯ ಅಸಲಿಯತ್ತು ಏನು(Fact Check), ನಿಜವಾಗಿಯೂ ಈ ರೀತಿಯಾಗುತ್ತಿದೆಯೇ? ಬನ್ನಿ ನೋಡೋಣ. ಮಕ್ಕಳ ಅಪಹರಣ ಹಾಗೂ ಅಂಗಾಂಗ ಕದಿಯುವ ಸಂಬಂಧ ಹರಿದಾಡುತ್ತಿರುವ ವಿಡಿಯೋಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ವಾಸ್ತವ ಬೇರೆಯದ್ದೇ ಎಂಬುದು ತಿಳಿದು ಬರುತ್ತದೆ. ಸಿಂಗರ್ ರೌನಕ್ ನವೀನ್ ಖಾತೆಯಲ್ಲಿ ಷೇರ್ ಆಗಿರುವ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಸತ್ಯ ಏನೆಂಬುದು ಗೊತ್ತಾಗುತ್ತದೆ. ಈ ವಿಡಿಯೋವನ್ನು ಪೂರ್ತಿ ನೋಡಿದಾಗಲೇ ನಿಜ ಏನೆಂಬುದು ತಿಳಿಯುತ್ತದೆ. ವಿಡಿಯೋ ಕೊನೆಯಲ್ಲಿ ಈ ವಿಡಿಯೋವನ್ನು ಜಾಗೃತಿಗಾಗಿ ಮಾಡಲಾಗಿದೆ ಎಂದು ಹೇಳುತ್ತಾರೆ. ಅಂದರೆ, ಈ ವಿಡಿಯೋ ನಿಜವೆಲ್ಲ ಎಂಬುದು ವೇದ್ಯವಾಗುತ್ತದೆ.
ಇದೇ ರೀತಿಯ ವಿಡಿಯೋವೊಂದನ್ನು ಯುಟ್ಯೂಬ್‌ನಲ್ಲಿ ಸೋಷಿಯಲ್ ಮೆಸೇಜ್ ಚಾನೆಲ್‌ನಲ್ಲಿ ಷೇರ್ ಮಾಡಲಾಗಿದೆ. ಆದರೆ, ಈ ವಿಡಿಯೋ ಸಂಪೂರ್ಣವಾಗಿ ಕಾಲ್ಪನಿಕವಾಗಿದ್ದು, ಜನ ಜಾಗೃತಿಗಾಗಿ ರೂಪಿಸಲಾಗಿದೆ ಎಂದು ಡಿಸ್‌ಕ್ಲೇಮರ್ ಹಾಕಲಾಗಿದೆ. ಆದರೂ, ಜನರು ಇದೊಂದು ಸತ್ಯವಾದ ವಿಡಿಯೋ ಎಂದುಕೊಂಡೇ ಷೇರ್ ಮಾಡುತ್ತಿದ್ದಾರೆ.
ಫೇಸ್‌ಬುಕ್‌ನಲ್ಲಿ ಇನ್ನೊಂದು ವಿಡಿಯೋ ಇದೇ ರೀತಿಯಲ್ಲಿ ಷೇರ್ ಆಗುತ್ತಿದೆ. ಅಳುತ್ತಿರುವ ಮಕ್ಕಳನ್ನು ಕಾಡಿನೊಳಗೆ ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಇದರಲ್ಲಿದೆ. ಇದರಲ್ಲೂ ಡಿಸ್‌ಕ್ಲೇಮರ್‌ಗಳಿದ್ದು, ಕಾಲ್ಪನಿಕ ಎಂದು ಬರೆಯಲಾಗಿದೆ. ಆದರೆ, ಇದು ಸತ್ಯ ಘಟನೆ ಎಂದು ಜನರು ಭಾವಿಸುತ್ತಿದ್ದಾರೆ.
ಸಾಧುಗಳು ಮಕ್ಕಳನ್ನು ಅಪಹರಿಸಿದರೆ?
ಮಕ್ಕಳನ್ನು ಸಾಧುಗಳು ಅಪಹರಿಸುತ್ತಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಸೆ.1ರಂದು ಉತ್ತರ ಪ್ರದೇಶದ ವಾರಾಣಸಿ ಪೊಲೀಸರು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಈ ಎಲ್ಲ ಸಾಧುಗಳ ಹೆಸರು ಮತ್ತು ವಿಳಾಸಗಳನ್ನು ಪರಿಶೀಲಿಸಿದಾಗ ಅವರಿಗೆ ಯಾವುದೇ ಅಪರಾಧ ಹಿನ್ನೆಲೆ ಇರಲಿಲ್ಲ ಎಂಬುದು ಖಚಿತವಾಯಿತು. ಬಳಿಕ ಅವರನ್ನು ಪೊಲೀಸರು ಬಿಡುಗಡೆ ಮಾಡಿದರು.
ಸಂಬಂಧವಿಲ್ಲದ ಫೋಟೋಗಳು ಷೇರ್
ಮಕ್ಕಳ ಅಪಹರಣ ಮಾಡುವ ಕೆಲವು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ವಿಡಿಯೋ ಕೂಡ ಇವೆ. ಯುಟ್ಯೂಬ್ ಮತ್ತು ಫೇಸ್‌ಬುಕ್ ಸೇರಿದಂತೆ ಕೆಲವು ಸೋಷಿಯಲ್ ಮೀಡಿಯಾಗಳಲ್ಲಿ ಷೇರ್ ಆಗುತ್ತಿರುವ ಇಂಥ ವಿಡಿಯೋ ಅಥವಾ ಫೋಟೋಗಳ ಸಾಚಾತವನ್ನು ಮೊದಲಿಗೆ ಪತ್ತೆ ಹಚ್ಚಬೇಕು. ನಿಜವೇ ಆಗಿದ್ದರೆ ಮಾತ್ರವೇ ಷೇರ್ ಮಾಡಬೇಕು. ಇಲ್ಲದಿದ್ದರೆ, ವಿನಾಕಾರಣ ಸದ್ದು ಗದ್ದಲ್ಲಕ್ಕೆ ತಾವು ಕಾರಣವಾಗುತ್ತೀರಿ ಎಂಬುದನ್ನು ಮರೆಯಬಾರದು. ಮಕ್ಕಳ ಕಳ್ಳತನಕ್ಕೂ, ಅಪಹರಣಕ್ಕೂ ಮತ್ತು ಷೇರ್ ಆಗುತ್ತಿರುವ ಫೋಟೋ, ವಿಡಿಯೋಗಳಿಗೆ ಸಂಬಂಧವೇ ಇಲ್ಲ ಎಂಬುದು ಫ್ಯಾಕ್ಟ್ ಚೆಕ್ ವೇಳೆ ತಿಳಿದು ಬಂದಿದೆ. ಕೆಲವು ಫೋಟೋ, ವಿಡಿಯೋಗಳ ನಮ್ಮ ದೇಶಕ್ಕೆ ಸಂಬಂಧಿಸಿದ್ದೇ ಅಲ್ಲ, ಇಲ್ಲವೇ ಡಿಸ್‌ಕ್ಲೇಮರ್‌ಗಳಿರುವ ವಿಡಿಯೋಗಳಿವೆ. ಹಾಗಾಗಿ, ಈ ಬಗ್ಗೆ ಹರಿದಾಡುತ್ತಿರುವ ಫೋಟೋ ಮತ್ತು ವಿಡಿಯೋಗಳು ಅಸಲಿ ಅಲ್ಲ.
ಇದನ್ನೂ ಓದಿ | ವಿಸ್ತಾರ Fact Check: ಶಾಲಾ ಪಠ್ಯ ಪುಸ್ತಕದ ಮೇಲೆ ಜಿಎಸ್‌ಟಿ ಹೇರಿದ ಕೇಂದ್ರ ಸರ್ಕಾರ?; ಸತ್ಯಾಂಶ ಏನು?