ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ (Shivamogga Airport) ಉದ್ಯೋಗಿಗಳು ಬೇಕಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ಓಡಾಡುತ್ತಿದೆ. ಇದನ್ನು ನಂಬಿ ಯಾರಾದರೂ ಅರ್ಜಿ ಸಲ್ಲಿಸಿದ್ದಾರೆ, ಸಲ್ಲಿಸಬೇಕು ಎಂದಿದ್ದರೆ ಹುಷಾರಾಗಿರಿ. ಏಕೆಂದರೆ ಇದು ನಕಲಿ ಪ್ರಕಟಣೆ ಎಂಬ ಸಂಗತಿ ಗೊತ್ತಾಗಿದೆ. ಈ ಬಗ್ಗೆ ಸಾರ್ವಜನಿಕರು ಎಚ್ಚರವಹಿಸಬೇಕೆಂದು ಜಿಲ್ಲಾ ರಕ್ಷಣಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಂಡಿದ್ದು, ವಿಮಾನ ನಿಲ್ದಾಣದಲ್ಲಿ ಏರ್ ಹೋಸ್ಟೆಸ್, ಬಿಸಿನೆಸ್ ಡೆವಲೆಪ್‍ಮೆಂಟ್ ಮ್ಯಾನೇಜರ್, ಏರ್‌ಲೈನ್ ಎಕ್ಸಿಕ್ಯೂಟಿವ್, ಸೆಕ್ಯೂರಿಟಿ ಗಾರ್ಡ್, ಹೆಲ್ಪರ್ಸ್, ಕ್ಲೀನರ್ಸ್, ಟೀಂ ಮೆಂಬರ್ಸ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಇದನ್ನೂ ಓದಿ: Drowned in pond: ಬಹಿರ್ದೆಸೆಗೆ ಹೋಗಿದ್ದ ಒಂದೇ ಕುಟುಂಬದ ಇಬ್ಬರು ಮಕ್ಕಳು ನೀರು ಪಾಲು
ಈ ಹುದ್ದೆಗಳಿಗೆ ವಿದ್ಯಾರ್ಹತೆ ಹಾಗೂ ವಯೋಮಿತಿಯನ್ನೂ ನೀಡಲಾಗಿದೆ. ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿ ಮತ್ತು ಡಿಪ್ಲೋಮಾ ಆದ 40 ವರ್ಷ ಒಳಗಿನ ಯುವಕ-ಯುವತಿಯರು ಬೇಕಾಗಿದ್ದಾರೆ ಎಂದು ಇ-ಮೇಲ್‌ನ ನಕಲಿ ಐಡಿ ಮೂಲಕ ಜಾಹೀರಾತು ನೀಡಲಾಗುತ್ತಿದೆ.
ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಯಾವುದೇ ಅಧಿಕೃತ ಪ್ರಕಟಣೆ ನೇಮಕಾತಿಗೆ ಸಂಬಂಧಿಸಿದಂತೆ ಹೊರಡಿಸಲಾಗಿಲ್ಲ. ಇದು ನಕಲಿಯಾಗಿದೆ. ಹೀಗಾಗಿ ಸಾರ್ವಜನಿಕರು ಈ ಬಗ್ಗೆ ಎಚ್ಚರವಹಿಸಬೇಕು ಎಂದು ಜಿಲ್ಲಾ ರಕ್ಷಣಾಧಿಕಾರಿಗಳು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದಾರೆ.
3050 ಮೀ. ಉದ್ದ, 45 ಮೀ. ಅಗಲದ ರನ್‍ವೇ
3050 ಮೀ. ಉದ್ದ, 45 ಮೀ. ಅಗಲದ ರನ್‍ವೇ, ಆರ್‌ಇಎಸ್‍ಎ, ಬಾಹ್ಯ (ಪೆರಿಫಿರಲ್) ರಸ್ತೆ, ಎಪ್ರಾನ್, ಟ್ಯಾಕ್ಸಿ ವೇ, ಕಾಂಪೌಂಡ್, ಕಾರ್ ಪಾರ್ಕಿಂಗ್ ಏರಿಯಾ, ಇತರೆ ಕಾಮಗಾರಿಗಳು ಹಾಗೂ 4340 ಚದರ ಮೀಟರ್ ಅಳತೆಯಲ್ಲಿ ಪ್ಯಾಸೆಂಜರ್ ಟರ್ಮಿನಲ್ ಬಿಲ್ಡಿಂಗ್, 2347 ಚದರ ಮೀಟರ್ ಅಳತೆಯಲ್ಲಿ ಎಟಿಸಿ ಕಟ್ಟಡ, 2 ಇಲೆಕ್ಟ್ರಿಕ್ ಸಬ್ ಸ್ಟೇಷನ್, 1 ಫೈಯರ್ ಸ್ಟೇಷನ್ ಸೇರಿದಂತೆ ಇನ್ನಿತರ ಸೌಕರ್ಯ ಇರಲಿದೆ.
ಇದನ್ನೂ ಓದಿ: Prajadhwani : ಜಂಟಿ ಯಾತ್ರೆ ಮುಗಿಯಿತು, ಇನ್ನು ಒಂಟಿ ಯಾತ್ರೆ: ಶುಕ್ರವಾರದಿಂದ ಸಿದ್ದು-ಡಿಕೆಶಿ ಶಕ್ತಿ ಪ್ರದರ್ಶನ ಆರಂಭ
ಫೆಬ್ರವರಿ ೨೭ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉದ್ಘಾಟನೆ ಮಾಡುವ ಈಗಾಗಲೇ ದಿನಾಂಕವನ್ನು ನಿಗದಿ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಂದ ಲೋಕಾರ್ಪಣೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ವಿಮಾನ ಹಾರಾಟದ ಅನುಮತಿಗೆ ಬೇಕಾದ ಪ್ರಕ್ರಿಯೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವ ಕೆಲಸಗಳೂ ನಡೆಯುತ್ತಿವೆ. ಈ ಮಧ್ಯೆ ಇದರ ಲಾಭ ಪಡೆಯಲು ಕೆಲವು ದುಷ್ಕರ್ಮಿಗಳು ಮುಂದಾಗಿದ್ದು, ಉದ್ಯೋಗದ ಹೆಸರಿನಲ್ಲಿ ವಂಚನೆ ಮಾಡಲು ಮುಂದಾಗಿದ್ದಾರೆ.