ಬೆಂಗಳೂರು: ರಾಜಧಾನಿಯಲ್ಲಿ ಮತ್ತೆ ಖೋಟಾ ನೋಟು (Fake note gang) ಚಲಾವಣೆ ಸದ್ದಿಲ್ಲದೆ ನಡೆಯುತ್ತಿದೆ. ಇದಕ್ಕಾಗಿ ಒಂದು ತಂಡವೇ ಗುಪ್ತಗಾಮಿನಿಯಂತೆ ಕೆಲಸ ಮಾಡುತ್ತಿದ್ದು, ಗರಿ ಗರಿ ನೋಟು ಕೊಟ್ಟು ಯಾಮಾರಿಸುತ್ತಿದೆ. ಜನಸಂದಣಿ ಇರುವ ಬ್ಯಾಂಕ್‌ಗಳೇ ಇವರ ಟಾರ್ಗೆಟ್ ಆಗಿದ್ದು, ಹಣ ಡೆಪಾಸಿಟ್ ಮಾಡಿ ಅಲ್ಲಿಂದ ಕಾಲ್ಕೀಳುತ್ತಾರೆ. ಈಗ ಈ ತಂಡದ ಮಹಿಳಾ ಆರೋಪಿಯೊಬ್ಬಳು ಪೊಲೀಸರ ಅತಿಥಿಯಾಗಿದ್ದಾಳೆ.
ಹೀಗೆ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಮಹಿಳೆ ಶೀಲಾ ಎಂಬಾಕೆಯನ್ನು ತಿಲಕ್ ನಗರ ಪೊಲೀಸರು ಬಂಧಿಸಿದ್ದು, ತೀವ್ರ ವಿಚಾರಣೆ ಕೈಗೊಂಡಿದ್ದಾರೆ. ಈಕೆ 10 ಸಾವಿರ ರೂಪಾಯಿಗೂ ಅಧಿಕ ಮೌಲ್ಯದ ಖೋಟಾ ನೋಟುಗಳನ್ನು ಚಲಾವಣೆ ಮಾಡಿದ್ದಾಳೆ. ಜಯನಗರದ ಕರ್ನಾಟಕ ಬ್ಯಾಂಕ್‌ನಲ್ಲಿ ಸಿಬ್ಬಂದಿಗೆ ಯಾಮಾರಿಸಿದ್ದ ಈಕೆ ಹಣವನ್ನು ಜಮೆ ಮಾಡಿದ್ದಳು. 100 ರೂ. ಮುಖಬೆಲೆಯ ನೋಟನ್ನು ಈಕೆ ಚಲಾವಣೆ ಮಾಡುತ್ತಿದ್ದಳು.
ಬ್ಯಾಂಕ್ ಸಿಬ್ಬಂದಿಗೆ ಅನುಮಾನ
ಬ್ಯಾಂಕ್ ಸಿಬ್ಬಂದಿಗೆ ಅನುಮಾನ ಬಂದು ಪರಿಶೀಲನೆ ವೇಳೆ ಪ್ರಕರಣ ಬಯಲಿಗೆ ಬಂದಿದೆ. ತಕ್ಷಣ ಎಚ್ಚೆತ್ತ ಸಿಬ್ಬಂದಿ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತಕ್ಷಣ ಕಾರ್ಯೋನ್ಮುಖರಾದ ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ ಶೀಲಾ, ಇನ್ನೊಬ್ಬಳ ಹೆಸರನ್ನು ಬಾಯಿಬಿಟ್ಟಿದ್ದು, ಆಕೆಯ ಶೋಧ ಕಾರ್ಯ ಮುಂದುವರಿದಿದೆ. ಅಲ್ಲದೆ, ಇದರ ಹಿಂದೆ ದೊಡ್ಡ ಜಾಲವೇ ಇದ್ದು, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಇದನ್ನೂ ಓದಿ | Honey trap | ಕ್ರೈಂ ಪೊಲೀಸರೆಂದು ₹ 14 ಲಕ್ಷ ಸುಲಿಗೆ ಮಾಡಿದ ದುಷ್ಕರ್ಮಿಗಳು