ಬಾಗಲಕೋಟೆ: ಕೆರೂರು ಗುಂಪು ಘರ್ಷಣೆ (Keruru Case) ಪ್ರಕರಣದ ಗಾಯಾಳುಗಳಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಂತ್ವನ ಹೇಳಿ ಆರ್ಥಿಕ ನೆರವನ್ನು ನೀಡಿದಾಗ, ಗಾಯಾಳುಗಳ ಕುಟುಂಬಸ್ಥರು ನಮಗೆ ದುಡ್ಡು ಬೇಡ, ಶಾಂತಿ ಬೇಕು ಎನ್ನುತ್ತ ಹಣವನ್ನು ಕಾರಿನ ಮೇಲೆ ಎಸೆದು ಅಸಮಾಧಾನ ಹೊರಹಾಕಿದ್ದಾರೆ.
ನಗರದ ಖಾಸಗಿ ಆಸ್ಪತ್ರೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಶುಕ್ರವಾರ ಭೇಟಿ ನೀಡಿ ಕೆರೂರು ಗಲಭೆ ಪ್ರಕರಣದಲ್ಲಿ ಗಾಯಗೊಂಡಿದ್ದ ಮಹಮ್ಮದ್ ಹನೀಫ್, ದಾವಲ ಮಲಿಕ್, ರಾಜೆಸಾಬ್, ರಫೀಕ್ ಆರೋಗ್ಯವನ್ನು ವಿಚಾರಿಸಿ, ತಲಾ 50 ಸಾವಿರ ರೂ.ಗಳಂತೆ ಒಟ್ಟು 2 ಲಕ್ಷ ರೂ. ನೀಡಲು ಮುಂದಾದರು. ಈ ವೇಳೆ ಗಾಯಾಳುಗಳ ಕುಟುಂಬಸ್ಥರು ಪರಿಹಾರ ಹಣ ಪಡೆಯಲು ನಿರಾಕರಿಸಿದರೂ ಸಿದ್ದರಾಮಯ್ಯ ಹಣ ನೀಡಿ ಅಲ್ಲಿಂದ ತೆರಳಿದರು.
ಸಿದ್ದರಾಮಯ್ಯ ವಾಪಸ್ ತೆರಳುತ್ತಿದ್ದಾಗ ಕಾರಿನ ಬಳಿ ಧಾವಿಸಿದ ಗಾಯಾಳುಗಳ ಕುಟುಂಬಸ್ಥರು, ನಮಗೆ ಹಣ ಬೇಡ ಶಾಂತಿ ಬೇಕು ಎಂದು ಹಣವನ್ನು ವಾಪಸ್ ನೀಡಲು ಮುಂದಾದರು. ಆಗ ಸಿದ್ದರಾಮಯ್ಯ ಕಾರು ಮುಂದೆ ಚಲಿಸಿತು. ಇದರಿಂದ ಕೋಫಗೊಂಡ, ಗಾಯಾಳು ಮಹಮ್ಮದ್ ಹನೀಫ್ ಪತ್ನಿ ರಜ್ಮಾ ಎಸ್ಕಾರ್ಟ್ ಕಾರಿಗೆ 2 ಲಕ್ಷ ರೂ. ಎಸೆದರು. ನಮಗೆ ಹಿಂದು ಮುಸ್ಲಿಮರು ನೆಮ್ಮದಿಯಿಂದ ಬದುಕವ ವಾತಾವರಣ ಬೇಕು ಎಂದು ಆಕ್ರೋಶ ಹೊರಹಾಕಿದರು.
ಕೆರೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಜುಲೈ 6ರಂದು ಎರಡು ಗುಂಪುಗಳ ನಡುವೆ ಘರ್ಷಣೆಯಾಗಿತ್ತು. ಗಲಭೆಯಲ್ಲಿ ಹಿಂದು ಜಾಗರಣ ವೇದಿಕೆಯ ನಾಲ್ವರು ಹಾಗೂ ಐವರು ಮುಸ್ಲಿಂರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಹೀಗಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಆಸ್ಪತ್ರೆಗೆ ಭೇಟಿ ನೀಡಿ ಗಾಯಳುಗಳ ಆರೋಗ್ಯ ವಿಚಾರಿಸಿದ್ದಾರೆ. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮನ್ನು ಭೇಟಿಯಾಗುವುದು ಬೇಡ ಎಂದು ಹಿಂದು ಜಾಗರಣ ವೇದಿಕೆಯ ಗಾಯಾಳುಗಳು ತಿಳಿಸಿದ್ದಾರೆ.
ಇದನ್ನೂ ಓದಿ | ಕೆರೂರು ಗಲಾಟೆ | ಪಟ್ಟಣದಲ್ಲಿ ಗುಂಪು ಘರ್ಷಣೆಗೆ ಹುಡುಗಿಯನ್ನು ಚುಡಾಯಿಸಿದ್ದು ಮೂಲಕಾರಣವೇ?