ಮಂಡ್ಯ: “ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಕಾಣೆಯಾಗಿದ್ದಾರೆ…” ಇಂಥದ್ದೊಂದು ಬ್ಯಾನರ್ ಈಗ ಮಂಡ್ಯದಲ್ಲಿ ಕಾಣಿಸುತ್ತಿದ್ದು, ರೈತ ಸಂಘದವರು ಉಸ್ತುವಾರಿ ಸಚಿವರನ್ನು ಹುಡುಕಿಕೊಡುವಂತೆ ಮನವಿ ಮಾಡುತ್ತಿದ್ದಾರೆ. ತಮ್ಮ ಬೇಡಿಕೆಗೆ ಸಚಿವರು ಸ್ಪಂದಿಸುತ್ತಿಲ್ಲ ಎಂಬುದು ರೈತ ಸಂಘದ ಆರೋಪವಾಗಿದ್ದು, ಈ ಸಂಬಂಧ ಪ್ರತಿಭಟನಾ (Farmer Protest) ಸ್ಥಳದಲ್ಲಿ ಬ್ಯಾನರ್‌ವೊಂದನ್ನು ಪೊಲೀಸ್ ಬ್ಯಾರಿಕೇಡ್‌ಗೆ ನೇತು ಹಾಕಲಾಗಿದ್ದು, ಅದರಲ್ಲಿ ಸಚಿವ ಗೋಪಾಲಯ್ಯ ಕಾಣೆಯಾಗಿದ್ದಾರೆ ಎಂದು ಫೋಟೊ ಹಾಕಿ ಆಕ್ರೋಶ ಹೊರಹಾಕಿದ್ದಾರೆ.
ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಕಳೆದ ೧೭ ದಿನಗಳಿಂದ ರೈತರು ಅಹೋರಾತ್ರಿ ಧರಣಿಯನ್ನು ಕೈಗೊಂಡಿದ್ದಾರೆ. ಕಬ್ಬು ಮತ್ತು ಹಾಲಿಗೆ ವೈಜ್ಞಾನಿಕ ಬೆಲೆಯನ್ನು ನಿಗದಿ ಮಾಡಬೇಕು. ಆ ಮೂಲಕ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ನಮ್ಮ ಹೋರಾಟಕ್ಕೆ ಸರ್ಕಾರ ಸ್ಪಂದಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಬೇಕು ಎಂದು ರೈತರು ಒತ್ತಾಯಿಸಿದ್ದರು. ಆದರೆ, ಇದುವರೆಗೂ ಸಚಿವ ಗೋಪಾಲಯ್ಯ ಅವರು ಬಂದು ವಿಚಾರಿಸಿಲ್ಲ ಎಂಬುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಮಂಡ್ಯ ಬಂದ್‌ಗೆ ಚಿಂತನೆ
ಧರಣಿ ಪ್ರಾರಂಭವಾಗಿ ಎರಡು ವಾರ ಗತಿಸಿ ಮೂರನೇ ವಾರಕ್ಕೆ ಕಾಲಿಟ್ಟರೂ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ರೈತ ಸಂಘಟನೆಯವರು ಮಂಡ್ಯ ಬಂದ್ ಮಾಡಲು ಚಿಂತನೆ ನಡೆಸಿದ್ದು, ಯಾವ ರೀತಿಯಲ್ಲಿ ಹೋರಾಟ ಇರಬೇಕು ಎಂಬ ನಿಟ್ಟಿನಲ್ಲಿ ಶೀಘ್ರವೇ ಸಭೆ ಕರೆದು ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ | Sugar Cane | ಪ್ರತಿ ಟನ್ ಕಬ್ಬಿಗೆ ₹500 ಪ್ರೋತ್ಸಾಹಧನ ನೀಡುವಂತೆ ಸಿಎಂಗೆ ಶಾಸಕ ದಿನೇಶ್ ಗೂಳಿಗೌಡ ಮನವಿ