ತಾಳಿಕೋಟೆ (ವಿಜಯಪುರ): ರೈತರಿಗೆ ತಮ್ಮ ಮನೆಯ ಸಾಕು ಪ್ರಾಣಿಗಳ ಮೇಲೆ ಅದೆಷ್ಟು ಮಮತೆ ಇರುತ್ತದೆ ಎಂದರೆ ಅದಕ್ಕೆ ಸಣ್ಣ ಸಂಕಟವಾದರೂ ಇವರೇ ನೋವು ಅನುಭವಿಸುತ್ತಾರೆ. ಅದರಲ್ಲೂ ಜೀವನವನ್ನು ತಮ್ಮ ಜತೆಗೇ ಕಳೆದು ಬದುಕಿನ ಭಾಗವಾಗುವ ಒಂದು ಪ್ರಾಣಿ ಪ್ರಾಣ ಕಳೆದುಕೊಂಡರೆ ಮನೆ ಮಂದಿಯನ್ನೇ ಕಳೆದುಕೊಂಡಂತೆ ಸಂಕಟಪಡುತ್ತಾರೆ.
ಮನುಷ್ಯ ಸಂಬಂಧಗಳು ನಾಶವಾಗುತ್ತಿದ್ದರೂ ಪ್ರಾಣಿಗಳ ಜತೆಗಿನ ಮಾನವೀಯ ಸಂಬಂಧಗಳು ಈಗಲೂ ಉಳಿದಿದೆ ಎನ್ನುವುದಕ್ಕೆ ಉದಾಹರಣೆ ಬಿಳೇಭಾವಿ ಗ್ರಾಮದಲ್ಲಿ ನಡೆದ ಒಂದು ಘಟನೆ.
ವಿಜಯಪುರ ಜಿಲ್ಲೆ ತಾಳಿಕೋಟೆ ತಾಲೂಕಿನ ಬಿಳೇಭಾವಿ ಗ್ರಾಮದ ರೈತ ಶಾಂತಪ್ಪ ಇಣಚಗಲ್ಲ ಅವರ ತಂದೆ ಒಂದು ಎತ್ತನ್ನು ಅದು ಸಣ್ಣ ಕರುವಾಗಿರುವಾಗಲೇ ತಂದು ಸಾಕಿದ್ದರು. ಮನೆ ಮಗನಂತೆ ಅದೂ ಕೂಡಾ ಇತರ ಮಕ್ಕಳ ಜತೆ ಬೆಳೆದಿದೆ. ಈಗ ಅದಕ್ಕೆ ಸುಮಾರು ೨೫ ವರ್ಷ.
ಈ ೨೫ ವರ್ಷಗಳಲ್ಲಿ ಅದು ತನ್ನ ಬದುಕನ್ನು ಈ ಮನೆಗಾಗಿ ಸವೆಸಿದೆ. ಹೊಲವನ್ನು ಉತ್ತಿದೆ. ಕೃಷಿಯಲ್ಲಿ ಸಹಾಯ ಮಾಡಿದೆ. ಇಂಥ ಎತ್ತು ತನ್ನ ೨೫ನೇ ವಯಸ್ಸಿನಲ್ಲಿ ವಯೋಸಹಜ ಸಮಸ್ಯೆಗಳಿಂದ ಮೃತಪಟ್ಟಿದೆ.
ಕುಟುಂಬದ ಸದಸ್ಯರ ಪ್ರೀತಿಗೆ ಪಾತ್ರವಾಗಿದ್ದ ಈ ಎತ್ತು ಎರಡು ದಿನಗಳ ಹಿಂದೆ ಅಸುನೀಗಿದಾಗ ಇಡೀ ಕುಟುಂಬ ಒಬ್ಬ ಸದಸ್ಯನನ್ನು ಕಳೆದುಕೊಂಡಂತೆ ದುಃಖಿಸಿತ್ತು. ಮನೆಯ ಎಲ್ಲರಿಗು ಮೂಕ ಪ್ರಾಣಿಯೊಂದಿಗಿದ್ದ ಅವಿನಾಭಾವ ಸಂಬಂಧ ಆ ರೀತಿ ಇತ್ತು.
ರೈತ ಶಾಂತಪ್ಪ ಇಣಚಗಲ್ ಅವರು ಎತ್ತಿನ ಅಂತ್ಯಕ್ರಿಯೆಯನ್ನು ಕೂಡಾ ಅಷ್ಟೇ ಆತ್ಮೀಯವಾಗಿ, ಭಕ್ತಿಯಿಂದ ನಡೆಸಿದರು. ಮೃತಪಟ್ಟ ಎತ್ತನ್ನು ಮನುಷ್ಯರು ಮೃತಪಟ್ಟಾಗ ಸಿಂಗರಿಸುವಂತೆ ಸಿಂಗರಿಸಿದರು. ಗ್ರಾಮದ ಆತ್ಮೀಯ ಜನರನ್ನು ಸೇರಿಸಿದರು. ಗ್ರಾಮದಲ್ಲಿರುವ ಭಾಗಮ್ಮನ ದೇವಸ್ಥಾನದ ಮುಂದೆ ಶವವನ್ನು ಇರಿಸಿ ವಿಶೇಷ ಪೂಜೆಗೈದು ಮೆರವಣಿಗೆಯನ್ನು ಮಾಡಿದರು. ಅಂತ್ಯದಲ್ಲಿ ಇದರ ಅಂತ್ಯಕ್ರಿಯೆನ್ನು ತಮ್ಮ ತಂದೆಯ ಗೋರಿಯ ಪಕ್ಕದಲ್ಲಿಯೇ ನೆರವೇರಿಸಿದರು. ಬಾಯಿ ಬಾರದ ಮೂಕ ಪ್ರಾಣಿಯನ್ನು ಮನುಷ್ಯರಂತೆಯೇ ಗೌರವಿಸಿದ ಶಾಂತಪ್ಪ ಅವರ ಈ ಮಾನವೀಯ ನಡೆಗೆ ಎಲ್ಲರಿಂದಲೂ ಶ್ಲಾಘನೆ ದೊರೆತಿದೆ.