Site icon Vistara News

Cauvery water dispute : ರೈತ ಸಂಘಟನೆಯಿಂದ ತಕರಾರು ಅರ್ಜಿ; ನಾಳೆ ಸುಪ್ರೀಂನಲ್ಲಿ ಕಾವೇರಿ ವಿಚಾರಣೆ

Cauvery KRS Dam and supreme court

ನವ ದೆಹಲಿ: ಕಾವೇರಿ ನೀರು ಹಂಚಿಕೆ ವಿವಾದಕ್ಕೆ (Cauvery water dispute) ಸಂಬಂಧಪಟ್ಟಂತೆ ದಿನಕ್ಕೆ 5000 ಕ್ಯೂಸೆಕ್ ನೀರು ಬಿಡುಗಡೆಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (Cauvery Water Management Authority) ಆದೇಶ ಮಾಡಿರುವ ಹಿನ್ನೆಲೆಯಲ್ಲಿ ಬುಧವಾರ (ಸೆಪ್ಟೆಂಬರ್‌ 06) ಸುಪ್ರೀಂ ಕೋರ್ಟ್‌ನಲ್ಲಿ (Supreme Court) ವಿಚಾರಣೆ ನಡೆಯಲಿದೆ. ಇದೇ ವೇಳೆ ರೈತ ಸಂಘಟನೆಗಳು (Farmers organisations) ಸಹ ಸುಪ್ರೀಂ ಕೋರ್ಟ್‌ನಲ್ಲಿ ಮಂಗಳವಾರ ತಕರಾರು ಅರ್ಜಿ ಸಲ್ಲಿಸಿದ್ದು, ನಾವು ಬೆಳೆಗೆ ನೀರು ಕೇಳುತ್ತಿಲ್ಲ. ಕುಡಿಯಲು ಸಮರ್ಪಕ ನೀರು ಬೇಕು ಎಂದು ಅರ್ಜಿಯಲ್ಲಿ ಉಲ್ಲೇಖಿಸಿವೆ. ಈ ಹಿನ್ನೆಲೆಯಲ್ಲಿ ವಿಚಾರಣೆ ಮತ್ತಷ್ಟು ಕುತೂಹಲ ಮೂಡಿಸಿದೆ.

ಈ ಹಿಂದೆ ಶುಕ್ರವಾರಕ್ಕೆ (ಸೆಪ್ಟೆಂಬರ್‌ 8) ವಿಚಾರಣೆ ನಿಗದಿಯಾಗಿತ್ತು. ಬಳಿಕ ಬುಧವಾರಕ್ಕೆ ನಿಗದಿ ಮಾಡಲಾಗಿದೆ. 5000 ಸಾವಿರ ಕ್ಯೂಸೆಕ್ ನೀರು ಹರಿಸಬೇಕೆಂಬ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಕರ್ನಾಟಕ ಪ್ರಶ್ನೆ ಮಾಡಿ ತಕರಾರು ಅರ್ಜಿಯನ್ನು ಸಲ್ಲಿಸಿದೆ. ಈ ಬಗ್ಗೆ ಈಗಾಗಲೇ ಮರು ಪರಿಶೀಲನೆ ಅರ್ಜಿಯೊಂದನ್ನು ಪ್ರಾಧಿಕಾರಕ್ಕೆ ಸಲ್ಲಿಸಿದೆ. ಈ ಅಂಶವನ್ನು ಕೋರ್ಟ್ ಗಮನಕ್ಕೆ ಕರ್ನಾಟಕ ತರಲಿದೆ.

ಇದನ್ನೂ ಓದಿ: Namma Metro : ಖಾಸಗಿ ವಾಹನ ಬಳಸುವ ಶೇ. 95 ಬೆಂಗಳೂರಿಗರು ಮೆಟ್ರೋಗೆ ಶಿಫ್ಟ್‌ ಆಗಲು ರೆಡಿ!

ಪ್ರಾಧಿಕಾರದ ಹಿಂದಿನ ಆದೇಶ ಪಾಲನೆ ಮಾಡಿದ್ದೇವೆ. ಆದೇಶದ ಉಲ್ಲಂಘನೆ ಆಗಿಲ್ಲ ಎಂದು ಕರ್ನಾಟಕವು ಬುಧವಾರ ಸುಪ್ರೀಂ ಕೋರ್ಟ್‌ನಲ್ಲಿ ವಿವರಣೆ ನೀಡಲಿದೆ. ರಾಜ್ಯದಲ್ಲಿ ನೀರಿಲ್ಲ ಎಂಬ ವಾಸ್ತವ ವಿವರಣೆ ಯನ್ನು ನೀಡಲು ಸಿದ್ಧತೆ ಮಾಡಿಕೊಂಡಿತ್ತು. ಅಂಕಿ-ಅಂಶಗಳ ಸಹಿತ ವಾದ ಮಂಡಿಸಲು ಸಿದ್ಧವಾಗಿದೆ. ಕೇಂದ್ರ ಸರ್ಕಾರದ ತಜ್ಞರ ತಂಡವನ್ನು ಕರ್ನಾಟಕಕ್ಕೆ ಕಳುಹಿಸಿಕೊಡಬೇಕು ಮತ್ತು ಜಲಾಶಯಗಳ ವಾಸ್ತವ ಸ್ಥಿತಿಯನ್ನು ಅಧ್ಯಯನ ಮಾಡಬೇಕು ಎಂದು ರಾಜ್ಯ ಇದೇ ವೇಳೆ ಒತ್ತಾಯ ಮಾಡಲಿದೆ.

ಹೆಚ್ಚುವರಿ ನೀರು ಕೇಳಲಿರುವ ತಮಿಳುನಾಡು!

ಇದೇ ವೇಳೆ ತಮಿಳುನಾಡು ಸಹ ಹೆಚ್ಚುವರಿ ನೀರು ಬಿಡುಗಡೆಗೆ ಒತ್ತಾಯಿಸಲಿದೆ. ಜೂನ್‌ನಿಂದ ಈಗಿನ ತನಕ ಬಾಕಿ ಇರುವ ನೀರಿನ ಬಿಡುಗಡೆಗೂ ಒತ್ತಾಯ ಮಾಡಲಿದೆ. ಇದಕ್ಕೆ ಪ್ರತಿರೋಧ ಒಡ್ಡಲು ರಾಜ್ಯ ಸರ್ಕಾರ ಸಿದ್ಧತೆಯನ್ನು ಕೈಗೊಂಡಿದೆ.

ತಮಿಳುನಾಡಿನ ಕಾವೇರಿ ಕಣಿವೆಯಲ್ಲಿ ಈಶಾನ್ಯ ಮಳೆ ಶುರುವಾಗಿದೆ. ಇದರಿಂದ ಅಂತರ್ಜಲ ಪ್ರಮಾಣವೂ ಹೆಚ್ಚಾಗಿದೆ. ಮೆಟ್ಟೂರು ಜಲಾಶಯದ ಹೊರ ಹರಿವು ಆಗಸ್ಟ್‌ 28ರಿಂದ 10 ಸಾವಿರ ಕ್ಯೂಸೆಕ್‌ನಿಂದ 8 ಸಾವಿರ ಕ್ಯೂಸೆಕ್‌ಗೆ ಇಳಿದಿದೆ. ಆದ ಕಾರಣ ಕರ್ನಾಟಕದಿಂದ ತಮಿಳುನಾಡಿಗೆ ಬಿಡಬೇಕಾದ ನೀರಿನ ಪ್ರಮಾಣವನ್ನು 5 ಸಾವಿರ ಕ್ಯೂಸೆಕ್‌ನಿಂದ 3 ಸಾವಿರ ಕ್ಯೂಸೆಕ್‌ಗೆ ತಗ್ಗಿಸಬೇಕು. ಕರ್ನಾಟಕ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಿಗೆ ಲಿಖಿತ ಮನವಿ ಸಲ್ಲಿಸಿದೆ. ಈ ಬಗ್ಗೆಯೂ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ವೇಳೆ ಕರ್ನಾಟಕ ಪ್ರಸ್ತಾಪ ಮಾಡಲಿದೆ.

ರೈತ ಸಂಘದಿಂದ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ

ಇದೇ ವೇಳೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ರೈತ ಸಂಘಟನೆಗಳು ಕಾನೂನು ಹೋರಾಟಕ್ಕೆ ಮುಂದಾಗಿವೆ. ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ಸುಪ್ರಿಂ ಕೋರ್ಟ್‌ನಲ್ಲಿ ಮಂಗಳವಾರ ಅರ್ಜಿಯನ್ನೂ ಸಲ್ಲಿಸಲಾಗಿದೆ.

ಇದನ್ನೂ ಓದಿ: Human Animal Conflict : 15 ದಿನದಲ್ಲಿ ವನ್ಯಜೀವಿ -ಮಾನವ ಸಂಘರ್ಷಕ್ಕೆ 11 ಜನ ಸಾವು; ತಡೆಗೆ 500 ಕೋಟಿ ರೂ. ಅನುದಾನಕ್ಕೆ ಮನವಿ

ನಾವು ಬೆಳೆಗೆ ನೀರು ಕೇಳುತ್ತಿಲ್ಲ, ಬದಲಿಗೆ ಕುಡಿಯುವ ನೀರಿಗೆ ಆದ್ಯತೆ ನೀಡಬೇಕಿದೆ. ತಮಿಳುನಾಡು ಕುರುವೈ ಬೆಳೆಗೆ ನೀರು ಕೇಳುತ್ತಿದೆ. ನಮಗೆ ಕುಡಿಯುವ ನೀರಿಗೆ ಬೇಕು, ಅವರು ಬೆಳೆಗೆ ಕೇಳುತ್ತಾ ಇದ್ದಾರೆ. ಮಂಡ್ಯ, ಮೈಸೂರು ಸುತ್ತಮುತ್ತ 3 ದಿನಕ್ಕೊಮ್ಮೆ ಕುಡಿಯಲು ನೀರು ಬಿಡಲಾಗುತ್ತಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ತಂಡವು ತಮಿಳುನಾಡಿಗೆ ಭೇಟಿ ನೀಡಿ ಪರಿಶೀಲಿಸಿದೆ. ಕರ್ನಾಟಕಕ್ಕೆ ಭೇಟಿ ನೀಡಿಲ್ಲ. ನಮ್ಮ ಅಳಲು, ನೋವು ನೋಡಿಲ್ಲ. ಸಂಕಷ್ಟದಲ್ಲಿ ನೀರು ಬಿಡುವುದರಿಂದ ರೈತರ ಮೇಲೆ ಸಾಮಾಜಿಕ-ಆರ್ಥಿಕ ದುಷ್ಪರಿಣಾಮಗಳು ಉಂಟಾಗಲಿವೆ. ಅಲ್ಲದೆ, ಕರ್ನಾಟಕ ಸರ್ಕಾರ ಕೂಡ ಕಾವೇರಿ ಜಲಾನಯನ ಪ್ರದೇಶದ ಕೆಲ ತಾಲೂಕುಗಳ ಬರ ಘೋಷಣೆ ಮಾಡಲು ಸಿದ್ಧತೆ ನಡೆಸಿದೆ ಎಂಬ ಅಂಶವನ್ನು ರೈತ ಸಂಘಟನೆಗಳು ಅರ್ಜಿಯಲ್ಲಿ ಉಲ್ಲೇಖಿಸಿವೆ.

Exit mobile version