Site icon Vistara News

Mysore Dasara : ಕಾವೇರಿ ಸಂಕಷ್ಟ, ಬರದ ಮಧ್ಯೆ ಅದ್ಧೂರಿ ದಸರಾ ವಿರೋಧಿಸಿ ರೈತರ ಪ್ರತಿಭಟನೆ

Mysore Dasara and Farmer protest

ಮೈಸೂರು: ರಾಜ್ಯದಲ್ಲಿ ಈ ಬಾರಿ ಎಂದೂ ಕೇಳರಿಯದ ಬರಗಾಲ (Karnataka Drought) ಆವರಿಸಿದೆ. ಕಾವೇರಿ ಕೊಳ್ಳದಲ್ಲೂ ಸಮರ್ಪಕವಾಗಿ ನೀರಿಲ್ಲ. ಈ ಮಧ್ಯೆ ತಮಿಳುನಾಡಿಗೆ ನೀರು (Cauvery water to Tamil Nadu) ಬಿಡುವ ಪರಿಸ್ಥಿತಿ ಇದೆ. ರಾಜ್ಯದ 236 ತಾಲೂಕುಗಳ ಪೈಕಿ 216ರಲ್ಲಿ ಬರಗಾಲದ ಪರಿಸ್ಥಿತಿ ಎದುರಾಗಿದೆ. ರೈತರಿಗೆ ಸಮರ್ಪಕವಾಗಿ ವಿದ್ಯುತ್‌ ಕೊಡಲಾಗುತ್ತಿಲ್ಲ. ಈ ಎಲ್ಲದರ ಮಧ್ಯೆ ಅದ್ಧೂರಿ ದಸರಾ ಸಂಭ್ರಮ (Mysore Dasara) ಬೇಕಿತ್ತೇ ಎಂದು ರೈತರು ಪ್ರಶ್ನೆ ಮಾಡಿದ್ದಲ್ಲದೆ, ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನೂ (Farmers Protest) ಮಾಡಿದ್ದಾರೆ.

ಬರಗಾಲದಲ್ಲೂ ಅದ್ದೂರಿ ದಸರಾ ನಡೆಸುತ್ತಿರುವ ಸರ್ಕಾರದ ಕ್ರಮವನ್ನು ರೈತ ಸಂಘ, ಕಬ್ಬು ಬೆಳೆಗಾರರ ಸಂಘ‌ದವರು ಖಂಡಿಸಿದ್ದಾರೆ. ಮೈಸೂರು- ಬೆಂಗಳೂರು ಹೆದ್ದಾರಿಯಲ್ಲಿ (Mysuru Bengaluru Highway) ಪ್ರತಿಭಟನೆಗೆ ಮುಂದಾಗಿದ್ದ 40ಕ್ಕೂ ಹೆಚ್ಚು ರೈತರನ್ನು ಪೊಲೀಸರು ಬಂಧಿಸಿದ್ದಾರೆ. ಮಣಿಪಾಲ ಆಸ್ಪತ್ರೆ ವೃತ್ತದ ಬಳಿ ರಸ್ತೆ ತಡೆಗೆ ಯತ್ನ ಮಾಡಿದ್ದರು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ರೈತರು ಬಂಧಿಸಿದ್ದಾರೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ರಾಜ್ಯ ಸರ್ಕಾರ ಹಾಗೂ ಮಂತ್ರಿ ಮಂಡಲದ ವಿರುದ್ಧ ಕಿಡಿಕಾರಲಾಗಿದೆ.

ಈ ವೇಳೆ ಮಾತನಾಡಿದ ಕುರುಬೂರು ಶಾಂತಕುಮಾರ್‌, ರೈತರ ಕಬ್ಬಿನ ಬಾಕಿ ಬಿಲ್‌ ಬಂದಿಲ್ಲ. ಸರಳ, ಸಾಂಸ್ಕೃತಿಕ ದಸರಾ ಹೆಸರಿನಲ್ಲಿ ಮೋಜು ಮಾಡಲಾಗುತ್ತಿದೆ. ಈ ಸರ್ಕಾರ ಅದ್ಧೂರಿಯಾಗಿ ದಸರೆಗೆ ಖರ್ಚು ಮಾಡುತ್ತಿದೆ. ಆದರೆ, ಇಲ್ಲಿ ನಮ್ಮ ರೈತರು ಸಂಕಷ್ಟದಲ್ಲಿದ್ದಾರೆ. ವಿದ್ಯುತ್‌ ಇಲ್ಲದೆ ರಾಜ್ಯ ಕತ್ತಲಲ್ಲಿ ಇದ್ದರೆ, ಪಂಪ್‌ ಸೆಟ್‌ ಮೂಲಕ ನೀರು ಹಾಯಿಸಲಾಗದೆ ಬೆಳೆಗಳು ಒಣಗುತ್ತಿವೆ. ಕಾವೇರಿ ವಿಷಯವಾಗಿಯೂ ಸಮರ್ಥ ವಾದ ಮಂಡಿಸದೆ ತಮಿಳುನಾಡಿಗೆ ದಾರಾಳವಾಗಿ ನೀರು ಬಿಡಲಾಗುತ್ತಿದೆ. ಈಗ ಮೈಸೂರಿಗೆ ಮಂತ್ರಿಮಂಡಲವೇ ಬಂದಿದ್ದು, ಜನರ ಸಂಕಷ್ಟವನ್ನು ಮರೆಯಲಾಗಿದೆ ಎಂದು ಆಕ್ರೋಶವನ್ನು ಹೊರಹಾಕಿದರು.

ರಸ್ತೆ ತಡೆ ಯತ್ನ, ಸೆರೆ

ಮೈಸೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆಗೆ ಕುರುಬೂರ್ ಶಾಂತಕುಮಾರ್ ಹಾಗೂ ರೈತರು ಮುಂದಾದರು. ಆಗ ಪೊಲೀಸರು ಕಬ್ಬು ಬೆಳೆಗಾರರನ್ನು ಬಂಧಿಸಿದರು. ಒಟ್ಟು ಎರಡು ತಂಡದಲ್ಲಿ ಪ್ರತಿಭಟನೆ ನಡೆಸಿದ್ದು, ಎಲ್ಲರನ್ನೂ ಪೊಲೀಸರು ಬಂಧಿಸಿದ್ದಾರೆ.

ಮೊದಲು ಮೈಸೂರು – ಬೆಂಗಳೂರು ರಸ್ತೆಯಲ್ಲಿರುವ ಮಣಿಪಾಲ್‌ ಆಸ್ಪತ್ರೆ ಸರ್ಕಲ್‌ನಲ್ಲಿ ಬೆಳಗ್ಗೆ ಪ್ರತಿಭಟನೆ ನಡೆಸಲು ರೈತರು ಮುಂದಾಗುತ್ತಿದ್ದಂತೆ ಪೊಲೀಸರು ಬಂಧಿಸಿ ಸಿಎಆರ್ ಪೆರೇಡ್ ಗ್ರೌಂಡ್‌ಗೆ ಕರೆದೊಯ್ದರು. ಕೊನೆಗೆ ರೈತರು ಅಲ್ಲಿಯೇ ಕುಳಿತು ಜಿಲ್ಲಾಡಳಿತ ಹಾಗೂ ಸರ್ಕಾರದ ವಿರುದ್ಧ ಧಿಕ್ಕಾರಗಳನ್ನು ಕೂಗಿದರು.

ಮತ್ತೊಂದೆಡೆ ರೈತ ಮುಖಂಡ ಕಿರಗಸೂರು ಶಂಕರ್ ನೇತೃತ್ವದ ರೈತರ ತಂಡವು ಟಿ. ನರಸೀಪುರ – ಮೈಸೂರು ರಸ್ತೆಯ ಮಧ್ಯಭಾಗದಲ್ಲಿ ಕೀಳನಪುರ ಪ್ರತಿಭಟನೆಗೆ ಮುಂದಾಗಿತ್ತು. ಅಲ್ಲಿಯೂ ಸಹ ಪೊಲೀಸರು ರೈತರನ್ನು ಬಂಧಿಸಿ ನಂಜನಗೂಡು ಠಾಣೆಗೆ ಕರೆದೊಯ್ದರು. ಚಾಮರಾಜನಗರದಿಂದ ಬರುತ್ತಿದ್ದ ಮತ್ತೊಂದು ರೈತರ ತಂಡವನ್ನು ಮೈಸೂರಿನ ಹೊರವಲಯದಲ್ಲಿಯೇ ಪೊಲೀಸರು ಬಂಧಿಸಿದರು.

Exit mobile version