ಚಿಕ್ಕೋಡಿ: ವಿದ್ಯುತ್ ಪ್ರವಹಿಸಿ ತಂದೆ-ಮಗ ದಾರುಣವಾಗಿ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಿಕ್ಕಟ್ಟಿ ಗ್ರಾಮದಲ್ಲಿ ನಡೆದಿದೆ. ಬೋರವೆಲ್ ವಾಟರ್ ವಾಲ್ವ್ ತಿರುಗಿಸುವ ವೇಳೆ ವಿದ್ಯುತ್ ಸ್ಪರ್ಶಿಸಿದ್ದರಿಂದ (Electric Shock) ಅವಘಡ ನಡೆದಿದೆ.
ಮಲ್ಲಿಕಾರ್ಜುನ ಸದಾಶಿವ ಪೂಜಾರಿ (32), ಪ್ರೀತಮ್ ಮಲ್ಲಿಕಾರ್ಜುನ ಪೂಜಾರಿ (7) ಮೃತರು. ತಂದೆಗೆ ವಿದ್ಯುತ್ ತಗುಲಿದ್ದನ್ನು ನೋಡಿ ಮಗ ರಕ್ಷಣೆಗೆ ಬಂದಾಗ ಆತನಿಗೂ ವಿದ್ಯುತ್ ಪ್ರವಹಿಸಿದೆ, ಇದರಿಂದ ಸ್ಥಳದಲ್ಲಿ ತಂದೆ-ಮಗ ಕೊನೆಯುಸಿರೆಳೆದಿದ್ದಾರೆ. ಘಟನಾ ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ | Pension Eligibility : ಎರಡನೇ ಪತ್ನಿಗೆ ಪಿಂಚಣಿ ಅಧಿಕಾರವಿಲ್ಲ; ಹೈಕೋರ್ಟ್ ಮಹತ್ವದ ತೀರ್ಪು
ಬಾಮೈದನ ಕುತ್ತಿಗೆಗೆ ಚಾಕು ಇರಿತ
ಆನೇಕಲ್: ಪತ್ನಿಯ ತಮ್ಮನ ಕುತ್ತಿಗೆಗೆ ಚಾಕು ಇರಿದಿರುವ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಸಿಡಿಹೊಸಕೋಟೆಯಲ್ಲಿ ನಡೆದಿದೆ. ಪುನೀತ್ ರಾಜ್ ಹಲ್ಲೆಗೊಳಗಾದ ಯುವಕ. ಮಣಿಕಂಠ ಹಲ್ಲೆ ಮಾಡಿದ ಆರೋಪಿ.
ಪುನೀತ್ ರಾಜ್ ಅಕ್ಕ ಶ್ವೇತಾಳನ್ನು ಆಂಧ್ರಪ್ರದೇಶದ ಪನ್ನೂರಿನ ಮಣಿಕಂಠ ಮದುವೆಯಾಗಿದ್ದ. ಮದುವೆಯಾದ ಇಪ್ಪತ್ತು ದಿನಕ್ಕೇ ಶ್ವೇತಾ ತವರು ಮನೆ ಸೇರಿದ್ದಳು. ನಂತರ ಗಂಡನ ವರ್ತನೆ ಸರಿ ಇಲ್ಲ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಳು. ಮಣಿಕಂಠ ಹಾಗೂ ಅವರ ಕುಟುಂಬದವರ ಮೇಲೆ ದೂರು ನೀಡಲಾಗಿತ್ತು
ಮಣಿಕಂಠನಿಗೆ ಡಿವೋರ್ಸ್ ನೋಟಿಸ್ ಸಹ ಕಳುಹಿಸಿದ್ದಳು. ಇದೇ ಕಾರಣಕ್ಕೆ ರೊಚ್ಚಿಗೆದ್ದ ಮಣಿಕಂಠ ಹಾಗೂ ಸ್ನೇಹಿತ ಸಿಡಿಹೊಸಕೋಟೆಯ ಮನೆಗೆ ನುಗ್ಗಿ ಪತ್ನಿಯ ತಮ್ಮನ ಕುತ್ತಿಗೆ ಸೀಳಿದ್ದಾರೆ. ಮುಖಕ್ಕೆ ಮಾಸ್ಕ್, ಕೈಗೆ ಗ್ಲೌಸ್ ಹಾಕಿಕೊಂಡು ಬಂದಿದ್ದ ಅಸಾಮಿ, ಪುನೀತ್ ಕತ್ತು ಕೊಯ್ದು ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಪುನೀತ್ನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ