ಮಂಗಳೂರು: ಸುರತ್ಕಲ್ನಲ್ಲಿ ನಡೆದ ಮೊಹಮ್ಮದ್ ಫಾಜಿಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಐವರನ್ನು ತೀವ್ರವಾಗಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಶುಕ್ರವಾರ ಸಂಜೆ ಇವರನ್ನು ವಶಕ್ಕೆ ಪಡೆಯಲಾಗಿದ್ದು, ಇವರೇ ಕೊಲೆಯಲ್ಲಿ ಭಾಗಿಯಾದ ಪ್ರಮುಖ ಹಂತಕರು ಎಂಬ ಮಾತು ಕೇಳಿಬರುತ್ತಿದೆ.
ಸುರತ್ಕಲ್ನ ಮಂಗಳಪೇಟೆ ನಿವಾಸಿಯಾಗಿರುವ ಫಾಜಿಲ್ನನ್ನು ಜುಲೈ ೨೭ರಂದು ಬಟ್ಟೆ ಅಂಗಡಿಯೊಂದರ ಮುಂದೆ ನಿಂತಿದ್ದಾಗ ಅಟ್ಟಾಡಿಸಿ ಕೊಲೆ ಮಾಡಲಾಗಿತ್ತು. ಪ್ರಸಕ್ತ ಪೊಲೀಸರ ವಶದಲ್ಲಿರುವ ಇವರೆಲ್ಲರೂ ಸುರತ್ಕಲ್ ಸುತ್ತಮುತ್ತಲಿನ ಪರಿಸರದವರೇ ಆಗಿದ್ದಾರೆ. ಒಂದೊಮ್ಮೆ ಇವರೇ ಕೊಲೆಗಾರರು ಎಂದು ಖಚಿತವಾದಲ್ಲಿ ಶನಿವಾರ ರಾತ್ರಿಯೊಳಗೆ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಗಳಿವೆ.
೨೧ಕ್ಕೂ ಅಧಿಕ ಮಂದಿ ವಿಚಾರಣೆ
ಮೊಹಮ್ಮದ್ ಫಾಜಿಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕಳೆದ ಮೂರು ದಿನದಲ್ಲಿ ೨೧ಕ್ಕೂ ಅಧಿಕ ಮಂದಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಇದು ಸುರತ್ಕಲ್ ಭಾಗದಲ್ಲಿ ಆಕ್ಷೇಪಕ್ಕೂ ಕಾರಣವಾಗಿತ್ತು. ಯಾವುದೇ ಆಧಾರಗಳಿಲ್ಲದೆ ಕಂಡ ಕಂಡವರನ್ನು ಎಳೆದುಕೊಂಡು ಹೋಗಿ ಕೂಡಿ ಹಾಕಲಾಗುತ್ತಿದೆ ಎಂದು ಹೇಳಲಾಗಿತ್ತು. ಸ್ವತಃ ಅಲ್ಲಿನ ಶಾಸಕರಾಗಿರುವ ಭರತ್ ಶೆಟ್ಟಿ ಅವರು ಇದರ ವಿರುದ್ಧ ಸಿಡಿದೆದ್ದಿದ್ದರು
ಅಲೋಕ್ ಕುಮಾರ್ ಹೇಳಿದ್ದೇನು?
ಈ ನಡುವೆ, ಫಾಜಿಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಅನಗತ್ಯವಾಗಿ ಹಲವರನ್ನು ವಶಕ್ಕೆ ಪಡೆಯಲಾಗಿದೆ ಎಂಬ ಆರೋಪಗಳಿಗೆ ಉತ್ತರ ನೀಡಿರುವ ಎಡಿಜಿಪಿ ಅಲೋಕ್ ಕುಮಾರ್ ಅವರು, ಒಂದು ಕೊಲೆ ನಡೆದಾಗ ಈ ರೀತಿ ನಡೆಯುವುದು ಸಾಮಾನ್ಯ. ಕೆಲವು ಶಂಕಿತರ ವಿಚಾರಣೆ ನಡೆಸುವುದು, ಸಾಕ್ಷ್ಯಗಳನ್ನು ಸಂಗ್ರಹಿಸುವುದು ಸಹಜವಾದ ಪ್ರಕ್ರಿಯೆ. ನಿಜವಾದ ಆರೋಪಿಗಳನ್ನು ಹಿಡಿಯುವ ಪ್ರಕ್ರಿಯೆಯಲ್ಲಿ ಇವೆಲ್ಲವೂ ಇರುತ್ತದೆ ಎಂದು ಹೇಳಿದರು.
ಐದು ತಂಡಗಳಿಂದ ಕಾರ್ಯಾಚರಣೆ
ಫಾಜಿಲ್ ಕೊಲೆ ಆರೋಪಿಗಳ ಪತ್ತೆಗಾಗಿ ಐದು ಪೊಲೀಸ್ ತಂಡಗಳು ಕಾರ್ಯಾಚರಿಸುತ್ತಿವೆ. ಈ ಹಿಂದೆ ದಕ್ಷಿಣ ಕನ್ನಡದಲ್ಲಿದ್ದು ಡಿಸಿಪಿಯಾಗಿದ್ದು ಪ್ರಸಕ್ತ ಹಾಸನದಲ್ಲಿ ಎಸ್ಪಿಯಾಗಿರುವ ಹರಿರಾಮ್ ಶಂಕರ್ ಅವರನ್ನು ಕೂಡಾ ಕರೆಸಿಕೊಳ್ಳಲಾಗಿದ್ದು, ಅದರ ಸಹಾಯವನ್ನು ಪಡೆಯಲಾಗುತ್ತಿದೆ. ಗುರುವಾರ ರಾತ್ರಿ ಕೊಲೆಯಾದ ಸಂದರ್ಭದಲ್ಲಿ ಆಗಿರುವ ಫೋನ್ ಸಂಭಾಷಣೆ, ಮೆಸೇಜ್ಗಳ ಮೇಲೆ ಕಣ್ಣಿಟ್ಟು ವಿಚಾರಣೆ ನಡೆದಿದೆ.
ಫಾಜಿಲ್ ಅವರ ಮೇಲೆ ಯಾರಿಗಾದರೂ ದ್ವೇಷವಿತ್ತೇ ಎನ್ನುವ ವಿಚಾರದಲ್ಲಿ ಗಮನ ನೀಡಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಇದು ವೈಯಕ್ತಿಕ ದ್ವೇಷಕ್ಕಿಂತಲೂ ಸಮಾಜ ವಿದ್ರೋಹಿಗಳ ಕೆಲಸವಾಗಿರುವ ಸಾಧ್ಯತೆಗಳೇ ಹೆಚ್ಚು.
ಫಾಜಿಲ್ನ ಮನೆಯವರು ಹೇಳುವ ಪ್ರಕಾರ, ಆತನ ಮೇಲೆ ಯಾರಿಗೂ ದ್ವೇಷವಿರಲಿಲ್ಲ. ಯಾರನ್ನೋ ಕೊಲೆ ಮಾಡಲು ಬಂದವರು ಈತನ ಹತ್ಯೆ ನಡೆಸಿದ್ದಾರೆ. ಈ ನಡುವೆ, ಸಮಾಜ ವಿದ್ರೋಹಿ ಶಕ್ತಿಗಳು ಮುಸ್ಲಿಂ ಎನ್ನುವ ಕಾರಣಕ್ಕೆ ಈ ಕೊಲೆ ಮಾಡಿರುವ ಸಾಧ್ಯತೆಯೂ ಇದೆ. ಈ ಎಲ್ಲ ಕೋನಗಳಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದು, ಸತ್ಯ ವಿಚಾರ ಒಂದೆರಡು ದಿನಗಳಲ್ಲಿ ಬಯಲಾಗಲಿದೆ.
ಫಾಜಿಲ್ ಹತ್ಯೆಗೆ ಮಿಸ್ಟೇಕನ್ ಐಡೆಂಟಿಟಿ ಕಾರಣವೇ?: ಪೊಲೀಸರಲ್ಲಿ ಹೀಗೊಂದು ಅನುಮಾನ