ಮೈಸೂರು: ನೇಮಕಾತಿ ಅಕ್ರಮದಲ್ಲಿ ಭಾಗಿಯಾದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ನರಸಿಂಹರಾಜ ಸಂಚಾರ ಠಾಣೆಯ ಇನ್ಸ್‌ಪೆಕ್ಟರ್ ಅಶ್ವಿನಿ ಅನಂತಪೂರ ಅವರನ್ನು ಅಮಾನತುಗೊಳಿಸಿ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಸೋಮವಾರ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ಲೋಕಸೇವಾ ಆಯೋಗ ಪ್ರಥಮ ದರ್ಜೆ ಸಹಾಯಕರ ನೇಮಕಾತಿ ಪ್ರಕ್ರಿಯೆ ನಡೆಸಿತ್ತು. ಬಸವರಾಜ ಎಂಬವರಿಗೆ ಎಫ್ಡಿಎ ಹುದ್ದೆ ಕೊಡಿಸುವುದಾಗಿ ಭರವಸೆ ನೀಡಿದ್ದ ಅಶ್ವಿನಿ ಅನಂತಪೂರ, ಬಾಗಲಕೋಟೆ ಜಿಲ್ಲೆಯ ಸಂಗಮೇಶ ಝಳಕ ಎಂಬವರೊಂದಿಗೆ ಹಣದ ವ್ಯವಹಾರ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಸಂಗಮೇಶ ಝಳಕಿ ಹಾಗೂ ಅಶ್ವಿನಿ ಅವರು ನಡೆಸಿದ್ದಾರೆ ಎನ್ನಲಾದ ಆಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇಬ್ಬರ ನಡುವೆ ಹಣಕಾಸಿನ ವ್ಯವಹಾರ ನಡೆದಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಅವರೂ ಸುದ್ದಿಗೋಷ್ಠಿ ನಡೆಸಿ ದಾಖಲೆಗಳನ್ನು ಬಿಡುಗಡೆ ಮಾಡಿದ್ದರು.
ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮಗಳಲ್ಲಿ ಪ್ರಕಟವಾದ ಮಾಹಿತಿಯನ್ನು ಎಸಿಪಿ ಪರಿಶೀಲನೆ ನಡೆಸಿದ್ದರು.
ಅಶ್ವಿನಿ ಅವರು ಅಕ್ರಮದಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಎಸಿಪಿ ವರದಿ ನೀಡಿದ್ದರು. ಇದರ ಆಧಾರದ ಮೇಲೆ, ಕರ್ನಾಟಕ ರಾಜ್ಯ ಪೊಲೀಸ್(ಶಿಸ್ತು ನಡಾವಳಿಗಳು) ನಿಯಮಗಳು- 1965/1989ರ ನಿಯಮ-5ರನ್ವಯ ಅಶ್ವಿನಿ ಅವರನ್ನು ಇಲಾಖಾ ವಿಚಾರಣೆ ಬಾಕಿ ಇರುವಂತೆ ಅಮಾನತಿನಲ್ಲಿ ಇಡಲಾಗಿದೆ.
ಅಮಾನತಿಗೆ ಷರತ್ತುಗಳೇನು?Ga
ಅಮಾನತು ಅವಧಿಯಲ್ಲಿ ಜೀವನಾಧಾರ ಭತ್ಯೆ ನೀಡಲಾಗುವುದು. ಅಮಾನತು ಅವಧಿಯಲ್ಲಿ ಯಾವುದೇ ಖಾಸಗಿ ವೃತ್ತಿ ಅಥವಾ ವಹಿವಾಟು ಮಾಡಬಾರದು. ಈ ರೀತಿ ಮಾಡಿದರೆ ಕೆಲಸದಲ್ಲಿ ಪಾಲ್ಗೊಂಡಿರುವುದು ಕಂಡುಬಂದರೆ ಪ್ರತ್ಯೇಕವಾಗಿ ಸೂಕ್ತ ಶಿಸ್ತಿನ ಕ್ರಮ ಕೈಗೊಳ್ಳುವುದರ ಜತೆಗೆ ನೀಡಲಾದ ಜೀವನಾಧಾರ ಭತ್ಯೆಯನ್ನು ತಡೆ ಹಿಡಿಯಲಾಗುವುದು. ಅಮಾನತು ಅವಧಿಯಲ್ಲಿ ಪೂರ್ವಾನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡಬಾರದು. ರಜೆ ಸೌಲಭ್ಯಗಳನ್ನು ಪಡೆಯುವಂತಿಲ್ಲ. ಅಲ್ಲದೆ ಯಾವುದೇ ಖಾಸಗಿ ವೃತ್ತಿ ಇತ್ಯಾದಿಯಲ್ಲಿ ತೊಡಗಿಲ್ಲ ಎಂಬ ಬಗ್ಗೆ ಪ್ರಮಾಣ ಪತ್ರವನ್ನು ಪ್ರತಿ ತಿಂಗಳೂ ನೀಡಬೇಕು ಎಂದು ಸೂಚಿಸಲಾಗಿದೆ.