ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಚನ್ನಸಂದ್ರದಲ್ಲಿ ಹೆಣ್ಣು ಭ್ರೂಣ ಹತ್ಯೆ ನಡೆಸುತ್ತಿದ್ದ (Female Foeticide) ಆಸ್ಪತ್ರೆಗಳ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಭ್ರೂಣ ಲಿಂಗ ಪತ್ತೆ ಮಾಡುತ್ತಿದ್ದ ಆಸ್ಪತ್ರೆಯನ್ನು ಸೀಝ್ ಮಾಡಿದ್ದಾರೆ. ದಾಳಿಯ ವೇಳೆ ಗರ್ಭದಿಂದ ಕೆಲವೇ ಗಂಟೆಗಳ ಮೊದಲು ತೆಗೆದ ಭ್ರೂಣವೂ ಪತ್ತೆಯಾಗಿದೆ.
ಚೆನ್ನಸಂದ್ರದ SPG ಆಸ್ಪತ್ರೆಯಲ್ಲಿ ನಡೆಸಿದ ದಾಳಿಯ ವೇಳೆ, ಸುಮಾರು 10ರಿಂದ 15 ವಾರಗಳ ಭ್ರೂಣವನ್ನು ತೆಗೆದು ಆಸ್ಪತ್ರೆಯ ಆಪರೇಶನ್ ಥಿಯೇಟರ್‌ನ ಕಬೋರ್ಡ್‌ನಲ್ಲಿ ಇಟ್ಟಿದ್ದನ್ನು ಕಂಡು ಅಧಿಕಾರಿಗಳೇ ದಂಗಾದರು. ಸದನದಲ್ಲಿ ಸದ್ದು ಮಾಡಿದ್ದ, ಮಂಡ್ಯದಲ್ಲಿನ ಭ್ರೂಣ ಹತ್ಯೆ ಪ್ರಕರಣ ಇನ್ನೂ ಸದ್ದು ನಿಲ್ಲಿಸುವ ಮುನ್ನವೇ ಬೆಂಗಳೂರು ಗ್ರಾಮಾಂತರಲ್ಲಿ ಮತ್ತೊಂದು ಪ್ರಕರಣವನ್ನ ಆರೋಗ್ಯಾಧಿಕಾರಿಗಳು ಬಯಲಿಗೆಳೆದಿದ್ದಾರೆ.
ಈ ರೀತಿ ಅಧಿಕಾರಿಗಳ ತಪಾಸಣೆಯಲ್ಲಿ ನೇರವಾಗಿ ಭ್ರೂಣ ಪತ್ತೆಯಾಗಿರುವುದು ಇದೇ ಮೊದಲ ಬಾರಿಯಾಗಿದ್ದು, ಅಧಿಕಾರಿಗಳು ಇನ್ನಷ್ಟು ತೀವ್ರವಾಗಿ ಶೋಧ ಕಾರ್ಯ ನಡೆಸಿದ್ದಾರೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಆಸ್ಪತ್ರೆ ಮಾಲೀಕ ಶ್ರೀನಿವಾಸ್ ಪರಾರಿಯಾಗಿದ್ದು, ಕೃತ್ಯವೆಸಗಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳು ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಆಸ್ವತ್ರೆಯಲ್ಲಿ ದಾಖಲೆಗಳನ್ನು ಪರಿಶೀಲಿಸಿ ವಶಕ್ಕೆ ಪಡೆದು ಆಸ್ಪತ್ರೆ ಸೀಲ್ ಮಾಡಲಾಗಿದೆ.
ಅಧಿಕಾರಿಗಳ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ತಿರುಮಲಶೆಟ್ಟಿ ಹಳ್ಳಿ ಪೊಲೀಸರು ಮೂವರು ಆಸ್ಪತ್ರೆ ಸಿಬ್ಬಂದಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪರಾರಿಯಾಗಿರುವ ಮಾಲೀಕ ಶ್ರೀನಿವಾಸ್‌ಗೆ ಬಲೆ ಬೀಸಿದ್ದಾರೆ.
ಇದಲ್ಲದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಲವು ಕ್ಲಿನಿಕ್ ಮತ್ತು ಆಸ್ಪತ್ರೆಗಳ ಮೇಲೆ ದಾಳಿ ನಡೆಸಲಾಗಿದೆ. ನೆಲಮಂಗಲ, ಹೋಸಕೋಟೆ, ದೊಡ್ಡಬಳ್ಳಾಪುರ, ದೇವನಹಳ್ಳಿ ತಾಲ್ಲೂಕಿನ ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್ ಗಳ ಮೇಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಆರೋಗ್ಯ ಇಲಾಖೆಯಿಂದ ದಾಳಿ ನಡೆದಿದೆ. ನೆಲಮಂಗಲದಲ್ಲಿ 5 ಕ್ಲಿನಿಕ್, ದೊಡ್ಡಬಳ್ಳಾಪುರದ ಒಂದು ಕ್ಲಿನಿಕ್ ಸೀಜ್ ಮಾಡಲಾಗಿದೆ. ವೈದ್ಯಕೀಯ ಪರವಾನಿಗೆ ಇಲ್ಲದೇ ನಡೆಸುತ್ತಿದ್ದ ಕ್ಲಿನಿಕ್‌ಗಳನ್ನು ಬಂದ್ ಮಾಡಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇದನ್ನೂ ಓದಿ: Female Foeticide: ಹೆಣ್ಣು ಭ್ರೂಣ ಹತ್ಯೆ ತಡೆಗೆ ರಾಜ್ಯ ಮಟ್ಟದ ಟಾಸ್ಕ್‌ಫೋರ್ಸ್: ದಿನೇಶ್ ಗುಂಡೂರಾವ್