ಬೆಂಗಳೂರು: ಭ್ರೂಣ ಲಿಂಗ ಪತ್ತೆ ದಂಧೆಯ ಜಾಲವೊಂದನ್ನು ಬೆಂಗಳೂರಿನ ಬೈಯಪ್ಪನಹಳ್ಳಿ ಪೊಲೀಸರು (Baiyappanahalli Police) ಭೇದಿಸಿದ್ದಾರೆ. ಗರ್ಭಿಣಿಯರ ಭ್ರೂಣ ಲಿಂಗ ಪತ್ತೆ (Fetus Gender Detection) ಹಚ್ಚಿ, ಹೆಣ್ಣು ಮಗು ಎಂದು ಗೊತ್ತಾದರೆ ಗರ್ಭಪಾತ ಮಾಡಿಸುತ್ತಿದ್ದ ಜಾಲ ಇದಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ಜತೆಗೆ ಗರ್ಭಿಣಿಯರನ್ನೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಬಂಧಿತ ಆರೋಪಿಗಳನ್ನು ಶಿವಲಿಂಗೇಗೌಡ, ನಯನ್ ಕುಮಾರ್, ನವೀನ್ ಕುಮಾರ್ ಹಾಗೂ ವೀರೇಶ್ ಎಂದು ಗುರುತಿಸಲಾಗಿದೆ. ದಂಧೆಗೆ ವೀರೇಶ್ ಚಿಕ್ಕಪ್ಪ ಡಾ. ಮಲ್ಲಿಕಾರ್ಜುನ್ ಕೂಡ ಸಾಥ್ ನೀಡಿದ್ದಾರೆ ಎಂದು ತಿಳಿದುಬಂದಿದೆ. ಹಲವು ವರ್ಷಗಳಿಂದ ಆರೋಪಿಗಳು ಹೆಣ್ಣು ಭ್ರೂಣ ಲಿಂಗ ಪತ್ತೆ ದಂಧೆಯಲ್ಲಿ ತೊಡಗಿದ್ದು, ಭ್ರೂಣ ಲಿಂಗ ಪತ್ತೆಗೆ 15 ಸಾವಿರ ರೂ.ನಿಂದ 20 ಸಾವಿರ ರೂ. ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.
ಮಂಡ್ಯದ ಆಲೆಮನೆಯೇ ಸ್ಕ್ಯಾನಿಂಗ್ ಸೆಂಟರ್
ಗರ್ಭಿಣಿಯರನ್ನು ಕರೆದುಕೊಂಡು ಹೋಗುತ್ತಿದ್ದ ಆರೋಪಿಗಳು, ಮಂಡ್ಯದ ಆಲೆಮನೆಯಲ್ಲಿಯೇ ಸ್ಕ್ಯಾನಿಂಗ್ ಮಾಡುತ್ತಿದ್ದರು. ಭ್ರೂಣ ಲಿಂಗ ಪತ್ತೆ ಕುರಿತು ಇತ್ತೀಚೆಗೆ ಬೈಯಪ್ಪನಹಳ್ಳಿ ಪೊಲೀಸರಿಗೆ ಮಾಹಿತಿ ದೊರೆತಿದ್ದು, ಇನ್ಸ್‌ಪೆಕ್ಟರ್ ಪ್ರಶಾಂತ್ ಅವರ ತಂಡವು ಕಾರ್ಯಾಚರಣೆ ಕೈಗೊಂಡಿದೆ. ಹಳೇ ಮದ್ರಾಸ್ ರಸ್ತೆ ಮಾರ್ಗವಾಗಿ ಗರ್ಭಿಣಿಯರನ್ನು ಕರೆದುಕೊಂಡು ಹೋಗುವ ವೇಳೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಗರ್ಭಿಣಿಯ ಹೊಟ್ಟೆ ಸೀಳಿ, ಭ್ರೂಣದ ರುಂಡ ಕತ್ತರಿಸಿದ ಹಮಾಸ್ ಉಗ್ರರು; ಇವರೆಂಥಾ ರಾಕ್ಷಸರು!
ಮಂಡ್ಯ, ಮೈಸೂರು ಹಾಗೂ ಬೆಂಗಳೂರಿನ ಗರ್ಭಿಣಿಯರನ್ನು ಮಂಡ್ಯಕ್ಕೆ ಕರೆದುಕೊಂಡು ಹೋಗಿ, ಅಲ್ಲಿ ಅವರು ಲಿಂಗ ಪತ್ತೆ ಸ್ಕ್ಯಾನಿಂಗ್ ಮಾಡುತ್ತಿದ್ದರು. ಇದಕ್ಕಾಗಿ ಭಾರಿ ಹಣ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ. ಹಳೇ ಮದ್ರಾಸ್ ರಸ್ತೆ ಬಳಿ ಪೊಲೀಸರು ದಾಳಿ ನಡೆಸುತ್ತಲೇ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದಾರೆ. ಇದೇ ವೇಳೆ ಕಾರನ್ನು ಹಿಂಬಾಲಿಸಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಹಾಗೆಯೇ, ಗರ್ಭಿಣಿಯರನ್ನು ಕೂಡ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.