ಬೆಂಗಳೂರು: ಬಿಟ್ ಕಾಯಿನ್ ಹಗರಣ ಮತ್ತೆ ಮುನ್ನೆಲೆಗೆ ಬಂದಿದೆ. ಇದರಿಂದ ದೊಡ್ಡ, ದೊಡ್ಡ ತಲೆಗಳಿಗೂ ಕೂಡ ಕಂಟಕ ಎದುರಾಗುವ ಸಾಧ್ಯತೆ ಇದೆ. ಸಿಸಿಬಿ ಅಧಿಕಾರಿಗಳು ನಡೆಸಿದ ಬಿಟ್ ಕಾಯಿನ್ ಪ್ರಕರಣದ (Bitcoin Case) ತನಿಖೆ ಹಳ್ಳ ಹಿಡಿದಿದೆ. ಆದರೆ, ಇದೀಗ ಸಾಕ್ಷ್ಯ ನಾಶ ಆರೋಪದಲ್ಲಿ ಈ ಹಿಂದಿನ ಸಿಸಿಬಿ ಅಧಿಕಾರಿಗಳ (CCB officials) ವಿರುದ್ಧವೇ ಎಫ್‌ಐಆರ್ ದಾಖಲಾಗಿದೆ.
ಸಿಐಡಿ ಅರಣ್ಯ ಸಂಚಾರದಳದ ಡಿವೈಎಸ್ಪಿ ಹಾಗೂ ಎಸ್‌ಐಟಿ (ವಿಶೇಷ ತನಿಖಾ ದಳ) ಸದಸ್ಯರಾಗಿರುವ ಡಿವೈಎಸ್‌ಪಿ ರವಿ ಶಂಕರ್ ಅವರು ಕಾಟನ್ ಪೇಟೆ ಪೊಲೀಸ್ ಠಾಣೆಗೆ ಬಿಟ್ ಕಾಯಿನ್ ಸಂಬಂಧ ದೂರು ನೀಡಿದ್ದಾರೆ. ಹೀಗಾಗಿ ಪ್ರಕರಣದಲ್ಲಿ ಒಟ್ಟು ಆರು ಆರೋಪಿಗಳ ವಿರುದ್ಧ ಕೇಸ್ ದಾಖಲಾಗಿದೆ. ಬಿಟ್ ಕಾಯಿನ್ ಹಗರಣ ಸದ್ದು ಮಾಡುತ್ತಿದ್ದಂತೆ ದಾಖಲಾದ ಮೊದಲ ಎಫ್‌ಐಆರ್ ಇದಾಗಿದೆ.
ಡಿವೈಎಸ್ಪಿ ದಾಖಲಿಸಿದ ದೂರಿನ ಅನ್ವಯ ಸಿಸಿಬಿಯಲ್ಲಿ ಬಿಟ್ ಕಾಯಿನ್ ಹಗರಣದ ತನಿಖೆ ನಡೆಸಿದ್ದ ತನಿಖಾಧಿಕಾರಿ ಸೇರೊ ಹಲವರು ಆರೋಪಿಗಳಾಗಿದ್ದಾರೆ. ಜತೆಗೆ 120 ಬಿ ಅಡಿಯಲ್ಲಿ ಒಳಸಂಚು ಆರೋಪ ಕೂಡ ಇದೆ. 2 ಪೆನ್ ಡ್ರೈವ್, ಹಾರ್ಡ್ ಡಿಸ್ಕ್ ಹಾಗೂ ಆ್ಯಪ್ ಮ್ಯಾಕ್ ಬುಕ್‌ನಲ್ಲಿ ಮೂಲ ಫೈಲ್‌ಗಳನ್ನು ಅಳಿಸಲಾಗಿದೆ (destruction of evidence). ಅದೇ ಸ್ಥಳದಲ್ಲಿ ಹೆಚ್ಚುವರಿಯಾಗಿ ಫೈಲ್‌ಗಳನ್ನು ಸೃಷ್ಟಿಸಲಾಗಿದೆ. ಪ್ರಕರಣದ ತನಿಖೆಯನ್ನ ಸಿಸಿಬಿ ಕೈಗೆತ್ತಿಕೊಂಡ ಬಳಿಕವೇ ಸಾಕ್ಷ್ಯಗಳನ್ನು ತಿರುಚಲಾಗಿದೆ. 2020ರ ಸೆ.9 ರಿಂದ ಡಿಸೆಂಬರ್ 16ರ ಅವಧಿಯಲ್ಲಿ ಸಿಸಿಬಿ ಕಚೇರಿ ಹಾಗೂ ಇತರೆಡೆ ಅಕ್ರಮ ನಡೆದಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿದೆ.
ಇದನ್ನೂ ಓದಿ | Theft Case : ಬೆಂಗಳೂರಲ್ಲಿ ಚೆಡ್ಡಿ ಗ್ಯಾಂಗ್ ಆಯ್ತು, ಈಗ ರಾಯಚೂರಿನಲ್ಲಿ ಅರೆಬೆತ್ತಲೆ ಕಳ್ಳರ ಹಾವಳಿ!
ಈಗಾಗಲೇ ಸಿಸಿಬಿ ವಶಕ್ಕೆ ಪಡೆದಿದ್ದ ಪೆನ್ ಡ್ರೈವ್, ಹಾರ್ಡ್ ಡಿಸ್ಕ್‌ಗಳನ್ನು ಎಸ್‌ಐಟಿ ತಂಡ ಈಗಾಗಲೇ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಿದೆ. ಇದೀಗ ವಿಚಾರಣೆ ನಡೆಸಲು, ಈ ಹಿಂದೆ ಪ್ರಕರಣದ ತನಿಖೆ ನಡೆಸಿದ ಸಿಸಿಬಿ ತನಿಖಾಧಿಕಾರಿ ಸೇರಿ ಇತರರಿಗೆ ಎಸ್‌ಐಟಿ ಅಧಿಕಾರಿಗಳು ನೊಟೀಸ್ ನೀಡುವ ಸಾಧ್ಯತೆ ಇದೆ. ಜತೆಗೆ ಪ್ರಕರಣದ ಬಗ್ಗೆ ಮತ್ತಷ್ಟು ಸಾಕ್ಷ್ಯ ಸಂಗ್ರಹಕ್ಕೆ ಎಸ್‌ಐಟಿ ಅಧಿಕಾರಿಗಳು ಮುಂದಾಗಿದ್ದಾರೆ.
ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿ ಎಂದ ಯು.ಬಿ. ವೆಂಕಟೇಶ್
ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ದೇಶದ ಅತಿ ದೊಡ್ಡ ಕ್ರಿಪ್ಟೋ ಕರೆನ್ಸಿ ಹಗರಣದ ಕುರಿತು ರಾಜ್ಯ ಸರ್ಕಾರ ರಚಿಸಿರುವ ಎಸ್ಐಟಿ, ತಪ್ಪಿತಸ್ಥ ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸಿರುವುದು ಸ್ವಾಗತಾರ್ಹ ಕ್ರಮ ಎಂದು ವಿಧಾನ ಪರಿಷತ್ ಸದಸ್ಯ ಯು.ಬಿ. ವೆಂಕಟೇಶ್ ಹೇಳಿದ್ದಾರೆ.
ವಿಧಾನ ಪರಿಷತ್‌ನಲ್ಲಿ ಸತತವಾಗಿ ಬಿಟ್ ಕಾಯಿನ್ ಹಗರಣದ ಬಗ್ಗೆ ನಾನು ಧ್ವನಿಯೆತ್ತಿದ್ದೆ. ಹಿಂದಿನ ಗೃಹ ಸಚಿವರು ಯಾವುದೇ ಹಗರಣ ನಡೆದಿಲ್ಲ ಎಂದು ಪದೇ ಪದೇ ಸುಳ್ಳು ಹೇಳಿಕೆ ಕೊಡುತ್ತಾ ಬಂದಿದ್ದರು. ಸದನದಲ್ಲಿ ನಾನು ಪದೇ ಪದೇ ಧ್ವನಿ ಎತ್ತಿದ ಪರಿಣಾಮ ಸಿಐಡಿ ತನಿಖೆ ನಡೆಸುವುದಾಗಿ ಹೇಳಿದ್ದರು. ಆದರೆ, ಈ ಹಗರಣವನ್ನು ಹಿಂದಿನ ಸರ್ಕಾರ ಮುಚ್ಚಿ ಹಾಕುತ್ತಲೇ ಬಂದಿರುವುದು ಈಗ ದೃಢಪಟ್ಟಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ | Fire Accident: ಬಿಬಿಎಂಪಿ ಕಚೇರಿಯಲ್ಲಿ ಬೆಂಕಿ ಆಕಸ್ಮಿಕವಲ್ಲ, ಬಿಜೆಪಿಯ ಷಡ್ಯಂತ್ರ ಎಂದ ಕಾಂಗ್ರೆಸ್!
ಬಿಟ್ ಕಾಯಿನ್ ಹಗರಣದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಕೆಲವು ಪ್ರಭಾವಿ ರಾಜಕಾರಣಿಗಳು ಕೈಜೋಡಿಸಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಬಿಟ್ ಕಾಯಿನ್ ಹಗರಣದ ತನಿಖೆ ಮಾಡಲು ವಿಶೇಷ ತನಿಖಾ ದಳ ರಚನೆ ಮಾಡಿರುವುದು ಹಾಗೂ ಅದರ ನಂತರ ಎಸ್ಐಟಿ ತನಿಖೆ ಚುರುಕುಗೊಳಿಸಿರುವುದು ನನ್ನ ಹೋರಾಟಕ್ಕೆ ಸಂದ ಜಯವಾಗಿದೆ. ಆದರೆ ಈ ಹೋರಾಟ ಇಲ್ಲಿಗೆ ನಿಲ್ಲದೆ ಮುಂದಿನ ದಿನಗಳಲ್ಲಿ ಸಂಪೂರ್ಣ ಸತ್ಯ, ರಾಜ್ಯದ ಜನರಿಗೆ ತಿಳಿಯುವಂತಾಗಬೇಕು ಹಾಗೂ ತಪ್ಪಿತಸ್ಥರಿಗೆ ಕಾನೂನಿನಂತೆ ಸೂಕ್ತ ಶಿಕ್ಷೆ ಆಗಬೇಕು ಎಂಬುದು ನನ್ನ ಒತ್ತಾಸೆಯಾಗಿದೆ ಹೇಳಿದ್ದಾರೆ.