ಚಾಮರಾಜನಗರ: ಚಾಮರಾಜ ನಗರ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಭಾರತ್ ಜೋಡೊ ಯಾತ್ರೆ ಕಾಲ್ನಡಿಗೆ ವೇಳೆ ವಿವಾದಾತ್ಮಕ Pay CM ಚಿತ್ರವಿರುವ ಟಿ-ಶರ್ಟ್ ಧರಿಸಿದ್ದ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ವಿಜಯಪುರ ಜಿಲ್ಲೆ ಕಾಂಗ್ರೆಸ್ ಕಾರ್ಯಕರ್ತ ಅಕ್ಷಯ್ ಕುಮಾರ್ ಎಂಬಾತ ಪೇ ಸಿಎಂ ಚಿತ್ರವಿರುವ ಟಿ ಶರ್ಟ್ ಧರಿಸಿದ್ದಲ್ಲದೆ, ಕಾಂಗ್ರೆಸ್ ಬಾವುಟ ಹಿಡಿದು ಎಲ್ಲರಿಗೂ ಕಾಣುವಂತೆ ಮೆರವಣಿಗೆಯಲ್ಲಿ ಭಾಗವಹಿಸಿದ್ದ.
ಸಾರ್ವಜನಿಕ ಜಾಗದಲ್ಲಿ ಈ ರೀತಿಯಾಗಿ Pay CM ಎಂಬ ಪ್ರದರ್ಶನ ಮಾಡಿದ್ದರಿಂದ ರಾಜ್ಯದ ಮುಖ್ಯಮಂತ್ರಿಗೆ ಅಪಮಾನವಾಗಿದೆ. ಹುದ್ದೆಯ ಗೌರವಕ್ಕೆ ಧಕ್ಕೆಯಾಗಿದೆ. ಹೀಗಾಗಿ ಮುಖ್ಯಮಂತ್ರಿ ಗೆ ಅವಮಾನ ಮಾಡಿರುವವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಗುಂಡ್ಲುಪೇಟೆ ಪುರಸಭಾ ಸದಸ್ಯರಾದ ಕಿರಣ್‌ಗೌಡ ಹಾಗು ಸುರೇಶ್ ಅವರು ಪೊಲೀಸರಿಗೆ ದೂರು ನೀಡಿದ್ದರು.
ಹೀಗಾಗಿ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 1860 (us505(1)(B), 507 ಹಾಗು ಐಟಿ ಆಕ್ಟ್ 2008 (us 66(D) ಅಡಿ ಎಫ್ಐಆರ್ ದಾಖಲಿಸಿದ್ದಾರೆ.
ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ, ಯಾವುದೇ ಕಾಮಗಾರಿಗೆ ೪೦% ಕಮಿಷನ್ ಕೊಡಲೇಬೇಕು. ಹೀಗಾಗಿ ಬಿಜೆಪಿ ಸರಕಾರ ಭ್ರಷ್ಟ ಸರಕಾರ ಎಂದು ಪ್ರಚಾರ ಮಾಡುತ್ತಿರುವ ಕಾಂಗ್ರೆಸ್ Pay CM ಅಭಿಯಾನ ಕೈಗೊಂಡಿತ್ತು. ಇದರಲ್ಲಿ ಹಣವನ್ನು ನೇರವಾಗಿ ಸಿಎಂ ಅವರಿಗೇ ಪಾವತಿಸಿ ಎಂದು ಜನರ ಗಮನ ಸೆಳೆದು ಬಿಜೆಪಿಯನ್ನು ಹೀಯಾಳಿಸಲು ಪೇಸಿಎಂ ಅಭಿಯಾನ ಶುರು ಮಾಡಿತ್ತು. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ಇದರ ವಿರುದ್ಧ ಬಿಜೆಪಿ ವತಿಯಿಂದ ಕಾಂಗ್ರೆಸ್ ನಾಯಕರ ಮೇಲೆ ಕೇಸು ದಾಖಲಿಸಲಾಗಿತ್ತು. ಕೆಲವರನ್ನು ಬಂಧಿಸಿ ಬಿಡುಗಡೆ ಕೂಡಾ ಮಾಡಲಾಗಿತ್ತು. ಇದೀಗ ಅದು ಭಾರತ್ ಜೋಡೊ ಯಾತ್ರೆಗೂ ಪ್ರವೇಶ ಪಡೆದಿದ್ದು, ಒಬ್ಬರ ಮೇಲೆ ಎಫ್‌ಐಆರ್ ದಾಖಲಾದಂತಾಗಿದೆ.
ಸೋಷಿಯಲ್ ಮೀಡಿಯಾ ಸಿಬ್ಬಂದಿಗೆ ನೋಟಿಸ್
ಈ ನಡುವೆ ಕಾಂಗ್ರೆಸ್ ನ ಪೇಸಿಎಂ ಪೋಸ್ಟರ್ ಅಭಿಯಾನಕ್ಕೆ ಸಂಬಂಧಿಸಿ ಕಾಂಗ್ರೆಸ್ ಸೋಶಿಯಲ್ ಮಿಡಿಯಾ ಸಿಬ್ಬಂದಿಗೆ ಸಿಸಿಬಿ ನೋಟಿಸ್ ಜಾರಿಗೊಳಿಸಿದೆ. ಶನಿವಾರವೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಸಂಜಯ್, ವಿಶ್ವಕುಮಾರ್ ಸೇರಿ ಐವರಿಗೆ ನೊಟೀಸ್ ನೀಡಲಾಗಿದ್ದು, ಅವರು ಪೋಸ್ಟರ್ ಅಂಟಿಸಿದ್ದ ಬಗ್ಗೆ ಸಂಪೂರ್ಣ ವಿವರಣೆ ನೀಡಿ ಲಿಖಿತ ಪತ್ರ ಬರೆದಿದ್ದಾರೆ.
ಇದನ್ನೂ ಓದಿ | Pay CM | ಡಿಕೆಶಿ ಗಮ್ ಹಾಕಿದರು, ಸಿದ್ದರಾಮಯ್ಯ ಪೋಸ್ಟರ್ ಅಂಟಿಸಿದರು, ಪೊಲೀಸರು ಕರೆದೊಯ್ದರು