ಬೆಂಗಳೂರು: ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ದಾಳಿ ನಡೆಸಿದ ಬೆನ್ನಲ್ಲೇ ಉದ್ಯಮಿ, ಕಾಂಗ್ರೆಸ್ ನಾಯಕ ಕೆಜಿಎಫ್ ಬಾಬು (KGF Babu) ವಿರುದ್ಧ ಎಫ್‌ಐಆರ್ ದಾಖಲಾಗಿದೆ. ನ್ಯಾಯಾಲಯದ ಅನುಮತಿ ಪಡೆದು ಹೈಗ್ರೌಂಡ್ಸ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳ ದೂರಿನ ಬಳಿಕ ಎಫ್‌ಐಆರ್ ದಾಖಲಾಗಿದೆ.
ಕೆಜಿಎಫ್ ಬಾಬು ಸೇರಿ ಕಾಂಗ್ರೆಸ್‌ನ 50ಕ್ಕೂ ಅಧಿಕಾರಿಗಳ ಮನೆಗಳ ಮೇಲೆ ಮಾರ್ಚ್ 19ರಂದು ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಇದೇ ವೇಳೆ ಕೆಜಿಎಫ್ ಬಾಬು ನಿವಾಸದಲ್ಲಿ ಸಾವಿರ ಭಿತ್ತಿಪತ್ರ, 96.25 ಲಕ್ಷ ಮೌಲ್ಯದ ಚೆಕ್‌ಗಳು, 86 ಶಾಲ್, 481 ಸೂಟ್ ಗಳು, 394 ಸೀರೆಗಳು ಸಿಕ್ಕಿದ್ದವು. ಐಟಿ ಅಧಿಕಾರಿಗಳ ಮಾಹಿತಿ ಮೇರೆಗೆ ಜಿಎಸ್ ಟಿ, ಚುನಾವಣಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಇಲ್ಲಿದೆ ಎಫ್‌ಐಆರ್ ಪ್ರತಿ
ಸೀರೆ ಮತ್ತಿತರ ಸಾಮಗ್ರಿಗಳ ಪ್ಯಾಕಿಂಗ್ ಮೇಲೆ ಕೆಜಿಎಫ್ ಬಾಬು ಭಾವಚಿತ್ರವಿದೆ. ಇವೆಲ್ಲವನ್ನೂ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇವರ ಜತೆಗೆ ಜಿಎಸ್‌ಟಿ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದ್ದು, ಪ್ರಾದೇಶಿಕ ಅಯುಕ್ತ ಆಮ್ಲನ್ ಆದಿತ್ಯ ಬಿಸ್ವಾಸ್ ಕೆಜಿಎಫ್ ಮನೆಗೆ ಭೇಟಿ ನೀಡಿದ್ದಾರೆ.
1621 ಕೋಟಿ ಆಸ್ತಿಯ ಒಡೆಯ ಕೆಜಿಎಫ್ ಬಾಬು
ಕೆಜಿಎಫ್ ಬಾಬು ಅವರು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆರ್.ವಿ ದೇವರಾಜ್ ಬದಲು ತನಗೆ ಟಿಕೆಟ್ ಕೊಡಬೇಕು ಎಂದು ಕೇಳಿಕೊಂಡಿದ್ದರು. ಚುನಾವಣೆಗೆ ಮೊದಲೇ ಎಲ್ಲ ಕಡೆ ಹಣ ಹಂಚಿಯೂ ಇದ್ದರು. ಆದರೆ, ಕಾಂಗ್ರೆಸ್ ಅವರಿಗೆ ಟಿಕೆಟ್ ನೀಡಲಿಲ್ಲ. ಇದರಿಂದ ಸಿಟ್ಟಿಗೆದ್ದ ಅವರು ತಮ್ಮ ಎರಡನೇ ಪತ್ನಿ ಶಾಝಿಯಾ ತರನ್ನುಮ್ ಅವರನ್ನು ಪಕ್ಷೇತರರಾಗಿ ಕಣಕ್ಕೆ ಇಳಿಸಿದ್ದಾರೆ.
ಶಾಝಿಯಾ ತರನ್ನುಮ್ ಅವರ ನಾಮಪತ್ರದ ಜತೆಗೆ ಸಲ್ಲಿಸಲಾದ ಅಫಿಡವಿಟ್‌ನಲ್ಲಿ ಕೆಜಿಎಫ್ ಬಾಬು ಅವರ ಆಸ್ತಿ ಮೌಲ್ಯ 1621 ಕೋಟಿ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ. ಕೆಜಿಎಫ್ ಬಾಬು ಹೆಸರಿನಲ್ಲಿ 83.56 ಕೋಟಿ ರೂ.ಗಳ ಚರಾಸ್ತಿ ಮತ್ತು 1,538.15 ಕೋಟಿ ರೂ. ಬೆಲೆ ಬಾಳುವ ಸ್ಥಿರಾಸ್ತಿ ಇದೆ.
ಐದು ಕಾರುಗಳ ಖರೀದಿಗೆ ಕೊಟ್ಟ ಮುಂಗಡವೇ 2.67 ಕೋಟಿ ರೂ.
ಸಾಮಾನ್ಯ ಜನರು ಕಾರು ಖರೀದಿಸಲು ಮುಂದಾದರೆ ಅದರ ರೇಂಜ್ ಐದರಿಂದ 10 ಲಕ್ಷ ಇರುತ್ತದೆ. ಅದೂ ಬ್ಯಾಂಕ್ ಲೋನ್! ಆದರೆ, ಕೆಜಿಎಫ್ ಬಾಬು ಅವರು ಕಾರು ಖರೀದಿಗೆ ಕೊಟ್ಟಿರುವ ಎಡ್ವಾನ್ಸ್ ಹಣವೇ 2.67 ಕೋಟಿ ರೂ! ಅವರು ಬೇರೆ ಬೇರೆಯವರಿಗೆ ಕೊಟ್ಟಿರುವ ಸಾಲವೇ 46 ಕೋಟಿ ರೂ.!
ಶಾಝಿಯಾ ಬಳಿ 38.58 ಲಕ್ಷ ರೂ. ಮೌಲ್ಯದ 643 ಗ್ರಾಂ ಚಿನ್ನವಿದ್ದರೆ, ಪತಿ ಬಳಿ 91.08 ಲಕ್ಷ ರೂ. ಮೌಲ್ಯದ 1.51 ಕೆಜಿ ಚಿನ್ನವಿದೆ. ಪತಿ ಬಳಿ ರೋಲ್ಸ್ ರಾಯ್ಸ್, ಫಾರ್ಚೂನರ್ ಕಾರುಗಳಿದ್ದು, ಇನ್ನೂ ಐದು ಕಾರುಗಳ ಖರೀದಿಗೆ 2.67 ಕೋಟಿ ರೂ. ಮುಂಗಡ ಹಣ ನೀಡಿದ್ದಾರೆ. ಇವುಗಳಲ್ಲಿ ಬೆಂಜ್ (ಸ್ಕಾಟ್), ಫೋರ್ಡ್ ಎಂಡೆವರ್, ನಿಸ್ಸಾನ್, ರೋಲ್ಸ್ ರಾಯ್ಸ್, ಟೊಯೋಟಾ ವೆಲ್‌ಫೈರ್ ಕಾರುಗಳು ಸೇರಿವೆ.
ಇದನ್ನೂ ಓದಿ: IT Raid : ಕೆಜಿಎಫ್ ಬಾಬು ಸಹಿತ 50 ಕಾಂಗ್ರೆಸ್ ನಾಯಕರಿಗೆ ಐಟಿ ಶಾಕ್; ರುಕ್ಸಾನಾ ಪ್ಯಾಲೇಸ್‌ಗೆ ಅಧಿಕಾರಿಗಳ ಲಗ್ಗೆ