ಹುಬ್ಬಳ್ಳಿ: ಹಾಡಗಹಗಲೆ, ಅನೇಕ ಜನರ ಕಣ್ಮುಂದೆಯೇ ನಡೆದ ʻಸರಳ ವಾಸ್ತುʼ ಖ್ಯಾತಿಯ ಚಂದ್ರಶೇಖರ ಗುರೂಜಿ ಹಂತಕರ ವಿಚಾರಣೆ ಮುಂದುವರಿದಿರುವಂತೆ ಹೊಸ ಹೊಸ ವಿಚಾರಗಳು ಹೊರ ಬರುತ್ತಿವೆ. ಇದೀಗ ಎಫ್‌ಐಆರ್ ಮೂಲಕ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ.
ಗುರೂಜಿ ಅಣ್ಣನ ಮಗ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಸರಳ ವಾಸ್ತು ಸಂಸ್ಥೆಯ ಗ್ರಾಹಕರ ಹಣವನ್ನು ಆರೋಪಿಗಳು ದುರುಪಯೋಗಪಡಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಹತ್ಯೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಂಗಳವಾರ ಹುಬ್ಬಳ್ಳಿಯ ಪ್ರೆಸಿಡೆಂಟ್ ಹೋಟೆಲ್ ರಿಸೆಪ್ಷನ್‌ನಲ್ಲಿ ಹತ್ಯೆ ಮಾಡಿದ ದೃಶ್ಯ ಸಿಸಿ ಟಿವಿಯಲ್ಲಿ ದಾಖಲಾಗಿದ್ದು, ಇಡೀ ರಾಜ್ಯವನ್ನೆ ಬೆಚ್ಚಿ ಬೀಳಿಸಿದೆ. ಗುರೂಜಿ ನೀಡಿದ್ದ ವಾಸ್ತು ಸಲಹೆ ಪರಿಣಾಮಕಾರಿಯಾಗದೆ ಈ ಕೊಲೆ ನಡೆದಿದೆ ಎಂದು ಪ್ರಾರಂಭದಲ್ಲಿ ಅಂದಾಜಿಸಲಾಗಿತ್ತು.
ಹತ್ಯೆ ನಡೆದ ನಾಲ್ಕು ಗಂಟೆಗಳಲ್ಲಿ ಪೊಲೀಸರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಸ್ವತಃ ಆರೋಪಿಗಳೇ ಪೊಲೀಸರಿಗೆ ಕರೆ ಮಾಡಿ ತಾವು ಶರಣಾಗುವುದಾಗಿ ತಿಳಿಸಿದ್ದರು. ವಿಚಾರಣೆ ಮುಂದುವರಿದಂತೆ, ಇದು ವಾಸ್ತು ಕಾರಣಕ್ಕೆ ನಡೆದ ಪ್ರಕರಣವಲ್ಲ ಎಂಬ ವಿಚಾರ ಸ್ಪಷ್ಟವಾಗಿದೆ.
ಎಫ್‌ಐಆರ್‌ನಲ್ಲಿ ಏನಿದೆ?
ಹತ್ಯೆ ನಡೆದ ಕುರಿತು ಚಂದ್ರಶೇಖರ ಗುರೂಜಿ ಅಣ್ಣನ ಮಗ ಸಂಜಯ ಅಂಗಡಿ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
2008ರಿಂದ 2015ರವರೆಗೆ ಸರಳ ವಾಸ್ತು ಸಂಸ್ಥೆಯಲ್ಲಿ ಮಹಾಂತೇಶ ಹಾಗೂ ಮಂಜುನಾಥ ಕೆಲಸ ಮಾಡುತ್ತಿದ್ದರು. ಈ ಸಮಯದಲ್ಲಿ ವಿವಿಧ ಸೇವೆಗಳಿಗೆ ಗ್ರಾಹಕರು ನೀಡಿದ್ದ ಹಣವನ್ನು ಸಂಸ್ಥೆಗೆ ಪಾವತಿ ಮಾಡದೆ ವಂಚಿಸಿದ್ದರು. ಗ್ರಾಹಕರ ಹಣವವನ್ನು ದುರ್ಬಳಕೆ ಮಾಡಿಕೊಂಡಿದ್ದ ಮಹಾಂತೇಶ್ ಮತ್ತು ಮಂಜುನಾಥ ಇಬ್ಬರನ್ನೂ ಕೆಲಸದಿಂದ ವಜಾ ಮಾಡಲಾಗಿತ್ತು. ಇದಕ್ಕೂ ಮುನ್ನ ಆಪ್ತನಾಗಿದ್ದ ಮಹಾಂತೇಶ ಹಾಗೂ ವನಜಾಕ್ಷಿಗೆ ತಮ್ಮ ಒಡೆತನದಲ್ಲಿದ್ದ ಆಪಾರ್ಟ್‌ಮೆಂಟ್‌ನಲ್ಲಿ ಫ್ಲಾಟ್ ನೀಡಲಾಗಿತ್ತು.
ವಜಾ ಮಾಡಿದ ಸೇಡನ್ನು ತೀರಿಸಿಕೊಳ್ಳುವ ಸಲುವಾಗಿ ಅಪಾರ್ಟ್‌ಮೆಂಟ್‌ನಲ್ಲಿ ಮೂಲಸೌಕರ್ಯ ಕೊರತೆ ಇದೆ ಎಂದು ಗ್ರಾಹಕ ನ್ಯಾಯಾಲಯಕ್ಕೆ ಮಂಜುನಾಥ ದೂರು ನೀಡಿದ್ದ. ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಪಾರ್ಕಿಂಗ್ ವ್ಯವಸ್ಥೆಯಿಲ್ಲ, ಸೋಲಾರ್ ವ್ಯವಸ್ಥೆ ಅಳವಡಿಕೆ ಮಾಡಿಲ್ಲ ಎಂದು ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡಿದ್ದ. ಈ ಪ್ರಕರಣವನ್ನು ಹಿಂಪಡೆಯಬೇಕೆಂದರೆ ಹಣ ನೀಡುವಂತೆ ಮಹಾಂತೇಶ ಬೇಡಿಕೆ ಇಟ್ಟಿದ್ದ. ಹಣ ಕೊಡಲು ನೀರಾಕರಿಸಿದ್ದಕ್ಕೆ ಜೀವ ಬೆದರಿಕೆ ಹಾಕಿ ಮಾನಸಿಕ ಹಿಂಸೆ ನೀಡುತ್ತಿದ್ದ. ಹಣ ನೀಡದ ಹಿನ್ನೆಲೆಯಲ್ಲಿ ಹಾಗೂ ಕೆಲಸದಿಂದ ತೆಗೆದು ಹಾಕಿದ್ದರಿಂದ ಹತ್ಯೆ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | ಸರಳ ವಾಸ್ತು ಚಂದ್ರಶೇಖರ್ ಗುರೂಜಿ ಹತ್ಯೆ: ಎದೆಯ ಮೇಲಿಟ್ಟು ಮೆರೆಸುತ್ತಿದ್ದವನು ಅರವತ್ತು ಕಡೆ ಇರಿದ