ಮಂಡ್ಯ: ಮಂಡ್ಯ ತಾಲೂಕಿನ ಮೊಡಚಾಕನಹಳ್ಳಿಯಲ್ಲಿ ಕಬ್ಬು ಕಟಾವು ಮಾಡಿದ್ದ ಗದ್ದೆಗೆ ಹಚ್ಚಲಾಗಿದ್ದ ಬೆಂಕಿಯನ್ನು ನಂದಿಸುವ (Fire Accident) ವೇಳೆ ರೈತರೊಬ್ಬರು ಸಜೀವ ದಹನವಾಗಿದ್ದಾರೆ.
ಕಬ್ಬಿನ ಕಟಾವು ಆದ ಮೇಲೆ ಗದ್ದೆಯಲ್ಲಿನ ತ್ಯಾಜ್ಯ ನಾಶಕ್ಕಾಗಿ ಗದ್ದೆಗೆ ಬೆಂಕಿ ಹಚ್ಚಲಾಗಿತ್ತು. ಆದರೆ, ಕೆಲವೇ ನಿಮಿಷಗಳಲ್ಲಿ ಅಕ್ಕಪಕ್ಕದ ಗದ್ದೆಗಳಿಗೂ ಬೆಂಕಿ ವ್ಯಾಪಿಸಿಕೊಂಡಿದೆ. ದಟ್ಟ ಹೊಗೆ ನೋಡಿ ಜಮೀನು ಬಳಿಗೆ ಗ್ರಾಮಸ್ಥರು ದೌಡಾಯಿಸಿದ್ದಾರೆ. ತಕ್ಷಣ ಅಕ್ಕಪಕ್ಕದಲ್ಲಿ ಸಿಕ್ಕ ಮಣ್ಣು, ನೀರು ಹಾಕಿ ಬೆಂಕಿ ನಂದಿಸಲು ಯತ್ನ ಮಾಡಿದ್ದಾರೆ.
ಅಷ್ಟೊತ್ತಿಗೆ ಸುತ್ತಮುತ್ತಲ ಪ್ರದೇಶಕ್ಕೂ ಬೆಂಕಿ ಹರಡಿಕೊಂಡಿದೆ. ಈ ವೇಳೆ ಬೆಂಕಿ ನಂದಿಸುವಲ್ಲಿ ನಿರತರಾಗಿದ್ದ ಮಹಾಲಿಂಗಯ್ಯ (60) ಅವರ ಮೈಗೆ ಬೆಂಕಿ ಆವರಿಸಿಕೊಂಡಿದೆ. ಅವರು ಸ್ಥಳದಲ್ಲಿಯೇ ಬೆಂಕಿಗೆ ಆಹುತಿಯಾಗಿದ್ದಾರೆ. ಮಹಾಲಿಂಗಯ್ಯ ಅವರ ಮೃತದೇಹ ಸಂಪೂರ್ಣ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಇದನ್ನೂ ಓದಿ: Wild Animals Attack: ಮಬ್ಬು ಕತ್ತಲಿನಲ್ಲಿ ಬಂದ ಅಪರಿಚಿತ ಪ್ರಾಣಿ; ಏಕಾಏಕಿ ಹತ್ತಕ್ಕೂ ಹೆಚ್ಚು ಜನರ ಮೇಲೆ ದಾಳಿ
ಮಹೇಶ್ ಎಂಬುವವರ 8 ಎಕರೆ, ಜವರೇಗೌಡ ಎಂಬುವವರ 1.5 ಎಕರೆ, ಪಾಪಣ್ಣ ಎಂಬುವವರ 2 ಎಕರೆ ಹಾಗೂ ಶಂಕರ್ ಎಂಬುವವರ 1 ಎಕರೆ ಕಬ್ಬು ಭಸ್ಮವಾಗಿದೆ. ಅಲ್ಲದೆ, ಮಹೇಶ್ ಅವರ ಒಂದೂವರೆ ಎಕರೆ ಬಾಳೆ ತೋಟವೂ ಬೆಂಕಿಗಾಹುತಿಯಾಗಿದೆ. ಶಿವಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.