ಬೆಂಗಳೂರು: ರಾಜ್ಯದ ಹಲವೆಡೆ ಹಲವು ರೀತಿಯಲ್ಲಿ ಶನಿವಾರ (ಮಾ. 4) ಅಗ್ನಿಅವಘಡಗಳು (Fire Accident) ಸಂಭವಿಸಿವೆ. ಮಂಡ್ಯದಲ್ಲಿ ಚೆಗೆರೆ ಕಾರ್ಖಾನೆಗೆ ಬೆಂಕಿ ಹೊತ್ತಿಕೊಂಡಿದ್ದರೆ, ಚಿಕ್ಕಬಳ್ಳಾಪುರದಲ್ಲಿ ನಂದಿ ಗಿರಿಧಾಮದ ಮೇಲ್ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಮೈಸೂರಿನ ಲಲಿತಾದ್ರಿಪುರದ ಚಾಮುಂಡಿ ಬೆಟ್ಟ ಭಾಗದಲ್ಲಿ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರೆ, ಚಾಮರಾಜನಗರದ ಬಂಡೀಪುರದ ನೂರಾರು ಎಕರೆ ಪ್ರದೇಶವು ಬೆಂಕಿಗೆ ಆಹುತಿಯಾಗಿವೆ. ಶಿವಮೊಗ್ಗದ ಜೋಗದ ವರ್ಕ್‌ಮೆನ್ ಬ್ಲಾಕ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕಕ್ಕೆ ಕಾರಣವಾಗಿತ್ತು.
ಮದ್ದೂರಲ್ಲಿ ಹೊತ್ತಿ ಉರಿದ ಕಾರ್ಖಾನೆ
ಮಂಡ್ಯ: ಮದ್ದೂರು ತಾಲೂಕಿನ ಗೆಜ್ಜಲಗೆರೆಯ ಇಂಡಿಸ್ಟ್ರಿಯಲ್ ಪ್ರದೇಶದಲ್ಲಿರುವ ಚೆಗೆರೆ ಕಾರ್ಖಾನೆಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಗೆ ಕಾರ್ಖಾನೆ ಸಂಪೂರ್ಣ ಭಸ್ಮವಾಗಿದೆ. ಅದೃಷ್ಟವಶಾತ್ ಕಾರ್ಖಾನೆಯೊಳಗಿದ್ದ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಗಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.
ನಂದಿಗಿರಿಧಾಮದ ಮೇಲ್ಭಾಗದಲ್ಲಿ ಭಾರೀ ಬೆಂಕಿ
ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ನಂದಿಗಿರಿಧಾಮದ ಮೇಲ್ಭಾಗದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯ ಕೆನ್ನಾಲಿಗೆಗೆ ಮರ, ಗಿಡಗಳು ಹೊತ್ತಿ ಉರಿದಿದೆ. ನಂದಿಬೆಟ್ಟದ ಮೇಲೆ ದಟ್ಟವಾಗಿ ಬೆಂಕಿ ಆವರಿಸಿಕೊಂಡಿದ್ದರಿಂದ ಪ್ರವಾಸಿಗರಲ್ಲಿ ಕೆಲಕಾಲ ಆತಂಕ ಮೂಡಿಸಿತ್ತು.
ಇದನ್ನೂ ಓದಿ: Karnataka Election : ರಾಹುಲ್ ಮದುವೆ ಆಗದಿರುವುದಕ್ಕೆ ಏನು ಕಾರಣ? ವಿದಾದಾತ್ಮಕ ಹೇಳಿಕೆ ನೀಡಿದ ನಳಿನ್ ಕುಮಾರ್ ಕಟೀಲ್
ಬೆಂಕಿ ನಂದಿಸಲು ಕೆಎಸ್‌ಟಿಡಿಸಿ ಸಿಬ್ಬಂದಿ ಅಗ್ನಿಶಾಮಕ ದಳ ಸಿಬ್ಬಂದಿ ಹರಸಾಹಸಪಟ್ಟರು. ಬೆಂಕಿಯ ಉರಿಗೆ ಕಾಟೇಜ್‌ನ ಕಿಟಕಿ ಗಾಜುಗಳು ಪುಡಿ ಪುಡಿಯಾಗಿವೆ. ನಿರಂತರ ಪರಿಶ್ರಮದಿಂದ ಕಾಟೇಜ್‌ಗೆ ಬೆಂಕಿ ಹೊತ್ತಿಕೊಳ್ಳುವುದನ್ನು ಕೆಎಸ್‌ಟಿಡಿಸಿ ಸಿಬ್ಬಂದಿ ತಪ್ಪಿಸಿದ್ದಾರೆ.
ಅಮೃತ ಸರೋವರದ ಕಾಫಿ ತೋಟದ ಬಳಿಯೂ ಭಾರಿ ಬೆಂಕಿ ಹೊತ್ತಿಕೊಂಡಿದ್ದು, ಕಾಫಿ ತೋಟದ ಬಹುಭಾಗ ನಾಶವಾಗಿದೆ ಎಂದು ಹೇಳಲಾಗಿದೆ. ಸುಲ್ತಾನಪೇಟೆ ಮಾರ್ಗದ ಕಡೆಯಿಂದ ಬೆಟ್ಟದ ಮೇಲೆ ಬೆಂಕಿ ಹಬ್ಬಿದೆ. ಬೆಟ್ಟದ ತಪ್ಪಲು ಕೆಳಭಾಗದಿಂದ ಮೇಲ್ಭಾಗಕ್ಕೆ ಬೆಂಕಿ ಆವರಿಸಿಕೊಂಡಿದೆ.
ಚಾಮುಂಡಿಬೆಟ್ಟಕ್ಕೆ ಬೆಂಕಿ
ಮೈಸೂರು: ಇಲ್ಲಿ ಲಲಿತಾದ್ರಿಪುರ ಭಾಗದಲ್ಲಿರುವ ಚಾಮುಂಡಿಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ದುಷ್ಕರ್ಮಿಗಳು ಕಾಡಿಗೆ ಬೆಂಕಿ ಹಾಕಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಅರಣ್ಯ ಇಲಾಖೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲು ಶ್ರಮವಹಿಸಲಾಗಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಬೆಂಕಿ
ಚಾಮರಾಜನಗರ: ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಆತಂಕವನ್ನು ಹುಟ್ಟುಹಾಕಿದೆ. ಕೆಲವು ಗಂಟೆಗಳ ಕಾಲ ಬೆಂಕಿ ಹೊತ್ತಿ ಉರಿದಿದೆ. ನೂರಾರು ಎಕರೆ ಪ್ರದೇಶದಲ್ಲಿ ಬೆಂಕಿ ಆವರಿಸಿಕೊಂಡಿದ್ದರಿಂದ ಸಾಕಷ್ಟು ಪ್ರಮಾಣದಲ್ಲಿ ಮರ-ಗಿಡಗಳು ಸೇರಿದಂತೆ ವನ್ಯಜೀವಿಗಳು ಬೆಂಕಿಗೆ ಆಹುತಿಯಾಗಿವೆ. ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. 2017ರಲ್ಲಿಯೂ ಇದೇ ರೀತಿ ಬೆಂಕಿ ಬಿದ್ದು ಪ್ರಾಣಿ ಸಂಕುಲಗಳು ಭಸ್ಮವಾಗಿದ್ದವು.
ಇದನ್ನೂ ಓದಿ: BJP Twitter Handle: ಬಿಜೆಪಿಗೆ ಟ್ವಿಟರ್‌ನಲ್ಲಿ 2 ಕೋಟಿ ಫಾಲೋವರ್ಸ್! ದಾಖಲೆ ಬರೆದ ಕೇಸರಿ ಪಕ್ಷ
ಜೋಗದ ವರ್ಕ್‌ಮೆನ್ ಬ್ಲಾಕ್‌ನಲ್ಲಿ ಬೆಂಕಿ
ಶಿವಮೊಗ್ಗ: ಸಾಗರ ತಾಲೂಕಿನ ಜೋಗದ ವರ್ಕ್‌ಮೆನ್ ಬ್ಲಾಕ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತೋಟದ ಬೇಲಿ, ಒಣಗಿದ ಗಿಡಗಳಿಗೆ ಹೊತ್ತುಕೊಂಡಿದ್ದ ಬೆಂಕಿ ಹಲವು ಕಡೆ ವ್ಯಾಪಿಸಿದೆ. ಹೈಟೆನ್ಷನ್ ವಿದ್ಯುತ್ ಲೈನ್‌ಗೆ ತಾಗಿ ಪಕ್ಷಿಯೊಂದು ಕೆಳಕ್ಕೆ ಬಿದ್ದಿದ್ದೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ಸ್ಥಳೀಯರು, ಗ್ರಾಮಸ್ಥರು ಕೂಡಲೇ ಬೆಂಕಿ ನಂದಿಸಿದ್ದಾರೆ. ಈ ಮೂಲಕ ಭಾರಿ ಅನಾಹುತವೊಂದನ್ನು ತಪ್ಪಿಸಿದ್ದಾರೆ.