ಬೆಂಗಳೂರು: ಕರ್ನಾಟಕ ವಿಧಾನಮಂಡಲದ ಮಳೆಗಾಲದ ಅಧಿವೇಶನ ಸೋಮವಾರದಿಂದ ಆರಂಭವಾಗಲಿದ್ದು, ಈಗಾಗಲೆ ತಾರಕಕ್ಕೇರಿರುವ ರಾಜಕೀಯ ಆರೋಪ ಪ್ರತ್ಯಾರೋಪಗಳ ಸುರಿಮಳೆಯನ್ನು ರಾಜ್ಯದ ಜನರು ನಿರೀಕ್ಷಿಸಬಹುದು.
ಅನೇಕ ಸಮಸ್ಯೆಗಳ ನಡುವೆಯೇ ಸರ್ಕಾರ ಅಧಿವೇಶನ ಕರೆದಿದ್ದು, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್, ಜೆಡಿಎಸ್ ತಂತ್ರ ರೂಪಿಸಿವೆ. ಒಂದಿಷ್ಟು ದಾಖಲೆಗಳ ಸಮೇತ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಿದ್ದತೆ ಮಾಡಿಕೊಂಡಿವೆ. ಆದರೆ ಹಿಂದಿನ ಸರ್ಕಾರದ ಅವಧಿಯ ಹಗರಣಗಳನ್ನು ಹೊರಗೆಳೆಯುವುದಾಗಿ ಸರ್ಕಾರವೂ ತಿಳಿಸಿರುವುದರಿಂದ ಸಮಬಲದ ಹೋರಾಟವನ್ನು ನಿರೀಕ್ಷಿಸಬಹುದು.
ವಿಧಾನಸಭಾ ಚುನಾವಣೆಗೆ ಆರೇಳು ತಿಂಗಳು ಮಾತ್ರ ಬಾಕಿ ಇರುವುದರಿಂದ ಆಡಳಿತ ಮತ್ತು ವಿಪಕ್ಷಗಳಿಗೆ ಹಾಗೂ ಸರ್ಕಾರಕ್ಕೂ ಈ ಅಧಿವೇಶನ ಬಾರಿ ಮುಖ್ಯವಾಗಿದೆ. ಅಧಿವೇಶನದಲ್ಲಿ ಮೊದಲ ದಿನ, ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ಮಾಡಲು ಮಾತ್ರ ನಿಗದಿಪಡಿಸಲಾಗಿದೆ. ಗಣ್ಯರ ಕುರಿತು ಸಂತಾಪದ ನುಡಿಗಳನ್ನಾಡಿ ಮಾರನೆಯ ದಿನಕ್ಕೆ ಮುಂದೂಡುವುದು ವಾಡಿಕೆ.
ಮಂಗಳವಾರದಿಂದ ನಿಜವಾದ ಸದನ ಕದನ ಆರಂಭವಾಗಲಿದೆ. ಬಿಜೆಪಿ ಸರ್ಕಾರದ ವೈಫಲ್ಯಗಳು, ಹಗರಣಗಳೇ ವಿಪಕ್ಷಗಳಿಗೆ ಅಸ್ತ್ರವಾಗಿದ್ದು, ಸರ್ಕಾರವನ್ನು ಪ್ರಶ್ನೆಗಳ ಸುರಿಮಳೆಯಲ್ಲೇ ಮುಗಿಸಲು ವಿಪಕ್ಷಗಳು ತಯಾರಿ ನಡೆಸಿವೆ. ಅದರಲ್ಲೂ ಇತ್ತೀಚೆಗೆ ಬಿದ್ದ ಭಾರೀ ಮಳೆಯಿಂದಾಗಿ ಸಾಕಷ್ಟು ಹಾನಿಯಾಗಿದ್ದು ಪರಿಹಾರಕ್ಕಾಗಿ ಶಾಸಕರು ಆಗ್ರಹ ಮಾಡಲಿದ್ದಾರೆ. ಇದರ ನಡುವೆ ಬೆಂಗಳೂರಿನ ಹಲವು ಪ್ರದೇಶ ಜಲಾವೃತವಾಗಿದ್ದು, ಈ ಬಗ್ಗೆ ಕೂಡ ವಿಪಕ್ಷಗಳು ತರಾಟೆಗೆ ತೆಗೆದುಕೊಳ್ಳಲಿವೆ.
ಕಾಂಗ್ರೆಸ್ ಪ್ರಯೋಗಿಸುವ ಅಸ್ತ್ರಗಳು
- ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ
- ಪಿಎಸ್ಐ ಪರೀಕ್ಷೆ ಅಕ್ರಮದಲ್ಲಿ ಸರ್ಕಾರದ ಪಾತ್ರ
- ನೆರೆ ಪೀಡಿತ ಪ್ರದೇಶದ ಜನರಿಗೆ ಪರಿಹಾರ ನೀಡಿಲ್ಲ
- ಬಾರಿ ಮಳೆಗೆ ಬೆಂಗಳೂರಿಗರ ಜೀವನ ಅಸ್ತವ್ಯಸ್ತ
- ಬೆಂಗಳೂರು, ಮೈಸೂರು ಹೆದ್ದಾರಿ ಅವೈಜ್ಞಾನಿಕ
- ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ವೈಫಲ್ಯ
- ಸಮಾಜ ಕಲ್ಯಾಣ ಇಲಾಖೆಯಲ್ಲಿ ಅವ್ಯವಹಾರ
ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಕಾಂಗ್ರೆಸ್, ಜೆಡಿಎಸ್ ತಯಾರಿ ನಡೆಸಿವೆ. ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ತೆರೆದಿಡಲು ಕಾಂಗ್ರೆಸ್ ಹಲವು ಮಹತ್ವದ ದಾಖಲೆ ಸಮೇತ ಸಿದ್ದವಾಗಿದೆ. ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದು, ಸ್ವತಃ ಶಾಸಕರೇ ಹಣ ಪಡೆದ ಬಗ್ಗೆ ಬಹಿರಂಗವಾಗಿ ಒಪ್ಪಿಕೊಂಡಿರುವ ವಿಚಾರ ಪ್ರಸ್ತಾಪ ಮಾಡಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕೆಂಬ ಯೋಚನೆ ಮಾಡಿದೆ. ಬೆಂಗಳೂರಿನಲ್ಲಿ ಸುರಿದ ಮಳೆಗೆ ನಗರ ಜನರ ಜೀವನ ಅಸ್ತವ್ಯಸ್ತ ಹಾಗೂ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ ಮಳೆ ಅನಾಹುತದ ಬಗ್ಗೆ ಸರ್ಕಾರದ ಗಮನ ಸೆಳೆಯಲು ತಯಾರಿ ನಡೆದಿದೆ.
ಇದನ್ನೂ ಓದಿ | ಬೆಂಗಳೂರಿನಲ್ಲೇ 40%, ಮೊಟ್ಟೆ, ಸಾವರ್ಕರ್ ಫೈಟ್: ಸೆಪ್ಟೆಂಬರ್ 12ರಿಂದ ವಿಧಾನಮಂಡಲ ಅಧಿವೇಶನ
ಜೆಡಿಎಸ್ ಅಸ್ತ್ರಗಳು
ಬೆಂಗಳೂರು ಮೈಸೂರು ಹೆದ್ದಾರಿ ಸೇರಿದಂತೆ ರೈತರ ಸಮಸ್ಯೆ, ಅತಿವೃಷ್ಟಿ, ರಾಜಕಾಲುವೆ ಒತ್ತುವರಿ, ಇತ್ಯಾದಿ ವಿಚಾರಗಳ ಬಗ್ಗೆ ಸದನದಲ್ಲಿ ದಾಖಲೆಗಳ ಸಮೇತ ಪ್ರಸ್ತಾಪ ಮಾಡಿ ಸರ್ಕಾರದ ಗಮನ ಸೆಳೆಯಲು ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿ ತಯಾರಿ ನಡೆಸಿದ್ದಾರೆ.
ಬಿಜೆಪಿ ಪ್ರತ್ಯಸ್ತ್ರ
ಪ್ರತಿಪಕ್ಷಗಳ ಅಸ್ತ್ರಕ್ಕೆ ಪ್ರತ್ಯಸ್ತ್ರವನ್ನು ಸರ್ಕಾರವೂ ಸಿದ್ಧಪಡಿಸಿಕೊಂಡಿದೆ. ಮಳೆಹಾನಿ, ರೈತರ ಬೆಳೆ ನಾಶದ ಬಗ್ಗೆ ಚರ್ಚೆಗೆ ಸರ್ಕಾರ ಸಿದ್ಧವಾಗಿರುವಂತೆ ತೊರುತ್ತಿದೆ. ಆದರೆ ವಿಪಕ್ಷಗಳು ಆರಂಭದಿಂದಲೇ ಸರ್ಕಾರದ ಮೇಲೆ ಸವಾರಿ ಮಾಡಲು ಮುಂದಾದರೆ ಚರ್ಚೆಯನ್ನು ಆರೋಪ ಪ್ರತ್ಯಾರೋಪಕ್ಕೆ ತಿರುಗಿಸುವ ಸಾಧ್ಯತೆಯೂ ಇದೆ.
ಕಾಂಗ್ರೆಸ್ ಕಾಲದಲ್ಲಿ ನಡೆದ ಹಗರಣಗಳನ್ನು ಬಯಲಿಗೆಳೆಯಲು ಸಿದ್ಧವಾಗಿರುವುದಾಗಿ ಈಗಾಗಲೆ ಸಿಎಂ ಬೊಮ್ಮಾಯಿ ಘೋಷಣೆ ಮಾಡಿರುವುದರಿಂದ ಅರ್ಕಾವತಿ ಬಡಾವಣೆಯ ರೀಡೂ ಹಗರಣ, ಎಸಿಬಿ ರಚನೆ ಮೂಲಕ ಭ್ರಷ್ಟಾಚಾರ ಮುಚ್ಚಿಹಾಕಿದ್ದು, ಕಿಮ್ಮನೆ ರತ್ನಾಕರ್ ಕಾಲದ ನೇಮಕಾತಿ ಹಗರಣ, ಡಿಕೆಶಿ ಸಚಿವರಾಗಿದ್ದಾಗ ಇಂಧನ ಇಲಾಖೆಯಲ್ಲಿ ನಡೆದ ಭ್ರಷಾಚಾರ ಆರೋಪ ಸೇರಿದಂತೆ ಹಲವು ವಿಚಾರದ ಮೂಲಕ ಉತ್ತರಿಸುವ ಸಾಧ್ಯತೆಯಿದೆ. ಇದೆಲ್ಲದರ ನಡುವೆ ಕೆಲ ಹೊಸ ಮಸೂದೆಗಳನ್ನು ಮಂಡನೆ ಮಾಡಿ ಒಪ್ಪಿಗೆ ಪಡೆಯುವ ಅನಿವಾರ್ಯತೆಯೂ ಸರ್ಕಾರಕ್ಕಿದೆ.
ನಿಷೇಧಾಜ್ಞೆ ಜಾರಿ
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಂಘ-ಸಂಸ್ಥೆಗಳು, ರೈತ, ಕಾರ್ಮಿಕ ಹಾಗೂ ವಿವಿಧ ಸಂಘಟನೆಗಳು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿವೆ. ಪ್ರತಿಭಟನೆಗೆ ಫ್ರೀಡಮ್ ಪಾರ್ಕ್‌ನಲ್ಲಿ ಅವಕಾಶ ನೀಡಿದ್ದು, ಎಂದಿನಂತೆ ಅಧಿವೇಶನ ಮುಗಿಯುವವರೆಗೂ ವಿಧಾನಸೌಧದ ಸುತ್ತಮುತ್ತ ಈ ಬಾರಿಯೂ 144 ಸೆಕ್ಷನ್ ಜಾರಿಯಲ್ಲಿದೆ.
ಕಾರ್ಯಕಲಾಪಗಳ ಸಭೆ ಸೋಮವಾರ
ವಿಧಾನ ಸಭೆ ಮತ್ತು ಪರಿಷತ್‌ನಲ್ಲಿ ಚರ್ಚೆ ಮಾಡಬೇಕಾದ ವಿಚಾರಗಳು ಮತ್ತು ಸರ್ಕಾರ ಮಂಡನೆ ಮಾಡಲಿರುವ ಬಿಲ್‌ಗಳ ಬಗ್ಗೆ ಚರ್ಚೆ ನಡೆಸಲು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸೋಮವಾರ ಮದ್ಯಾಹ್ನ ಕಾರ್ಯಕಲಾಪಗಳ ಸಭೆ ಆಯೋಜಿಸಿದ್ದಾರೆ.
ಹತ್ತು ದಿನಗಳ ಸುಗಮ ಕಲಾಪಕ್ಕೆ ಅವಕಾಶ ಕೊಡುವಂತೆ ಈ ಸಂದರ್ಭದಲ್ಲಿ ಸ್ಪೀಕರ್ ಕೋರಲಿದ್ದು, ಸಿಎಂ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ, ಕಾನೂನು ಸಚಿವ ಮಾಧುಸ್ವಾಮಿ, ಗೋವಿಂದ ಕಾರಜೋಳ ಸೇರಿ ಹಿರಿಯ ಸಚಿವರು ಉಪಸ್ಥಿತಿ ಇರುತ್ತಾರೆ.
ಇದನ್ನೂ ಓದಿ | Bengaluru Rain | ಒತ್ತುವರಿಯಿಂದ ಮಂತ್ರಿಗಳಿಗೆ ಎಷ್ಟು ಸಿಕ್ಕಿದೆ?: ಅಧಿವೇಶನಕ್ಕೆ ವಿಷಯ ಫಿಕ್ಸ್ ಎಂದ ಸಿದ್ದರಾಮಯ್ಯ