ಹುಬ್ಬಳ್ಳಿ: ಇಲ್ಲಿನ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಹೈಕೋರ್ಟ್ ಅಸ್ತು ಎಂದಿರುವ ಬೆನ್ನಲ್ಲಿಯೇ, ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಬುಧವಾರ ತರಾತುರಿಯಿಂದ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ.
ರಾಣಿ ಚೆನ್ನಮ್ಮ ಗಜಾನನ ಉತ್ಸವ ಸಮಿತಿಯಿಂದ ಮುಂಜಾನೆಯೇ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ನಡೆದಿದೆ. ಅರ್ಚಕರಿಂದ ಪೂಜಾ ವಿಧಿವಿಧಾನಗಳು ಆರಂಭವಾಗಿವೆ.
ಹೈಕೋರ್ಟ್ ತೀರ್ಪು ಪ್ರಶ್ನಿಸಿ ಅಂಜುಮಾನ್ ಸಂಸ್ಥೆ ಸುಪ್ರೀಂ ಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದ್ದರೂ, ಆ ನಡುವೆಯೇ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಮೊದಲು ಒಂದು ಚಿಕ್ಕ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು. ನಂತರ ಗಣೇಶನ ಒಂದು ದೊಡ್ಡ ಮೂರ್ತಿಯನ್ನು ತಂದು ಪ್ರತಿಷ್ಠಾಪನೆ ಮಾಡಲಾಯಿತು. ಹಿಂದೂ ಪರ ಸಂಘಟನೆಗಳ ಮುಖಂಡರು ಘೋಷಣೆಗಳೊಂದಿಗೆ ಗಣೇಶ ಮೂರ್ತಿ ಹೊತ್ತು ತಂದರು.
ಇದೇ ವೇಳೆಗೆ ಮೈದಾನದ ಬಳಿ ಗಣೇಶ ಪೆಂಡಾಲ್ ಎದುರು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು. ಈದ್ಗಾ ಮೈದಾನ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಡಿಸಿಪಿ, ಎಸಿಪಿ ಸೇರಿದಂತೆ ಇನ್ನೂರು ಪೊಲೀಸರ ನಿಯೋಜನೆ ಮಾಡಲಾಗಿದೆ.
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಬಹು ವರ್ಷದ ಬಳಿಕ ಇದೇ ಮೊದಲ ಬಾರಿಗೆ ಗಣೇಶೋತ್ಸವ ಆಚರಿಸಲು ಮಹಾನಗರ ಪಾಲಿಕೆ ಅವಕಾಶ ನೀಡಿತ್ತು. ಆದರೆ, ಇದನ್ನು ಪ್ರಶ್ನಿಸಿ ಮತ್ತು ಅವಕಾಶ ನೀಡಬಾರದು ಎಂದು ಕೋರಿ ಹೈಕೋರ್ಟ್‌ನ ಮೊರೆ ಹೋಗಲಾಗಿತ್ತು. ಮಂಗಳವಾರ ಈ ಅರ್ಜಿಯ ತುರ್ತು ವಿಚಾರಣೆ ನಡೆಸಿದ ಹೈಕೋರ್ಟ್‌ನ ಏಕ ಸದಸ್ಯ ಪೀಠ ತೀರ್ಪನ್ನು ಕಾದಿರಿಸಿತ್ತು. ನ್ಯಾಯಮೂರ್ತಿ ಅಶೋಕ್ ಕಿಣಗಿ ಅವರ ಪೀಠದ ಮುಂದೆ ವಿಚಾರಣೆ ನಡೆದಿತ್ತು. ರಾತ್ರಿ ೧೦ ಗಂಟೆಗೆ ಆದ್ಯತೆ ಮೇರೆಗೆ ವಿಚಾರಣೆ ನಡೆಸಿದ ಕೋರ್ಟ್ ಹೊಸ ತೀರ್ಪು ಪ್ರಕಟಿಸಿದ್ದು, ಇದೇ ಮೊದಲ ಬಾರಿಗೆ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ನಡೆಯಲಿದೆ.
ಇದನ್ನೂ ಓದಿ | ಅಂಜುಮಾನ್ ಸಂಸ್ಥೆಯ ಅರ್ಜಿ ವಜಾ, ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಹೈಕೋರ್ಟ್ ಅಸ್ತು