Site icon Vistara News

KEA Exam Scam: ಪರೀಕ್ಷಾ ಅಕ್ರಮ ಸಂಬಂಧ 5 ಕೇಸ್‌ ದಾಖಲು; ಪಿಎಸ್ಐ ನೇಮಕಾತಿ ಹಗರಣದ ಕಿಂಗ್‌ಪಿನ್ ಹೆಸರು‌ ಥಳುಕು!

exam irregularities in yadgir

ಯಾದಗಿರಿ: ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ ನಗರ ಠಾಣೆಯಲ್ಲಿ 5 ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ. ಯಾದಗಿರಿಯ ಪರೀಕ್ಷಾ ಕೇಂದ್ರದ ಮುಖ್ಯಸ್ಥರು ನೀಡಿದ್ದ ದೂರಿನ ಮೇರೆಗೆ ಕಲಬುರಗಿ ಹಾಗೂ ವಿಜಯಪುರ ಜಿಲ್ಲೆಯ 9 ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಪರೀಕ್ಷಾ ಅಕ್ರಮಕ್ಕೆ ಪಿಎಸ್ಐ ನೇಮಕಾತಿ ಹಗರಣದ ಕಿಂಗ್‌ಪಿನ್ ರುದ್ರಗೌಡ ಪಾಟೀಲ್‌ ಹೆಸರು ಥಳುಕು ಹಾಕಿಕೊಂಡಿದ್ದು, ಆತನ ವಿರುದ್ಧವೂ ಎಫ್‌ಐಆರ್‌ ದಾಖಲಾಗಿದೆ.

ವಿವಿಧ ನಿಗಮ ಮಂಡಳಿಗಳ ಹುದ್ದೆಗಳ ಭರ್ತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನೇಮಕಾತಿ ಪರೀಕ್ಷೆ ನಡೆಸುತ್ತಿತ್ತು. ಈ ವೇಳೆ ನಗರದ ನ್ಯೂ ಕನ್ನಡ ಪಿಯು ಕಾಲೇಜು, ಸಬಾ ಪಿಯು ಕಾಲೇಜು, ಸರ್ಕಾರಿ ಬಾಲಕಿಯರ ಪಿಯು ಕಾಲೇಜು, ಎಲ್‌ಕೆಇಟಿ ಬಾಲಕಿಯರ ಪಿಯು ಕಾಲೇಜು ಹಾಗೂ ಮಹಾತ್ಮ ಗಾಂಧಿ ಪಿಯು ಕಾಲೇಜುಗಳಲ್ಲಿ ಪರೀಕ್ಷಾ ಅಕ್ರಮ ನಡೆದಿದೆ.

ಅಭ್ಯರ್ಥಿಯೊಬ್ಬ ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯುತ್ತಿದ್ದರಿಂದ ಅಕ್ರಮ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ 9 ಆರೋಪಿಗಳ ವಿರುದ್ಧ ಕೇಸ್ ದಾಖಲಾಗಿದ್ದು, ಒಟ್ಟು 16 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪರೀಕ್ಷಾ ಕೇಂದ್ರದ ಮುಖ್ಯಸ್ಥರು ನೀಡಿದ್ದ ದೂರಿನ ಮೇರೆಗೆ ಆರೋಪಿಗಳ ವಿರುದ್ಧ IPC 109, 114, 120(ಬಿ), 420 ಅಡಿ ಕೇಸ್ ದಾಖಲಿಸಲಾಗಿದೆ. ಪ್ರಕರಣದ ತನಿಖೆಗೆ ಎಸ್ಪಿ ಜಿ. ಸಂಗೀತಾ ಮಾರ್ಗದರ್ಶನದಲ್ಲಿ ನಾಲ್ಕು ವಿಶೇಷ ತಂಡಗಳನ್ನು ನೇಮಿಸಲಾಗಿದೆ.

ಇದನ್ನೂ ಓದಿ | Exam Cheating : ಕಲಬುರಗಿಯಲ್ಲೂ ಪರೀಕ್ಷೆಯಲ್ಲಿ ನಕಲು ಮಾಡುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಅಭ್ಯರ್ಥಿ!

ಅಕ್ರಮದಲ್ಲಿ ಕಿಂಗ್‌ಪಿನ್ ಆರ್.ಡಿ. ಪಾಟೀಲ್‌ ಹೆಸರು‌

ಕಲಬುರಗಿ: ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷಾ ಅಕ್ರಮದಲ್ಲಿ ಪಿಎಸ್ಐ ನೇಮಕಾತಿ ಅಕ್ರಮದ ಕಿಂಗ್‌ಪಿನ್‌ ಆರ್.ಡಿ. ಪಾಟೀಲ್‌ ಹೆಸರು‌ ಕೇಳಿಬಂದಿದೆ. ಕಲಬುರಗಿಯ ಶರಣಬಸವ ವಿಶ್ವವಿದ್ಯಾಲಯದಲ್ಲಿ ಬ್ಲೂಟೂತ್‌ ಬಳಸಿ ಪರೀಕ್ಷೆ ಬರೆಯುತ್ತಿದ್ದ ತ್ರಿಮೂರ್ತಿ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಆತನಿಗೆ ಸಹಾಯ ಮಾಡುತ್ತಿದ್ದ ಸಹೋದರ ಅಂಬರೀಶ್‌ ಹಾಗೂ ಆರ್‌.ಡಿ. ಪಾಟೀಲ್ ವಿರುದ್ಧವೂ ಎಫ್‌ಐಆರ್‌ ದಾಖಲಾಗಿದೆ. ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆಗೆ ಮತ್ತೆ ಆರ್.ಡಿ ಪಾಟೀಲ್‌ನನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಪರೀಕ್ಷೆಯಲ್ಲಿ ಬಳಸುತ್ತಿದ್ದ ಬ್ಲೂಟೂತ್ ಡಿವೈಸ್‌ಗಳನ್ನು ಆರ್.ಡಿ. ಪಾಟೀಲ್ ಸಹಚರರ ಬಳಿ ತಂದಿರುವುದು ಎನ್ನಲಾಗಿದೆ.

ಲಕ್ಷ ಲಕ್ಷ ಡೀಲ್

ಕಲಬುರಗಿ ನಗರ ಹಾಗೂ ಅಫಜಲಪುರದ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿ ಒಬ್ಬೊಬ್ಬ ಅಭ್ಯರ್ಥಿಯಿಂದ 20-25 ಲಕ್ಷ ರೂ. ಪಡೆಯಲು ಡೀಲ್ ಮಾಡಿಕೊಂಡ ಆರೋಪ ಕೇಳಿಬಂದಿದೆ. ಆರ್.ಡಿ. ಪಾಟೀಲ್ ಮನೆಯಿಂದಲೇ ಈ ಡೀಲ್ ನಡೆದಿದೆ ಎನ್ನಲಾಗಿದೆ. ಆಕಾಶ ಮಂಠಾಳೆ ಬೀದರ್, ಸಂತೋಷ್ ಯಾಳಗಿ ಜೇವರ್ಗಿ ಮತ್ತು ಸೊನ್ನ ಗ್ರಾಮದ ಬಾಬು ಚಾಂದಶೇಖ್ ಎಂಬ ಅಭ್ಯರ್ಥಿಗಳಿಂದ ಪರೀಕ್ಷೆ ಅಕ್ರಮ ನಡೆದಿದೆ.

ಅಭ್ಯರ್ಥಿ ಆಕಾಶ್ ಮಂಠಾಳೆ 25 ಲಕ್ಷ ರೂ. ಡೀಲ್ ಫಿಕ್ಸ್ ಮಾಡಿಕೊಂಡಿದ್ದು, ಮುಂಗಡ 8 ಲಕ್ಷ ರೂ.ಗಳನ್ನು ಆರ್‌.ಡಿ. ಪಾಟೀಲ್‌ಗೆ ನೀಡಿದ್ದಾನೆ. ಅಭ್ಯರ್ಥಿ ಸಂತೋಷ್ ಯಾಳಗಿ 20 ಲಕ್ಷಕ್ಕೆ ಡೀಲ್ ಮಾಡಿಕೊಂಡು, ಮುಂಗಡ 5 ಲಕ್ಷ ನೀಡಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ | Exam Cheating : ಬ್ಲೂಟೂತ್‌ ಬಳಸಿ ಪರೀಕ್ಷೆ ಬರೆಯುತ್ತಿದ್ದ ನಕಲಿ ಅಭ್ಯರ್ಥಿ ಸೇರಿ ಮೂವರು ಅರೆಸ್ಟ್‌!

ಪರೀಕ್ಷಾ ಕೇಂದ್ರದ ಹೊರಗಡೆಯಿಂದ ಕೀ ಆನ್ಸರ್ ಹೇಳಿದ್ದ ಗುರುರಾಜ್, ವಿಜಯಕುಮಾರ್, ಗಣೇಶ್, ಬಾಪು ಯಾಳಗಿ ಮತ್ತು ಆಸೀಫ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಪರೀಕ್ಷೆ ಅಕ್ರಮಕ್ಕೆ ಬಳಸಿದ್ದ ಎರಡು ಕಾರು, ಎರಡು ಬ್ಲೂಟೂತ್ ಡಿವೈಸ್ ಜಪ್ತಿ ಮಾಡಲಾಗಿದೆ. ವಿಶ್ವವಿದ್ಯಾಲಯ ಠಾಣಾವ್ಯಾಪ್ತಿಯಲ್ಲಿ ಲಕ್ಷ್ಮಿ ಪುತ್ರ ಎಂಬಾತನ ವಿರುದ್ಧ ದೂರು ದಾಖಲಾಗಿದೆ.

Exit mobile version