ಮಂಡ್ಯ: ಇಲ್ಲಿನ ವಿಸಿ ನಾಲೆಯಲ್ಲಿ ಮುಳುಗಿ ಐವರು ಮೃತಪಟ್ಟ ದಾರುಣ ಘಟನೆ (drowned in canal) ನಡೆದಿದೆ. ನೀರುಪಾಲಾದ ಐವರ ಪೈಕಿ ಮೂವರ ಶವವನ್ನು ಮೇಲಕ್ಕೆತ್ತಲಾಗಿದ್ದು, ಇಬ್ಬರಿಗಾಗಿ ಹುಡುಕಾಟ ಮುಂದುವರಿದಿದೆ.
ಬೆಂಗಳೂರಿನ ನೀಲಸಂದ್ರ ಗ್ರಾಮ ಮೂಲದ 15 ಜನರ ತಂಡವೊಂದು ಹಲ್ಲೆಗೆರೆ ಗ್ರಾಮಕ್ಕೆ ಬಂದಿತ್ತು. ಸೋಮವಾರ ಈ ತಂಡ ಊರಿಗೆ ಬಂದಿತ್ತು. ಮುಂಜಾನೆ ಕುತೂಹಲದಿಂದ ದೊಡ್ಡ ಕೊತ್ತಗೆರೆ ಗ್ರಾಮದ ವಿ ಸಿ ನಾಲೆಯನ್ನು ನೋಡಲು ಬಂದಿತ್ತು.
ಬೆಳಗ್ಗೆ ಇವರಲ್ಲಿ ಕೆಲವರು ನಾಲೆಗೆ ಇಳಿದು ಸ್ನಾನ ಮಾಡುತ್ತಿದ್ದರು. ಆಗ ಒಬ್ಬ ಬಾಲಕ ನೀರಿನಲ್ಲಿ ಮುಳುಗಿದ. ಅದನ್ನು ಕಂಡು ಆತನ ರಕ್ಷಣೆಗಾಗಿ ಉಳಿದವರು ಪ್ರಯತ್ನಿಸಿದರು. ಇದರಿಂದಾಗಿ ಒಟ್ಟು ಐವರು ನೀರುಪಾಲಾಗಿ ಬಿಟ್ಟರು.
ಮೃತಪಟ್ಟವರನ್ನು ಅನಿಷಾ ಬೇಗಂ (34), ಮಹತಾಬ್ (10) ತಷ್ಮಿಯಾ (22) ಮತ್ತು ಅತಿಕಾ (22), ಹರ್ಷಕ್ ಎಂದು ಗುರುತಿಸಲಾಗಿದೆ. ಅತಿಕಾ ಮತ್ತು ಹರ್ಷಕ್ ಅವರ ಮೃತದೇಹಕ್ಕಾಗಿ ಹುಡುಕುತ್ತಿದ್ದಾರೆ. ಬಸರಾಳು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿದ್ದಾರೆ.
ಬೆಂಗಳೂರಲ್ಲಿ ಟಿಪ್ಪರ್ ಹರಿದು ಬೈಕ್ ಸವಾರ ಮೃತ್ಯು; ಲಾರಿ ಚಾಲಕ ಪರಾರಿ
ಬೆಂಗಳೂರು: ಇಲ್ಲಿನ ನಾಯಂಡಹಳ್ಳಿ ಜಂಕ್ಷನ್ (Nayandahalli Junction) ಸಮೀಪ ಬೈಕ್‌ಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿರುವ (Road Accident) ಘಟನೆ ನಡೆದಿದೆ. ಯುವಕರಿಬ್ಬರು ಎಕ್ಸ್ಎಲ್ ಬೈಕ್‌ನಲ್ಲಿ ಬರುತ್ತಿದ್ದರು. ಈ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಟಿಪ್ಪರ್ ಲಾರಿ, ನಿಯಂತ್ರಣ ಸಿಗದೆ ಬೈಕ್‌ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಲಾರಿ ಕೆಳಗೆ ಸಿಲುಕಿದ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದರೆ, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ಇತ್ತ ಅಪಘಾತ ನಡೆದ ಬೆನ್ನಲ್ಲೇ ಲಾರಿ ಬಿಟ್ಟು ಚಾಲಕನೊಬ್ಬ ಪರಾರಿ ಆಗಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಮಿಸಿದ ಬ್ಯಾಟರಾಯನಪುರ ಸಂಚಾರಿ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ. ಗಾಯಾಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಿಂದಾಗಿ ನಾಯಂಡಹಳ್ಳಿ ಜಂಕ್ಷನ್ ಸುತ್ತಮುತ್ತ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ಸಂಬಂಧ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಪರಾರಿ ಆಗಿರುವ ಚಾಲಕನಿಗಾಗಿ ಹುಡುಕಾಟ ನಡೆಸಿದ್ದಾರೆ.
ಇದನ್ನೂ ಓದಿ : Road Accident : ಅಂಕೋಲಾ ಕೊಡ್ಲಗದ್ದೆ ಬಳಿ ಉರುಳಿದ ಹಣ್ಣಿನ ಲಾರಿ, ಚಾಲಕ ಸಾವು