ಬೆಂಗಳೂರು: ಈ ಬಾರಿಯ ಮೈಸೂರು ದಸರಾವನ್ನು (Mysore Dasara) ಅದ್ಧೂರಿಯಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ನಡೆದ ದಸರಾ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ವಿಶೇಷವೆಂದರೆ, ಈ ಬಾರಿಯ ದಸರಾ ಮೆರವಣಿಗೆಯಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿಯ (Congress guarantee) ಪರಿಕಲ್ಪನೆಗಳನ್ನು ಆಧರಿಸಿದ ಸ್ತಬ್ಧಚಿತ್ರಗಳು ಇರಲಿವೆ. ಜತೆಗೆ ಏರ್ ಶೋ (Airshow in Mysore) ಆಯೋಜಿಸುವ ಬಗ್ಗೆಯೂ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajanath Sing) ಅವರ ಜತೆ ಮಾತನಾಡುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ದಸರಾ ಉದ್ಘಾಟನೆಯ ಮುಖ್ಯ ಅತಿಥಿ ಮತ್ತು ಸಿದ್ದತೆಗಳ ಬಗ್ಗೆ ಚರ್ಚೆ ನಡೆಯಿತು. ಸಚಿವರಾದ ಎಚ್.ಸಿ ಮಹದೇವಪ್ಪ, ಶಿವರಾಜ್ ತಂಗಡಗಿ, ವೆಂಕಟೇಶ್, ಬೈರತಿ ಸುರೇಶ್, ರಾಜ್ಯದ ಮುಖ್ಯ ಕಾರ್ಯದರ್ಶಿಗಳಾದ ವಂದಿತಾ ಶರ್ಮಾ, ಶಾಸಕರು, ಜಿಲ್ಲಾಧಿಕಾರಿಗಳು, ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.
ಸಭೆಯ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು 2023ರ ಮೈಸೂರು ದಸರಾವನ್ನು ಬಹಳ ಅರ್ಥಪೂರ್ಣವಾಗಿ ಆಚರಣೆ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. ರಾಜ್ಯದ ಪಾರಂಪರಿಕ ಉತ್ಸವವಾಗಿರುವ ದಸರಾ ಜನರ ಉತ್ಸವ ಆಗಬೇಕು, ದೀಪಾಲಂಕಾರ, ಜಂಬೂ ಸವಾರಿ, ಸ್ತಬ್ದಚಿತ್ರಗಳು ಆಕರ್ಷಕವಾಗಿ ಮೂಡಿಬರಬೇಕು ಎಂಬ ಬಗ್ಗೆ ಚರ್ಚೆ ನಡೆಯಿತು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳ ಪರಿಕಲ್ಪನೆಯನ್ನು ಆಧರಿಸಿ ಸ್ತಬ್ಧ ಚಿತ್ರ ರಚಿಸಿ ಪ್ರದರ್ಶಿಸುವ ತೀರ್ಮಾನಕ್ಕೆ ಸಭೆ ಬಂದಿದೆ ಎಂದು ಅವರು ಹೇಳಿದರು.
ಎಂದಿನಂತೆ ಎಲ್ಲ ಧಾರ್ಮಿಕ ಆಚರಣೆಗಳು, ಸಂಪ್ರದಾಯಗಳು, ಪಂಜಿನ ಕವಾಯತು ನಡೆಯಲಿವೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಯಥಾವತ್ತಾಗಿ ನಡೆಯಲಿವೆ. ಚಲನಚಿತ್ರೋತ್ಸವ, ರೈತ ದಸರಾ, ಯುವ ದಸರಾಗಳು ನಡೆಯಲಿವೆ. ದಸರಾ ಉದ್ಘಾಟನೆಯ ದಿನ ಶುರುವಾಗಲಿರುವ ದೀಪಾಲಂಕಾರ ದಸರೆ ಮುಗಿದು ಕೆಲವು ದಿನಗಳ ಕಾಲ ಇರಲಿವೆ ಎಂದರು ಸಿದ್ದರಾಮಯ್ಯ.
ಉದ್ಘಾಟನೆಗೆ ಯಾರು? ಸಿದ್ದರಾಮಯ್ಯಗೆ ಪರಮಾಧಿಕಾರ
ಅಕ್ಟೋಬರ್ 15ರ (15-10-2023) ಬೆಳಗ್ಗೆ 10.15-10.30ರ ಶುಭ ಲಗ್ನದಲ್ಲಿ ದಸರಾ ಉದ್ಘಾಟನೆ ನಡೆಯಲಿದೆ. ಈ ಬಾರಿಯ ದಸರಾ ಉದ್ಘಾಟನೆಗೆ ಯಾರನ್ನು ಕರೆಯಬೇಕು ಎಂಬದನ್ನು ನಿರ್ಧರಿಸುವ ಅಧಿಕಾರವನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಸಭೆ ವಹಿಸಿತು. ಈ ಬಾರಿಯ ದಸರಾದಲ್ಲಿ ಏರ್ ಶೋ ನಡೆಸಲು ಚಿಂತನೆ ನಡೆಸಲಾಗಿದ್ದು, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಜತೆ ಮಾತನಾಡುವುದಾಗಿ ತಿಳಿಸಿದರು.
ಗ್ಯಾರಂಟಿ ಸ್ತಬ್ಧ ಚಿತ್ರಗಳ ಬಗ್ಗೆ ಬಿಜೆಪಿ ಏನು ಹೇಳುತ್ತದೆ?
ದಸರಾ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ಮೈಸೂರಿನ ಕೆಆರ್ ಕ್ಷೇತ್ರದ ಶಾಸಕ ಶ್ರೀವತ್ಸ ಅವರು ಬಳಿಕ ವಿಸ್ತಾರ ನ್ಯೂಸ್ ಜತೆ ಮಾತನಾಡಿ, ಈ ಬಾರಿ ಅರ್ಥಪೂರ್ಣವಾಗಿ ಮತ್ತು ಅದ್ದೂರಿಯಾಗಿ ಆಚರಣೆ ತೀರ್ಮಾನ ಆಗಿದೆ. ಉದ್ಘಾಟನೆಗೆ ಅತಿಥಿಯಾಗಿ ಯಾರನ್ನು ಆಹ್ವಾನಿಸಬೇಕು ಅನ್ನೋದನ್ನು ಸಿಎಂ ಸಿದ್ದರಾಮಯ್ಯ ಫೈನಲ್ ಮಾಡುತ್ತಾರೆ ಎಂದರು.
ದಸರಾ ಉತ್ಸವದಲ್ಲಿ ಸ್ತಬ್ಧ ಚಿತ್ರಗಳ ಪ್ರದರ್ಶನದಲ್ಲಿ ಗ್ಯಾರಂಟಿ ಯೋಜನೆ ಪ್ರದರ್ಶನ ಮಾಡುವ ವಿಚಾರದ ಬಗ್ಗೆ ಕೇಳಿದಾಗ, ಸದ್ಯಕ್ಕೆ ಪ್ರತಿಕ್ರಿಯೆ ಕೊಡೋದು ಕಷ್ಟವಾಗಲಿದೆ. ಆದರೆ ಈ ಬಗ್ಗೆ ಪಕ್ಷದ ನಾಯಕರ ಜೊತೆಗೆ ಚರ್ಚೆ ಮಾಡುತ್ತೇನೆ. ಯಾಕೆಂದರೆ ಗ್ಯಾರಂಟಿ ಯೋಜನೆ ಮೊದಲು ಪಕ್ಷದ ಯೋಜನೆ ಆಗಿತ್ತು. ನಂತರ ಸರ್ಕಾರ ಯೋಜನೆ ಆಗಿದೆ ಎಂದು ಹೇಳಿದರು.
ಇದನ್ನೂ ಓದಿ : Shakti Scheme : ‘ಶಕ್ತಿ’ಮೀರಿದ ಮಹಿಳೆಯರ ಪ್ರಯಾಣ; ಹಣ ಹೊಂದಿಕೆಗೆ ಸಿದ್ದರಾಮಯ್ಯ ಹೈರಾಣ!