Site icon Vistara News

ಬಾಗಲಕೋಟೆಯಲ್ಲಿ ತ್ರಿವಳಿ ನದಿಗಳ ಅಬ್ಬರ, ಪಂಪ್‌ಸೆಟ್‌ ತರಲು ಹೋದ ಯುವಕ ನೀರುಪಾಲು

ghataprabha

ಬಾಗಲಕೋಟೆ: ಕೃಷ್ಣಾ, ಘಟಪ್ರಭಾ ಮತ್ತು ಮಲಪ್ರಭಾ ತ್ರಿವಳಿ ನದಿಗಳ ನಾಡಾಗಿರುವ, ತ್ರಿವೇಣಿ ಸಂಗಮವನ್ನೂ ಹೊಂದಿರುವ ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಹದ ಭೀತಿ ಜೋರಾಗಿದೆ. ಘಟಪ್ರಭಾ ನದಿಯಿಂದಾಗಿ ದೇವಸ್ಥಾನ, ಸೇತುವೆ ಜಲಾವೃತ ಆಗಿದ್ದರೆ ಕೃಷ್ಣಾ ನದಿಯಿಂದಾಗಿ ಗ್ರಾಮಗಳು ನಡುಗಡ್ಡೆಯಾಗಿವೆ. ಮಲಪ್ರಭಾ ನದಿ ತೀರದಲ್ಲಿ ಬೆಳೆ ನಾಶದ ಜೊತೆಗೆ ರಸ್ತೆ ಬಂದ್ ಆಗಿದೆ. ಇದರ ನಡುವೆ, ಘಟಪ್ರಭಾ ನದಿಯಲ್ಲಿ ನೀರು ಉಕ್ಕುತ್ತಿದ್ದಂತೆಯೇ ಅದರಲ್ಲಿದ್ದ ಪಂಪ್‌ ಎತ್ತಲೆಂದು ಹೋಗಿದ್ದ ಯುವಕನೊಬ್ಬ ನೀರುಪಾಲಾಗಿದ್ದಾನೆ. ಆತನಿಗಾಗಿ ಹುಡುಕಾಟ ನಡೆಯುತ್ತಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ ಅಷ್ಟಾಗಿ ಮಳೆ ಇಲ್ಲ. ಆದರೆ, ಬೆಳಗಾವಿ ಹಾಗೂ ಮಹಾರಾಷ್ಟ್ರ ಭಾಗದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಬಾಗಲಕೋಟೆ ನದಿ ತೀರದ ಜನರಲ್ಲಿ ಪ್ರವಾಹದ ಆತಂಕ ಮನೆಮಾಡಿದೆ. ಒಂದೆಡೆ ಕೃಷ್ಣಾ ನದಿಗೆ ೧ ಲಕ್ಷ ೭೦ ಸಾವಿರಕ್ಕೂ ಅಧಿಕ ಕ್ಯೂಸೆಕ್ ನಷ್ಟು ನೀರನ್ನ ಬಿಡಲಾಗಿದೆ. ಇದ್ರಿಂದ ಜಮಖಂಡಿ ಭಾಗದ, ತುಬಚಿ ಹಾಗೂ ಮುತ್ತೂರು ಗ್ರಾಮಗಳ ನಡುಗಡ್ಡೆಯಲ್ಲಿ ಪ್ರವಾಹದ ಆತಂಕ ಶುರುವಾಗಿದೆ. ಹೀಗಾಗಿ ತುಬಚಿ ಗ್ರಾಮದ ಮಹಿಳೆಯರು ಕೃಷ್ಣಾ ನದಿಗೆ ಉಕ್ಕಿ ಹರಿಯದಂತೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇನ್ನು ಘಟಪ್ರಭಾ ನದಿಗೆ ೩೮ ಸಾವಿರ ಕ್ಯೂಸೆಕ್ ನೀರು ಬರ್ತಿರೋದ್ರಿಂದ ಮುಧೋಳ ತಾಲ್ಲೂಕಿನಲ್ಲಿ ೧೧ ಚಿಕ್ಕ ಸೇತುಗಳು ಮುಳುಗಡೆ ಕಂಡಿವೆ. ಅಲ್ಲದೇ ಮಾಚಕನೂರು ಗ್ರಾಮದ ಹೊಳೆ ಬಸವೇಶ್ವರ ದೇವಸ್ಥಾನ ಸಂಪೂರ್ಣ ಜಲಾವೃತ ಆಗಿದ್ದು, ಏಳು ಅಡಿಯಷ್ಡು ನೀರು ಬಂದಿದೆ‌..ಹೀಗೆ ಜಿಲ್ಲೆಯ ಕೆಲ ಕಡೆಗಳಲ್ಲಿ ನದಿ ಪ್ರವಾಹದ ಆತಂಕ ಎದುರಾಗಿದೆ.

ಮಲಪ್ರಭಾ ನದಿ ಕೂಡಾ ಉಕ್ಕಿ ಹರಿಯುತ್ತಿದೆ. ಇವತ್ತು ನವಿಲುತೀರ್ಥ ಡ್ಯಾಂ ನಿಂದ ಮಲಪ್ರಭಾ ನದಿಗೆ ೮ ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರ‌ನ್ನ ಹರಿ ಬಿಡಲಾಗಿದೆ. ಹೀಗಾಗಿ ಬಾದಾಮಿ, ಗುಳೇದಗುಡ್ಡ ಹಾಗೂ ಹುನಗುಂದ ತಾಲ್ಲೂಕಿನ ನದಿ ತೀರದ ಜನರಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಮಲಪ್ರಭಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಬಾದಾಮಿ ತಾಲೂಕಿನ ಗೋವಿನಕೊಪ್ಪ ಹಾಗೂ ಕೊಣ್ಣೂರ ಸಂಪರ್ಕ ಕಲ್ಪಿಸುವ ಹಳೆ ರಸ್ತೆ ಸಂಪೂರ್ಣ ಜಲಾವೃತ ಆಗಿದೆ.

ಘಟಪ್ರಭೆಯಲ್ಲಿ ಹೆಚ್ಚಿದ ಹರಿವು, ಇಳಿದ ಯುವಕ ನಾಪತ್ತೆ
ಈ ನಡುವೆ, ಘಟಪ್ರಭಾ ನದಿಗೆ ನೀರಿನ‌ ಹರಿವು ಹೆಚ್ಚಿದೆ. ಈ ಭಾಗದಲ್ಲಿ ನದಿಯಿಂದ ನೀರೆತ್ತಲು ಪಂಪ್‌ಗಳನ್ನು ಅಳವಡಿಸಲಾಗುತ್ತದೆ. ಹಾಗೆ ಇಟ್ಟ ಪಂಪನ್ನು ತೆಗೆಯಲೆಂದು ನದಿಗಿಳಿದ ಯುವಕನೊಬ್ಬ ನೀರಿನಲ್ಲಿ ನಾಪತ್ತೆಯಾಗಿದ್ದಾನೆ.

ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಚಿಕ್ಕಾಲಗುಂಡಿ ಗ್ರಾಮದಲ್ಲಿ ಘಟನೆ ನಡೆದಿದೆ. ಬಸಪ್ಪ ಇರ್ಕನ್ನವರ (38) ನಾಪತ್ತೆಯಾದವರು. ಈ ಘಟನೆಯಿಂದ ಕುಟುಂಬಿಕರು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದ್ದು, ಯುವಕನ ಹುಡುಕಾಟ ನಡೆಸಲಾಗುತ್ತಿದೆ. ಬೀಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ| Heavy Rain | ಉಕ್ಕಿ ಹರಿಯುವ ಸೇತುವೆ ದಾಟಲು ಜೆಸಿಬಿ ಮೊರೆ ಹೋದ ಶಾಲಾ ಮಕ್ಕಳು!

Exit mobile version