ಬೆಂಗಳೂರು/ಮೈಸೂರು: ಸಿದ್ದರಾಮೋತ್ಸವದ ಬಳಿಕ ಭಾರಿ ಉತ್ಸಾಹದಲ್ಲಿರುವ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರಿಗೆ ಈಗಲೂ ಹುಟ್ಟುಹಬ್ಬದ ಉಡುಗೊರೆಗಳು ಹರಿದುಬರುತ್ತಿವೆ. ಅವರ ೭೫ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮೈಸೂರಿನ ಅವರ ಅಭಿಮಾನಿಗಳು ಭರ್ಜರಿ ಗಾತ್ರದ ಗದೆಯನ್ನು ಗಿಫ್ಟ್ ಆಗಿ ನೀಡಿದ್ದಾರೆ.
ಶುಕ್ರವಾರ ಬೆಳಗ್ಗೆ ಬೆಂಗಳೂರಿನ ಸರ್ಕಾರಿ ನಿವಾಸಕ್ಕೆ ಭೇಟಿ ನೀಡಿದ ಮೈಸೂರಿನ ಬಿಸಿಲು ಮಾರಮ್ಮ ದೇವಸ್ಥಾನದ ಗುಡಪ್ಪ ಶಿವಬೀರಪ್ಪ ಹಾಗೂ ಸ್ನೇಹಿತರು 30 ಕೆಜಿ ಕಂಚಿನ ಗದೆಯನ್ನ ಗಿಫ್ಟ್ ಆಗಿ ನೀಡಿದ್ದಾರೆ. ಸಿದ್ದರಾಮಯ್ಯ ಅವರು ದೊಡ್ಡ ಗಾತ್ರದ ಈ ಗದೆಯನ್ನು ಕೈಯಲ್ಲಿ ಹಿಡಿದು ಸಂಭ್ರಮಿಸಿದರು.
ರಾಷ್ಟ್ರ ರಾಜಕಾರಣಕ್ಕೆ ಹೋಗಿ
ಈ ನಡುವೆ, ಮೈಸೂರಿನಲ್ಲಿ ಮಾತನಾಡಿದ ಜೆಡಿಎಸ್ ನಾಯಕ ಮತ್ತು ಶಾಸಕ ಸಾ.ರಾ. ಮಹೇಶ್ ಅವರು ಸಿದ್ದರಾಮಯ್ಯ ಅವರು ರಾಷ್ಟ್ರ ರಾಜಕಾರಣಕ್ಕೆ ಹೋದರೆ ಒಳಿತು ಎಂದು ಸಲಹೆ ನೀಡಿದ್ದಾರೆ.
ʻʻಸಿದ್ದರಾಮಯ್ಯ ಅವರು ಒಂದು ಬಾರಿ ಸಿಎಂ ಆಗಿರೋದು ಸಾಕು. ಮತ್ತೆ ಆಗುವುದೇನೂ ಬೇಡ. ಜ್ಯೂನಿಯರ್ ಗಳಿಗೆ ಬಿಟ್ಟು ಕೊಡಲಿ. ಅವರು ರಾಜ್ಯ ರಾಜಕಾರಣ ಬಿಟ್ಟು ರಾಷ್ಟ್ರ ರಾಜಕಾರಣದ ಬಗ್ಗೆ ಯೋಚನೆ ಮಾಡಲಿ.
ದೇಶದಲ್ಲಿ ಅವರು ಪಾರ್ಟಿ ಕಟ್ಟಲಿʼʼ ಎಂದು ಸಾ.ರಾ. ಹೇಳಿದ್ದಾರೆ.
ʻʻಕಳೆದ ಚುನಾವಣೆಯ ಸಂದರ್ಭದಲ್ಲೇ ಸಿದ್ದರಾಮಯ್ಯ ಕೊನೆಯ ಚುನಾವಣೆ ಅಂದಿದ್ದರು. ಈಗ ಮತ್ತೆ ಇದೇ ಕೊನೆ ಚುನಾವಣೆ ಅಂತಿದ್ದಾರೆʼʼ ಎಂದು ಹೇಳಿದ ಸಾ.ರಾ. ʻʻಸಿದ್ದರಾಮಯ್ಯ ಅವರಂಥವರು ಸಕ್ರಿಯ ರಾಜಕಾರಣದಲ್ಲಿ ಇರಬೇಕು. ರಾಜ್ಯಕ್ಕಿಂತ ದೇಶಕ್ಕೆ ಸಿದ್ದರಾಮಯ್ಯ ಅವಶ್ಯಕತೆ ಕಾಣುತ್ತಿದೆʼʼ ಎಂದರು.
ಇದನ್ನೂ ಓದಿ | ಆಜಾನ್ ಕೇಳಿ ಭಾಷಣ ನಿಲ್ಲಿಸಿದ ಸಿದ್ದರಾಮಯ್ಯ: ವಿದುರಾಶ್ವತ್ಥದಲ್ಲಿ ಕಾರ್ಯಕ್ರಮ