ಮಂಗಳೂರು : ಅಕ್ರಮವಾಗಿ ಗೋ ಹತ್ಯೆ, ಗೋವು ಕಳುವು ಅಪರಾಧ ಪ್ರಕರಣಗಳನ್ನು ಮಟ್ಟ ಹಾಕಲು ಆರೋಪಿಗಳ ಆಸ್ತಿ ಮುಟ್ಟುಗೋಲು ದಂಡನಾಸ್ತ್ರ ಪ್ರಯೋಗಕ್ಕೆ ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರು ಮುಂದಾಗಿದ್ದಾರೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಈ ಠಾಣೆ ವ್ಯಾಪ್ತಿಯ ಪ್ರಕರಣವೊಂದರಲ್ಲಿ ಗೋ ಹತ್ಯೆ ಮತ್ತು ಗೋಮಾಂಸ ಮಾರಾಟ ಆರೋಪಿಗೆ ಈ ದಂಡನೆಯ ಅಸ್ತ್ರ ಬಳಕೆ ಮಾಡಲಾಗಿದೆ. ಇದಕ್ಕೆ ಮಾಜಿ ಸಚಿವ ಯು.ಟಿ. ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರೋಪಿಗಳ ಸ್ವತ್ತು, ಅಕ್ರಮ ಕಸಾಯಿಖಾನೆ ಜಾಗ, ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ವಾಹನ, ಈ ಪ್ರಕರಣದ ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಮುಂದಾಗಲಾಗುತ್ತಿದೆ.
ಕಳೆದ ಭಾನುವಾರ (ಜು.3) ಅರ್ಕುಳ ಎಂಬಲ್ಲಿ ದಾಳಿ ನಡೆಸಿ 95 ಕೆ.ಜಿ ಗೋಮಾಂಸವನ್ನು ಪೊಲೀಸರು ವಶ ಪಡಿಸಿಕೊಂಡಿದ್ದರು. ಖಾಲಿದ್ ಎಂಬವರ ಶೆಡ್‌ನಲ್ಲಿ ಬಾತಿಶ್ ಎಂಬಾತನಿಂದ ಗೋ ಹತ್ಯೆ ಆಗಿತ್ತು.
ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಸೂಚನೆ ಮೇರೆಗೆ ಕಂದಾಯ ಇಲಾಖೆಯಿಂದ ಆಸ್ತಿ ಮುಟ್ಟುಗೋಲು ಅಸ್ತ್ರ ಪ್ರಯೋಗ ಮಾಡಲಾಗುತ್ತಿದೆ. ಇದೀಗ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020 ರ ಕಲಾಂ 8 (5) ಅಡಿಯಲ್ಲಿ ಪ್ರಕ್ರಿಯೆ ಶುರುವಾಗಿದೆ. ಈಗಾಗಲೇ ಜು.12 ರಂದು ಮಂಗಳೂರು ಎಸಿ ಕೋರ್ಟ್‌ಗೆ ವಿಚಾರಣೆಗೆ ಹಾಜರಾಗಲು ಆರೋಪಿಗಳಿಗೆ ನೋಟಿಸ್ ನೀಡಲಾಗಿದೆ ಎನ್ನಲಾಗಿದೆ.
ಏನಿದು ಆಸ್ತಿ ಮುಟ್ಟು ಗೋಲು ?
ಅಕ್ರಮವಾಗಿ ಗೋ ಹತ್ಯೆ, ಗೋವುಗಳ ಕಳುವು ಅಪರಾಧ ಪ್ರಕರಣ ಮಟ್ಟ ಹಾಕಲು ಆರೋಪಿಗಳ ಆಸ್ತಿ ಮುಟ್ಟುಗೋಲು ದಂಡನಾಸ್ತ್ರ ಬಳಸಲಾಗುತ್ತದೆ. ಆರೋಪ ರುಜುವಾತಾದರೆ ಅಂಥವರ ಆಸ್ತಿ ಮುಟ್ಟುಗೋಲಿಗೆ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆ ಮತ್ತು ಕಂದಾಯ ಇಲಾಖೆಗೆ ಸೂಚನೆ ನೀಡಲಾಗುತ್ತದೆ. ಪೊಲೀಸರು ಆರೋಪಿಗಳಿಂದ ಅಕ್ರಮ ಗೋ ಹತ್ಯೆ, ಗೋವುಗಳ ಕಳವು ಪ್ರಕರಣ ದಾಖಲಿಸಿದ ಕೂಡಲೇ ಕಂದಾಯ ಇಲಾಖೆ ತಕ್ಷಣ ಆರೋಪಿಗಳ ಆಸ್ತಿ ಮುಟ್ಟುಗೋಲಿಗೆ ಬೇಕಾದ ಕ್ರಮ ಕೈಗೊಳ್ಳುತ್ತದೆ.
ಈ ಕ್ರಮವನ್ನು ಕೈಗೊಳ್ಳುವುದಾಗಿ ಈ ಹಿಂದೆ ಶಾಸಕ ಡಾ.ಭರತ್ ಶೆಟ್ಟಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಬಗ್ಗೆ ಇದೀಗ ಪೊಲೀಸರು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರುತ್ತಿದ್ದಾರೆ. ಹೈನುಗಾರಿಕೆ ನಡೆಸಿ, ಜೀವನ ನಡೆಸುವವರ ಹಟ್ಟಿಯಿಂದ ದನ ಕಳ್ಳತನ ಮಾಡುವುದು, ಬೀಡಾಡಿ ದನಗಳ ಕದ್ದು ಹತ್ಯೆ ಮಾಡುವುದು, ಇಂತಹ ಪ್ರಕರಣಕ್ಕೂ ಕ್ರಮ ಕೈಗೊಳ್ಳಬೇಕೆಂದು ಆದೇಶಿಸಿದ್ದರು.
ಯು.ಟಿ. ಖಾದರ್ ಆಕ್ರೋಶ
ಅಕ್ರಮ ಗೋ ಸಾಗಾಟ ಹಾಗೂ ಮಾರಾಟಗಾರ ಆಸ್ತಿ ಜಪ್ತಿ ವಿಚಾರ ಸರಿಯಲ್ಲ ಎಂದು ಮಾಜಿ ಸಚಿವ ಯು.ಟಿ.ಖಾದರ್ ಸರ್ಕಾರದ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೋಹತ್ಯೆ ನಿಷೇಧ ಕಾನೂನನ್ನು ಎಲ್ಲರೂ ಪಾಲಿಸಲೇಬೇಕು. ಆದರೆ, ಕಾಯ್ದೆಯಲ್ಲಿ 14 ವರ್ಷ ಮೇಲಿನ ಕೋಣ ವಧೆಗೆ ಅವಕಾಶ ಇದೆ. ಈ ಬಗ್ಗೆ ಜನರಿಗೆ ಸರ್ಕಾರ ಮನದಟ್ಟು ಮಾಡುವ ಪ್ರಯತ್ನ ಮಾಡಿಲ್ಲ. ಜನರ ಸಮಸ್ಯೆಯನ್ನು, ಗೊಂದಲವನ್ನು ಬಗೆಹರಿಸುವ ಬದಲು ಶಾಸಕರು ದನದ ಹಿಂದೆ ಬಿದ್ದಿದ್ದಾರೆ. ಬೇಕಾಬಿಟ್ಟಿ ಹೇಳಿಕೆ ನೀಡುವುದನ್ನು ಶಾಸಕರು ನಿಲ್ಲಿಸಬೇಕು ಎಂದು ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ವಿರುದ್ಧ ಆಕ್ರೋಶವನ್ನು ಹೊರಹಾಕಿದರು.