Site icon Vistara News

‌ಹಳೆ ಮೈಸೂರಿನಲ್ಲಿ ಶೇ.50 ಸೀಟು ಗೆಲ್ಲುತ್ತದೆ ಬಿಜೆಪಿ: ಬೂತ್ ವಿಜಯ ಅಭಿಯಾನಕ್ಕೆ ಅಮಿತ್ ಶಾ ಚಾಲನೆ ಎಂದ ಡಿ.ವಿ. ಸದಾನಂದಗೌಡ

former-chief-minister-dv-sadananda-gowda-says-bjp-will-win-fifty-percent-seats-in-old-mysuru-region

ಬೆಂಗಳೂರು: ರಾಜ್ಯದಲ್ಲಿ ಸುಶಾಸನ ಮತ್ತು ಅಭಿವೃದ್ಧಿ ಕಾರ್ಯಗಳನ್ನು ನೀಡುವ ಬಿಜೆಪಿ ಸರ್ಕಾರ ಮುಂದುವರಿಯಬೇಕು ಎಂಬ ದೃಷ್ಟಿಯಿಂದ ಕೇಂದ್ರ ಗೃಹ ಮತ್ತು ಸಹಕಾರಿ ಸಚಿವ ಅಮಿತ್ ಶಾ ಅವರ ಪ್ರವಾಸ ಅತ್ಯಂತ ಮಹತ್ವದ್ದಾಗಿದೆ. ಬಿಜೆಪಿ ರಿಪೋರ್ಟ್ ಕಾರ್ಡ್ ಮುಂದಿಟ್ಟು ಮತ ಕೇಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಬೆಂಗಳೂರು ಉತ್ತರ ಸಂಸದ ಡಿ.ವಿ. ಸದಾನಂದಗೌಡ ಅವರು ತಿಳಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಿಪೋರ್ಟ್ ಕಾರ್ಡ್ ಮುಂದಿಟ್ಟು ಬಳಿಕ ಭವಿಷ್ಯದ ಯೋಜನೆಗೆ ಜನಮತ ಲಭಿಸಿದೆ. ಮಂಡ್ಯದಲ್ಲಿ ಅಮಿತ್ ಶಾ ಅವರು ಈ ಕೆಲಸವನ್ನು ಮಾಡಲಿದ್ದಾರೆ. 1 ಲಕ್ಷ ಜನರು ಸೇರುವ ಸಮಾವೇಶ ಇದಾಗಲಿದೆ ಎಂದು ತಿಳಿಸಿದರು.

ನಮ್ಮ ಪಕ್ಷಕ್ಕೆ ಇವೆರಡು ದಿನಗಳು ಮಹತ್ವದ್ದು. ಪಕ್ಷವು ಚುನಾವಣೆ ಕೆಲಸಕ್ಕೆ ವೇಗ ನೀಡಲು ಈಗಾಗಲೇ ಜನಸಂಕಲ್ಪ ಸಭೆಗಳನ್ನು ನಡೆಸಿದೆ. ಜನವರಿ 2ರಿಂದ 15ರವರೆಗೆ ಬಿಜೆಪಿ ‘ಬೂತ್ ವಿಜಯ ಅಭಿಯಾನ’ವನ್ನು ಹಮ್ಮಿಕೊಂಡಿದೆ. ಅದನ್ನು ಡಿಸೆಂಬರ್‌ 31ರಂದು ಬೆಂಗಳೂರಿನಲ್ಲಿ ಅಮಿತ್ ಶಾ ಅವರು ಉದ್ಘಾಟನೆ ಮಾಡಲಿದ್ದಾರೆ ಎಂದು ವಿವರಿಸಿದರು.

ಡಿಸೆಂಬರ್‌ 30ರಂದು ಮತ್ತು 31ರಂದು ರಾಜ್ಯ ಪ್ರವಾಸ ಮಾಡಲಿದ್ದಾರೆ. ದೇಶದ ಎಲ್ಲ ಕೆಲಸ ಕಾರ್ಯಗಳು, ಪಕ್ಷದ ಕಾರ್ಯ ಇದರಿಂದ ಆಗಲಿದೆ. ಪಕ್ಷದ ನೂತನ ಕ್ರಿಯಾಯೋಜನೆಗಳ ಕುರಿತು ಅಮಿತ್ ಶಾ ಅವರು ಮಾರ್ಗದರ್ಶನ ನೀಡುವರು. ಬೆಂಗಳೂರಿನ ಮೂರು ಸಂಘಟನಾ ಜಿಲ್ಲೆಗಳಲ್ಲಿ 8,200 ಬೂತ್‍ಗಳಿವೆ. ನಗರ ಜಿಲ್ಲೆಗಳ ಅಧ್ಯಕ್ಷರಾದ ಬಿ. ನಾರಾಯಣಗೌಡ, ಎನ್.ಆರ್. ರಮೇಶ್, ಜಿ. ಮಂಜುನಾಥ್ ಅವರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಕಾರ್ಯಕರ್ತರನ್ನು ಚುರುಕುಗೊಳಿಸಿ ಅವರಿಗೆ ಮಾರ್ಗದರ್ಶನ ನೀಡಲಿದ್ದಾರೆ. ಶೇ. 100 ಮತದಾನ ಮಾಡುವಂತೆ ಪ್ರೇರೇಪಿಸುವ ಕಾರ್ಯ ನಡೆಯಲಿದೆ. 20 ಲಕ್ಷ ಕಾರ್ಯಕರ್ತರು ಈ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ. ʼಮನ್ ಕಿ ಬಾತ್’ ಗೆ 60 ಸಾವಿರ ವೆಬ್ ಲಿಂಕ್ ಡೌನ್‍ಲೋಡ್ ಆ ಅವಧಿಯಲ್ಲಿ ಆಗಬೇಕೆಂಬ ಪ್ರಯತ್ನ ನಡೆಯಲಿದೆ. ಮತದಾರರಿಗೆ ಜಾಗೃತಿ ಮೂಡಿಸುವ ಕಾರ್ಯ ನಡೆಸಲಾಗುತ್ತದೆ ಎಂದು ವಿವರ ನೀಡಿದರು.

ಚುನಾವಣೆಗೆ ನಾವು ಸದಾ ಸನ್ನದ್ಧರಾಗಿ ಇರುತ್ತೇವೆ. ನಮ್ಮಲ್ಲಿ ಎಲ್ಲ ಲೈಟಿಂಗ್ ವ್ಯವಸ್ಥೆ ರೆಡಿ ಇದೆ. ಮೈನ್ ಸ್ವಿಚ್ ಆನ್ ಮಾಡಿದರೆ ಆಯ್ತು. ಎಲ್ಲ ಕಡೆ ಲೈಟ್‍ಗಳು ಆನ್ ಆಗುತ್ತವೆ. ಅಮಿತ್ ಶಾ ಅವರು ಕೊಡುವ ಮಾರ್ಗದರ್ಶನ ನಮಗೆ ಸಿಗಲಿದೆ. ಹಿಂದೆ ಹಳೆ ಮೈಸೂರು ಭಾಗದಲ್ಲಿ ನಮಗೆ ಕಡಿಮೆ ಬೆಂಬಲ ಇತ್ತು. ಈಗ ‘ಮಿಷನ್ 150’ ಅಡಿಯಲ್ಲಿ ಹಳೆ ಮೈಸೂರು ಭಾಗದಲ್ಲಿ ಬಲವರ್ಧನೆ ಆಗಿದೆ. ಅಲ್ಲಿನ 89 ಕ್ಷೇತ್ರಗಳಲ್ಲಿ ಶೇ 50ರಷ್ಟು ಶಾಸಕ ಸ್ಥಾನ ಗೆಲ್ಲಲು ಗುರಿ ಇಟ್ಟುಕೊಂಡಿದ್ದೇವೆ. ಇದನ್ನು ಸವಾಲಾಗಿ ಸ್ವೀಕರಿಸಲಿದ್ದೇವೆ. ದಿನನಿತ್ಯ ಬೇರೆಬೇರೆ ಕಡೆಯಿಂದ ಬಿಜೆಪಿಯತ್ತ ಮುಖಂಡರು ಸೇರುವುದನ್ನು ನೀವೂ ಕಂಡಿದ್ದೀರಿ. ಇವತ್ತು ನಮ್ಮ ವಿಚಾರ- ಗುರಿಗೆ ವೇಗ ಸಿಕ್ಕಿದೆ ಎಂದು ಪ್ರಶ್ನೆಗೆ ಉತ್ತರಿಸಿದರು.

ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಬಿ. ನಾರಾಯಣಗೌಡ, ದಕ್ಷಿಣ ಜಿಲ್ಲಾಧ್ಯಕ್ಷ ಎನ್.ಆರ್. ರಮೇಶ್, ಕೇಂದ್ರ ಜಿಲ್ಲಾಧ್ಯಕ್ಷ ಜಿ. ಮಂಜುನಾಥ್ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ | ಬೆಳಗಾವಿ ಅಧಿವೇಶನ | ಅಮಿತ್‌ ಶಾ ಆಮೇಲ್‌ ಬನ್ರಿ ಅಂತ ಹೇಳ್ಬೇಕಿತ್ತು? ಆ ದಮ್‌ ಇಲ್ಲ ಇವ್ರಿಗೆ: ಸದನ ಮೊಟಕಿಗೆ ಸಿದ್ದರಾಮಯ್ಯ ಕುಟುಕು

Exit mobile version