ಶಿವಮೊಗ್ಗ: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಅನೇಕ ವರ್ಷಗಳಿಂದ ತಾವು ಪ್ರಿತನಿಧಿಸುತ್ತಿರುವ ಶಿಕಾರಿಪುರ ಕ್ಷೇತ್ರದಲ್ಲಿ ತಮ್ಮ ಎರಡನೇ ಪುತ್ರ ಬಿ.ವೈ. ವಿಜಯೇಂದ್ರ ಸ್ಪರ್ಧೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಶಿಕಾರಿಪುರದಲ್ಲಿ ಅಂಜನಾ ಜಲಾಶಯಕ್ಕೆ ಬಾಗಿನ ಸಲ್ಲಿಕೆ ಕಾರ್ಯಕ್ರಮದ ನಂತರ ವೇದಿಕೆಯಿಂದಲೇ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.
ನನಗೆ ಇಲ್ಲಿಯವರೆಗೆ ನೀಡಿರುವಂತೆಯೇ ಪುತ್ರ ಬಿ.ವೈ. ವಿಜಯೇಂದ್ರ ಅವರಿಗೂ ಸಹಕಾರ ನೀಡಿ. ನನ್ನನ್ನು ಗೆಲ್ಲಿಸಿದಂತೆಯೇ ಹೆಚ್ಚಿನ ಅಂತರದಲ್ಲಿ ಅವನನ್ನೂ ಗೆಲ್ಲಿಸಿ ಎಂದು ವೇದಿಕೆಯಿಂದಲೇ ಘೋಷಣೆ ಮಾಡಿದರು. ಈ ಸಮಯದಲ್ಲಿ ವೇದಿಕೆಯಲ್ಲೇ ಇದ್ದ ವಿಜಯೇಂದ್ರ ಎದ್ದುನಿಂತು ಜನರಿಗೆ ನಮಸ್ಕರಿಸಿದರು. ನೆರೆದ ಜನರೆಲ್ಲರೂ ಶಿಳ್ಳೆ, ಚಪ್ಪಾಳೆ ಮೂಲಕ ಘೋಷಣೆಯನ್ನು ಸ್ವಾಗತಿಸಿದರು.
ನಂತರ ಮಾತನಾಡಿದ ವಿಜಯೇಂದ್ರ, ತಂದೆಯವರ ಮಾರ್ಗದರ್ಶನ ಹಾಗೂ ಪಕ್ಷದ ನಿರ್ಧಾರದಂತೆ ನಡೆದುಕೊಳ್ಳುತ್ತೇನೆ. ಅದನ್ನು ಆಧರಿಸಿಯೇ ನಾನು ಮುಂದಿನ ನಿರ್ಧಾರ ಮಾಡುತ್ತೇನೆ. ರಾಜ್ಯ ಉಪಾಧ್ಯಕ್ಷನಾಗಿ ರಾಜ್ಯಾದ್ಯಂತ ಪ್ರವಾಸ ಮಾಡುವುದು ನನ್ನ ಆದ್ಯ ಕರ್ತವ್ಯ. ಹಿಂದಿನಿಂದಲೂ ಅದನ್ನೇ ಮಾಡಿದ್ದೇನೆ. ಮುಂದೆಯೂ ಅದನ್ನು ಮುಂದುವರಿಸುತ್ತೇನೆ.
ಶಿಕಾರಿಪುರದ ಮುಖಂಡರು, ಕಾರ್ಯಕರ್ತರು ಈ ಕುರಿತು ತಂದೆಯವರ ಮೇಲೆ ಒತ್ತಡ ಹೇರಿದ್ದರು. ತಿಂಗಳ ಹಿಂದೆ ಬೆಂಗಳೂರಿಗೂ ಬಂದು ಕೋರಿದ್ದರು. ಅದರಂತೆ ತಂದೆಯವರು ಇಂದು ತೀರ್ಮಾನ ಪ್ರಕಟಿಸಿದ್ದಾರೆ. ಇದರ ಜತೆ ಪಕ್ಷ ಏನು ತೀರ್ಮಾನ ಮಾಡುತ್ತದೆಯೋ ಅದನ್ನು ಅಧರಿಸಿ, ನಾನು ನಿರ್ಧಾರ ಮಾಡುತ್ತೇನೆ.
ರಾಜಕೀಯ ನಿವೃತ್ತಿಯೇ ಎಂಬ ಕುರಿತು ಪ್ರತಿಕ್ರಿಯಿಸಿ, ಯಡಿಯೂರಪ್ಪನವರಿಗೆ ನಿವೃತ್ತಿ ಎನ್ನುವುದು ಸಂಬಂಧಿಸುವುದಿಲ್ಲ. ಅವರ ನಿಘಂಟಿನಲ್ಲಿ ನಿವೃತ್ತಿ ಎನ್ನುವ ಪದ ಇಲ್ಲ. ಹಿಂದೆ ಕೂಡ ಬಿಜೆಪಿ ಸಂಘಟನೆ ಕೆಲಸ ಮಾಡಿದ್ದರು, ಮುಂದೆಯೂ ಮಾಡುತ್ತಾರೆ.
ಇದನ್ನೂ ಓದಿ | ವಿಧಾನಸಭೆಯಲ್ಲಿ ಬಿ.ವೈ. ವಿಜಯೇಂದ್ರ ಸ್ಪರ್ಧೆ ಖಚಿತ; ತಂದೆಯ ಕ್ಷೇತ್ರದಿಂದಲೇ ʼಶಿಕಾರಿʼ?