Site icon Vistara News

ರಾಷ್ಟ್ರಪತಿ ಚುನಾವಣೆ | ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮುಗೆ ಜೆಡಿಎಸ್‌ ಬೆಂಬಲ?

HDK has announced an incentive of Rs 2 lakh for women marrying farmers' sons

ಬೆಂಗಳೂರು: ಜೆಡಿಎಸ್‌ ಪಕ್ಷವು ಬಿಜೆಪಿಯ ಬಿ ಟೀಮ್‌ ಎಂಬ ಆರೋಪದ ನಡುವೆಯೇ ಅಚ್ಚರಿಯ ನಿರ್ಧಾರವೊಂದನ್ನು ಜೆಡಿಎಸ್‌ ಮುಖಂಡರು ಕೈಗೊಂಡಂತಿದೆ. ಬಿಜೆಪಿ ನಾಯಕರ ವಿರುದ್ಧ ಒಂದಲ್ಲ ಒಂದು ವಿಚಾರದಲ್ಲಿ ಹರಿಹಾಯುತ್ತಲೇ ಇರುವ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಇದೀಗ ಎನ್‌ಡಿಎ ಘೋಷಿಸಿರುವ ರಾಷ್ಟ್ರಪತಿ ಅಭ್ಯರ್ಥಿಗೆ ಬೆಂಬಲ ನೀಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ಜೆಡಿಎಸ್‌ ಕಚೇರಿ ಜೆಪಿ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ್ರೌಪದಿ ಮುರ್ಮು ಅವರಿಗೆ ಬಹುಮತದ ಸಂಖ್ಯೆ ಈಗಾಗಲೇ ಸಿಕ್ಕಿದೆ. ನಮ್ಮ ಪಕ್ಷದ ಬೆಂಬಲದ ಅವಶ್ಯಕತೆ ಇಲ್ಲ. ಆದರೂ ನಮ್ಮ ಬೆಂಬಲ ಕೇಳಿದ್ದಾರೆ. ಅದು ಅವರ ಔದಾರ್ಯ. ನನ್ನ ಪ್ರಕಾರ ಮುರ್ಮು ಈಗಾಗಲೇ ಗೆದ್ದಾಗಿದೆ.‌ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಮುರ್ಮು ಅವರು ಎರಡು ಬಾರಿ ದೂರವಾಣಿ ಕರೆ ಮಾಡಿ ಬೆಂಬಲಕ್ಕೆ ಮನವಿ ಮಾಡಿದ್ದಾರೆ. ಬೆಂಗಳೂರಿಗೆ ಬಂದು ಮನವಿ ಮಾಡಲು‌ ಅವರು ಸಮಯ ಕೋರಿದ್ದರು. ಅವರು ಖುದ್ದು ಬಂದು ಮನವಿ ಮಾಡುವ ಅವಶ್ಯಕತೆ ಇಲ್ಲ ಎಂದು ದೇವೇಗೌಡರು ಹೇಳಿದ್ದಾರೆ ಎಂದರು.

ಇದನ್ನೂ ಓದಿ | ಎಲ್ಲರ ಬೆನ್ನಿಗೂ ಚೂರಿ ಹಾಕಿದ್ದು ನಾನೆ, ಏನಿವಾಗ?: ಎಚ್‌.ಡಿ. ಕುಮಾರಸ್ವಾಮಿ

ರಾಷ್ಟ್ರಪತಿ ಅಭ್ಯರ್ಥಿಯಾಗಿರುವ ಮುರ್ಮು ಹಿನ್ನೆಲೆ ಏನು, ಜೀವನದಲ್ಲಿ ಎಷ್ಟು ಕಷ್ಟ ಅನುಭವಿಸಿದ್ದಾರೆ, ತಳಮಟ್ಟದ ಸಮುದಾಯದಿಂದ ಹೇಗೆ ಬೆಳೆದು ಬಂದಿದ್ದಾರೆ ಎಂಬುದನ್ನು ನಾನು ಅರಿತಿದ್ದೇನೆ. ಆದಿವಾಸಿ ಸಮುದಾಯದ ಮಹಿಳೆಯೊಬ್ಬರು ಇಷ್ಟು ದೊಡ್ಡ ಸಾಧನೆ ಮಾಡಿರುವುದು ಸ್ಫೂರ್ತಿದಾಯಕ. ಇವರನ್ನು ಬೆಂಬಲಿಸಲು ಕಾಂಗ್ರೆಸ್, ಬಿಜೆಪಿ ಎನ್ನುವ ಪ್ರಶ್ನೆ ಉದ್ಭವಿಸುವುದಿಲ್ಲ. ಬಿಜೆಪಿ ಬಿ ಟೀಂ ಎನ್ನುವ ಪ್ರಶ್ನೆಯೂ ರಾಷ್ಟ್ರಪತಿ ಚುನಾವಣೆಯಲ್ಲಿ ಬರುವುದಿಲ್ಲ ಎಂದರು.

ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಳ ; ಸರ್ಕಾರಕ್ಕೆ ಮತ್ತೆ ಬಿಸಿ ಮುಟ್ಟಿಸಿದ ದಳಪತಿ

ರಾಜ್ಯದ ಜನರಿಗೆ ವಿದ್ಯುತ್ ಶಾಕ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಎಚ್‌ಡಿಕೆ, ಈಗ ಹೆಚ್ಚಳ ಮಾಡಿ ಚುನಾವಣೆ ಸಮಯದಲ್ಲಿ ‌ಕಡಿಮೆ ಮಾಡುತ್ತಾರೆ. ಎರಡು ರಾಷ್ಟ್ರೀಯ ಪಕ್ಷಗಳು ರಾಜ್ಯವನ್ನು ಹಾಳು ಮಾಡಿವೆ. ವಿದ್ಯುತ್ ಸಚಿವರು ಕೆಇಆರ್‌ಸಿ ದರ ಹೆಚ್ಚಳ ಮಾಡುತ್ತದೆಂದು ಹೇಳುತ್ತಾರೆ. ನಿವೃತ್ತ ಐಎಎಸ್ ಅಧಿಕಾರಿ ಗುರು ಚರಣ್, ಇಂಧನ ಇಲಾಖೆ ಪರಿಸ್ಥಿತಿ ಬಗ್ಗೆ ವರದಿ ಕೊಟ್ಟಿದ್ದಾರೆ. ಎಸ್ಕಾಂಗಳು ಸೇರಿ ಎಲ್ಲ ಕಂಪನಿಗಳ ಪರಿಸ್ಥಿತಿ ಬಗ್ಗೆ ವರದಿ ನೀಡಿದ್ದಾರೆ. ಈ ವರದಿಯಲ್ಲಿ 30 ಸಾವಿರ ಕೋಟಿ ರೂ. ಹಣ ಸರ್ಕಾರದಿಂದಲೇ ಕೆಇಆರ್‌ಸಿಗೆ ಕೊಡಬೇಕು. ನಾನು ಸಿಎಂ ಆಗಿದ್ದಾಗ ಎಸ್ಕಾಂ ಸೇರಿ ಎಲ್ಲ ಕಂಪನಿಗಳಿಗೆ ನನ್ನ ಕಾಲದಲ್ಲಿ 13-14 ಸಾವಿರ ಕೋಟಿ ರೂ. ಮಾತ್ರ ಕೊಡಬೇಕಿತ್ತು. 3 ವರ್ಷಕ್ಕೆ ಬಿಜೆಪಿ-ಕಾಂಗ್ರೆಸ್ ಸರ್ಕಾರಗಳು 30 ಸಾವಿರ ಕೋಟಿ ಮಾಡಿವೆ. ಬುಕ್ಸ್ ಆಫ್ ಅಕೌಂಟ್‌ನಲ್ಲಿ ಮಾತ್ರ ಲಾಭ ತೋರಿಸಿಕೊಂಡಿದ್ದಾರೆ ಎಂದು ದೂರಿದರು.

ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ನಗರ ಜೆಡಿಎಸ್ ಅಧ್ಯಕ್ಷ ಆರ್. ಪ್ರಕಾಶ್‌ ಹಾಜರಿದ್ದರು.

ಇದನ್ನೂ ಓದಿ | ಬಿಜೆಪಿ ಎಂದರೆ ಬೆಲೆ ಏರಿಕೆ, ಬೆಲೆ ಏರಿಕೆ ಎಂದರೆ ಬಿಜೆಪಿ: ಕುಮಾರಸ್ವಾಮಿ ಕಿಡಿ

Exit mobile version