ಮೈಸೂರು: ವಿಧಾನಸಭಾ ಚುನಾವಣೆ (Karnataka Election) ದಿನಾಂಕ ಘೋಷಣೆಯಾದ ಬೆನ್ನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ಜಿಲ್ಲೆಯ ವರುಣ ಕ್ಷೇತ್ರದಲ್ಲಿ ಅಧಿಕೃತವಾಗಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ವರುಣ ಕ್ಷೇತ್ರದ ಬಿಳುಗಲಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಯನ್ನು ಸಿದ್ದರಾಮಯ್ಯ ಸೋಮವಾರ ಅನಾವರಣ ಮಾಡಿದ್ದು, ಇದಕ್ಕೂ ಮುನ್ನ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿ ಮತಬೇಟೆ ಆರಂಭಿಸಿದರು.
ಬಿಳುಗಲಿ ಗ್ರಾಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕಾರ್ಯಕರ್ತರು ಬೃಹತ್ ಹೂವಿನ ಹಾರ ಹಾಕಿ, ಹೂ ಮಳೆ ಸುರಿಸಿ ಭರ್ಜರಿ ಸ್ವಾಗತ ಕೋರಿದರು. ರೋಡ್ ಶೋದಲ್ಲಿ ಜೈ ಭೀಮ್ ಧ್ವಜ ಹಿಡಿದು ಸಿದ್ದರಾಮಯ್ಯ ಸಾಗಿದ್ದು ಕಂಡುಬಂತು. ಸಿದ್ದರಾಮಯ್ಯಗೆ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಸುನೀಲ್ ಬೋಸ್ ಸಾಥ್ ನೀಡಿದರು.
ಇದನ್ನೂ ಓದಿ | Karnataka Election: ಮೇ 10ರಂದು ಕರ್ನಾಟಕ ಚುನಾವಣೆ; ಮೇ 13ಕ್ಕೆ ಫಲಿತಾಂಶ ಎಂದು ಘೋಷಿಸಿದ ಚುನಾವಣಾ ಆಯೋಗ
ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ಬರೆದು ತಳ ಸಮುದಾಯ, ಅನ್ಯಾಯಕ್ಕೆ ಒಳಗಾಗಿದ್ದವರನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನಿಸಿದರು. ದೇಶದ ಸಂಪತ್ತು, ಅಧಿಕಾರ, ಶಿಕ್ಷಣ ಕೆಲವೇ ಜನರ ಕೈಯಲ್ಲಿ ಇರಬಾರದು. ಎಲ್ಲರಿಗೂ ಹಂಚಿಕೆ ಆಗಬೇಕು. ಸಂಪತ್ತು ಉತ್ಪಾದಿಸಿರುವವರು ಜನ. ಹೀಗಾಗಿ ಬೆವರು ಸುರಿಸಿದವರೇ ಮಾಲೀಕರಾಗಬೇಕು.
ಸಾಮಾಜಿಕ, ಆರ್ಥಿಕ, ರಾಜಕೀಯ ಅಸಮಾನತೆ ಹೋಗಲಾಡಿಸುವುದೇ ಅಧಿಕಾರದಲ್ಲಿ ಇರುವವರ ಜವಾಬ್ದಾರಿ. ಇದು ಆರ್‌ಎಸ್‌ಎಸ್, ಬಿಜೆಪಿಯವರಿಗೆ ಇಷ್ಟವಿಲ್ಲ ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ಯಾರೇ ಅಭ್ಯರ್ಥಿಯಾಗಲಿ, ಬಿಜೆಪಿಯನ್ನು ತಿರಸ್ಕಾರ ಮಾಡಬೇಕು
ದಲಿತರು, ಹಿಂದುಳಿದವರು, ಮಹಿಳೆಯರು ಹಾಗೂ ರೈತರು ಬಿಜೆಪಿಗೆ ಮತ ಹಾಕಬಾರದು. ಯಾರೇ ಅಭ್ಯರ್ಥಿಯಾದರೂ ಬಿಜೆಪಿಯನ್ನು ಸೋಲಿಸಬೇಕು. ನಾನು ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಗುತ್ತಿಗೆಯಲ್ಲಿ ಮೀಸಲಾತಿ ಜಾರಿ ಮಾಡಿದೆ. ಈ ಕಾನೂನನ್ನು ದೇಶದಲ್ಲೇ ಮೊದಲು ಕಾಂಗ್ರೆಸ್ ಸರ್ಕಾರ ಮಾಡಿದೆ. ಕೇಂದ್ರ ಸರ್ಕಾರ ದಲಿತರಿಗೆ ವಿರುದ್ಧವಾಗಿದೆ. ಎಸ್‌ಸಿ, ಎಸ್‌ಟಿ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ಮುಂಬಡ್ತಿ ಮೀಸಲಾತಿ ತೆಗೆದು ಹಾಕಿತು. ನಿವೃತ್ತ ಮುಖ್ಯ ಕಾರ್ಯದರ್ಶಿ ರತ್ನಪ್ರಭ ನೇತೃತ್ವದಲ್ಲಿ ಸಮಿತಿ ಮಾಡಿ, ಅದರ ವರದಿ ಆಧಾರದ ಮೇಲೆ ಮೀಸಲಾತಿಯಲ್ಲಿ ಮುಂಬಡ್ತಿ ನೀಡಿದ್ದು ಕಾಂಗ್ರೆಸ್ ಸರ್ಕಾರ ಎಂದು ಹೇಳಿದರು.
ಬಿಜೆಪಿಯವರು ಕೋಟ್ಯಂತರ ರೂಪಾಯಿ ಲೂಟಿ ಹೊಡೆದಿದ್ದಾರೆ. ಸಿಎಂ, ಮಂತ್ರಿ, ಶಾಸಕರು ಕೋಟ್ಯಂತರ ರೂಪಾಯಿ ಲೂಟಿ ಹೊಡೆದಿದ್ದಾರೆ. ಚುನಾವಣೆಗೆ ಚೀಲ ಚೀಲ ಹಣ ತರುತ್ತಾರೆ. ಆದರೂ ಅವರನ್ನು ಪೊಲೀಸ್, ಐಟಿಯವರು ಅವರನ್ನು ಹಿಡಿಯಲ್ಲ. ನಮ್ಮ ಬಳಿಗೆ ಮಾತ್ರ ಬರುತ್ತಾರೆ. ಉಪ ಚುನಾವಣೆಗಳಲ್ಲಿ 20-25 ಕೋಟಿ ರೂಪಾಯಿ ತಂದು ಸುರಿದರು. ಇದಕ್ಕೆ ಕಡಿವಾಣ ಹಾಕಲು ಚುನಾವಣಾ ಆಯೋಗ ಮುಲಾಜಿಲ್ಲದೆ ಕೆಲಸ ಮಾಡಬೇಕು. ಪಾರದರ್ಶಕ ಚುನಾವಣೆ ನಡೆಯಬೇಕು. ವಿರೋಧ ಪಕ್ಷದವರಿಗೆ ಅನ್ಯಾಯ ಮಾಡಿ, ಆಡಳಿತ ಪಕ್ಷಕ್ಕೆ ಸಹಾಯ ಮಾಡಬಾರದು ಎಂದು ಹೇಳಿದರು.
ವರುಣ ನನ್ನ ಹುಟ್ಟೂರು. ನಾನು ಇಲ್ಲೇ ಸ್ಪರ್ಧೆ ಮಾಡುತ್ತೇನೆ. ಇಲ್ಲಿಂದಲೇ ಗೆದ್ದು ಪ್ರತಿಪಕ್ಷ ನಾಯಕ, ಮುಖ್ಯಮಂತ್ರಿ ಆಗಿದ್ದೆ. ಈಗ ಮತ್ತೆ ಬಂದಿದ್ದೇನೆ. ನಿಮ್ಮ ಸಹಮತ ಇದೆ ಅಲ್ಲವೇ? ಇಲ್ಲವೆಂದರೆ ಸ್ಪರ್ಧಿಸುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದಾಗ, ಹರ್ಷೋದ್ಘಾರದ ಮೂಲಕ ಸಿದ್ದರಾಮಯ್ಯಗೆ ಕಾರ್ಯಕರ್ತರು ಬೆಂಬಲ ಸೂಚಿಸಿದರು. ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಮುಂದೆ ಸರ್ಕಾರ ನಮ್ಮ ಕೈಗೆ ಬರುತ್ತೆ. ನಾನು ಪ್ರಚಾರಕ್ಕೆ ಬರಲ್ಲ. ಯತೀಂದ್ರ ನನ್ನ ಪರವಾಗಿ ಪ್ರಚಾರ ಮಾಡುತ್ತಾನೆ. ರಾಜ್ಯದಲ್ಲಿ ಸುತ್ತಿ ಕಾಂಗ್ರೆಸ್ ಅಧಿಕಾರಕ್ಕೆ ತರುತ್ತೇನೆ. ಕಾರ್ಯಕರ್ತರು ಒಗ್ಗಟ್ಟು, ಹುಮ್ಮಸ್ಸಿನಿಂದ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಇದನ್ನೂ ಓದಿ | Karnataka Election: ಚುನಾವಣೆ ಘೋಷಣೆ ಬೆನ್ನಿಗೇ ಗರ್ಜಿಸಿದ ಕಾಂಗ್ರೆಸ್: ʼಮತ್ತೆ ಗರ್ಜಿಸಲಿದೆ ಕರ್ನಾಟಕʼ ಅಭಿಯಾನ ಆರಂಭ
ಬಿ.ವೈ. ವಿಜಯೇಂದ್ರ ಹೆಸರು ಪ್ರಸ್ತಾಪಿಸದೇ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ರಾಜ್ಯದಲ್ಲಿ ಪಿಎಸ್‌ಐ ಹಗರಣ ನಡೆದಿದೆ. ಒಂದು ಹುದ್ದೆಗೆ 15-20 ಲಕ್ಷ ರೂ. ಲಂಚ ಪಡೆಯಲಾಗಿದೆ. ಎಲ್ಲವೂ ಯಡಿಯೂರಪ್ಪನ ಮಗನ ಮನೆಯಲ್ಲೇ ನಡೆದಿದೆ. ಇದನ್ನು ನಾನು ಹೇಳುತ್ತಿಲ್ಲ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾನೆ. ಹಗರಣದಲ್ಲಿ ಎಡಿಜಿಪಿ ಒಬ್ಬ ಜೈಲಿಗೆ ಹೋಗಿದ್ದಾನೆ. ಯತ್ನಾಳ್ ಸತ್ಯವನ್ನೇ ಒಪ್ಪಿಕೊಂಡಿದ್ದಾನೆ. ಸಿಎಂ ಆಗಬೇಕಾದರೆ 2500 ಕೋಟಿ ರೂಪಾಯಿ ಕೊಡಬೇಕು ಅಂತಲೂ ಯತ್ನಾಳ್ ಹೇಳಿದ್ದಾನೆ. ಯತ್ನಾಳ್ ಸುಳ್ಳು ಹೇಳಿದ್ದರೆ ಪಕ್ಷದಿಂದ ತೆಗೆದುಹಾಕಿ. ಯಾಕೆ ತೆಗೆದು ಹಾಕಿಲ್ಲ? ಸತ್ಯ ಹೇಳಿರುವುದರಿಂದ ಆತನನ್ನು ತೆಗೆದುಹಾಕಿಲ್ಲ ಎಂದು ಕಿಡಿಕಾರಿದರು.
ಸಿದ್ದರಾಮಯ್ಯರಿಂದ ನೀತಿ ಸಂಹಿತೆ ಉಲ್ಲಂಘನೆ
ಮೈಸೂರಿನ ವರುಣ ಕ್ಷೇತ್ರದ ಬಿಳುಗಲಿ ಗ್ರಾಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಂದ ಮೊದಲ ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ರೋಡ್ ಶೋ ವೇಳೆ ತಮಟೆ ಕಲಾವಿದರಿಗೆ 1000 ರೂಪಾಯಿ ಹಣ ಕೊಟ್ಟಿರುವುದು ಕಂಡುಬಂದಿದೆ.