ಬೆಂಗಳೂರು: ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಆಯೂಬ್ ಖಾನ್ ಹತ್ಯೆ (Murder Case) ಮಾಡಿದ್ದ ಮತೀನ್ ಎಂಬ ಆರೋಪಿಯನ್ನು ಚಾಮರಾಜಪೇಟೆಯ ಪೊಲೀಸರು ಬಂಧಿಸಿದ್ದಾರೆ. ಐದು ದಿನಗಳ ಕಾಲ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಸೆರೆಹಿಡಿಯಲು ಪೊಲೀಸರು ಯಶಸ್ವಿಯಾಗಿದ್ದಾರೆ.
ಐದು ದಿನಗಳ ಹಿಂದೆ ಎಂದರೆ ಬುಧವಾರದಂದು (ಜುಲೈ 13) ಬೆಂಗಳೂರು ಮಹಾನಗರ ಪಾಲಿಕೆ ಮಾಜಿ ಕಾರ್ಪೊರೇಟರ್ ಆಗಿದ್ದ ಆಯೂಬ್ ಖಾನ್ ಎಂಬುವವರನ್ನು ಹತ್ಯೆ ಮಾಡಲಾಗಿತ್ತು. ಅವರ ಹೊಟ್ಟೆಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಲಾಗಿತ್ತು. ತೀವ್ರ ರಕ್ತಸ್ರಾವಕ್ಕೀಡಾಗಿದ್ದ ಆಯೂಬ್ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಯೂಬ್ ಖಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಆಸ್ತಿ ವಿಚಾರವಾಗಿ ಕಲಹ ಎಂಬ ಶಂಕೆ
ಈ ವೇಳೆ ಆರೋಪಿಯನ್ನು ಪತ್ತೆಹಚ್ಚಲು ಚಾಮರಾಜಪೇಟೆ ಪೊಲೀಸರು ತನಿಖೆ ಆರಂಭಿಸಿದಾಗ ಮೊದಲಿಗೆ ಇದು ಆಸ್ತಿ ವಿಚಾರವಾಗಿ ನಡೆದ ಕೊಲೆ ಎಂದು ಅನುಮಾನಿಸಿದ್ದರು. ಆಯೂಬ್ ಖಾನ್ ಹಾಗೂ ಅವರ ಸೋದರ ಸಂಬಂಧಿ ಮತೀನ್ ಖಾನ್ ನಡುವೆ ಆಸ್ತಿ ವಿಚಾರವಾಗಿ ಕಲಹ ಉಂಟಾಗಿದ್ದು, ಈ ವಿಚಾರವಾಗಿ ಜಗಳ ಮಾಡಿಕೊಂಡು ಹೊಟ್ಟೆಗೆ ಚಾಕು ಇರಿದು ಹಲ್ಲೆ ಮಾಡಿದ್ದ ಎಂಬ ಶಂಕೆ ಮೂಡಿತ್ತು. ಆದರೆ, ಕಳೆದ ಎರಡು ದಿನಗಳ ಹಿಂದೆ ಆರೋಪಿ ಮತೀನ್ ಮಾಡಿದ್ದ ಒಂದು ವಿಡಿಯೊ ಮಾಧ್ಯಮಗಳ ಕೈಸೇರಿತ್ತು. ಈ ವಿಡಿಯೊದಲ್ಲಿ ಆಯೂಬ್ ಖಾನ್ ವಿರುದ್ಧ ಮತೀನ್ ಆರೋಪಿಸಿದ್ದು ಕಂಡುಬಂದಿದೆ.
ಆಯೂಬ್ ಖಾನ್ ಹಾಗೂ ಅವರ ಮಗ ಸಿದ್ನಿಕ್ ಸೇರಿ ಮತೀನ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮತೀನ್ ಆರೋಪಿಸಿದ್ದ ಎಂದು ತಿಳಿದು ಬಂದಿದೆ. ಖುದಾಯತ್ ಮಸೀದಿಯ ಅಧ್ಯಕ್ಷ ಸ್ಥಾನದಲ್ಲಿ ಆಯೂಬ್ ಖಾನ್ ಇದ್ದರು. ಮುಂದಿನ ಬಾರಿ ಅಧ್ಯಕ್ಷ ಸ್ಥಾನಕ್ಕೆ ಮತೀನ್ ಅವರಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದು, ಆಯೂಬ್ ಖಾನ್ ಇದಕ್ಕೆ ಒಪ್ಪಿಲ್ಲ ಎಂದು ಮತೀನ್ ವಿಡಿಯೊ ಮೂಲಕ ಹೇಳಿಕೊಂಡಿದ್ದಾನೆ ಎನ್ನಲಾಗಿದೆ. ಆಯೂಬ್ ತಮ್ಮ ಮಗನಾದ ಸಿದ್ನಿಕ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಕೂರಿಸಲು ಮುಂದಾಗಿದ್ದರು. ಇದನ್ನು ಪ್ರಶ್ನಿಸಿದಾಗ ಮತೀನ್ ಹಾಗೂ ಆಯೂಬ್ ನಡುವೆ ಜಗಳ ಉಂಟಾಗಿದ್ದು, ಮೊದಲಿಗೆ ಮತೀನ್ ಮೇಲೆ ಸಿದ್ನಿಕ್ ಹಲ್ಲೆ ನಡೆಸಿದ್ದಾರೆ ಎಂದು ವಿಡಿಯೊದಲ್ಲಿ ಹೇಳಲಾಗಿದೆ.
ಆರೋಪಿ ಮತೀನ್ ಶೋಧನೆಗೆ ಬಲೆ ಬೀಸಿದ್ದ ಚಾಮರಾಜಪೇಟೆ ಪೊಲೀಸರು ಜುಲೈ 17ರಂದು ಕೆಂಗೇರಿ ಬಳಿ ಈತನನ್ನು ಸೆರೆ ಹಿಡಿದಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಮಂಡ್ಯ , ರಾಮನಗರ, ಕೋಲಾರ ಸೇರಿದಂತೆ ಹಲವು ಕಡೆ ತಲೆಮರೆಸಿಕೊಂಡಿದ್ದು, ಈಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಈ ಪ್ರಕರಣದ ಕುರಿತು ಇನ್ನೂ ಹೆಚ್ಚಿನ ಸ್ಪಷ್ಟನೆ ಪಡೆಯುವ ನಿಟ್ಟಿನಲ್ಲಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಚೂರಿ ಇರಿತಕ್ಕೀಡಾಗಿದ್ದ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಆಯೂಬ್ ಖಾನ್ ಸಾವು