ಬೆಂಗಳೂರು: ರಾಜಧಾನಿಯ ಮಾಜಿ ಉಪಮೇಯರ್ ಶಹತಾಜ್ ಖಾನಂ ಅವರು ಶನಿವಾರ ಫೇಸ್ ಬುಕ್ ಲೈವ್‌ನಲ್ಲೇ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಜಾಲತಾಣದಲ್ಲಿ ಇದು ಬಿತ್ತರವಾಗುತ್ತಿದ್ದಂತೆಯೇ ಪೊಲೀಸರು ಹೋಗಿ ರಕ್ಷಣೆ ಮಾಡಿದ್ದಾರೆ. ಆದರೆ, ಶಹತಾಜ್ ಖಾನಂ ಅವರು ಲೈವ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಉಲ್ಲೇಖಿಸಿ ತನ್ನ ಬದುಕಿನ ಕಷ್ಟಗಳನ್ನು ಹೇಳಿಕೊಂಡಿರುವುದು, ತನ್ನ ಗಂಡ, ರಾಜ್ಯದ ಒಬ್ಬರು ಸಚಿವರು ಹಾಗೂ ಎಂಎಲ್‌ಸಿ ಮೇಲೆ ಆರೋಪಗಳನ್ನು ಮಾಡಿರುವುದು ಪ್ರಕರಣಕ್ಕೆ ಗಂಭೀರ ಸ್ವರೂಪ ನೀಡಿದೆ.
ಫೇಸ್ ಬುಕ್‌ನಲ್ಲೇ ಮೋದಿಗೆ ದೂರು
ಶಹತಾಜ್ ಖಾನಂ ಅವರು ಅನ್ವರ್ ಪಾಷಾ ಎಂಬವರ ಪತ್ನಿ. ಪತಿ ತನಗೆ ವಿಪರೀತ ಕಿರುಕುಳ ಕೊಡುತ್ತಾನೆ, ಮಾತೆತ್ತಿದ್ದರೆ ತಲಾಖ್ ಎಂದು ಹೆದರಿಸುತ್ತಿದ್ದಾನೆ ಎಂದು ಶಹತಾಜ್ ಖಾನಂ ಅವರು ದೂರಿದ್ದಾರೆ. ಮನೆಯ ಕೋಣೆಯಲ್ಲಿ ಫ್ಯಾನ್‌ಗೆ ಸೀರೆ ಬಿಗಿದು ಅದರ ಇನ್ನೊಂದು ತುದಿಯನ್ನು ಕೊರಳಿಗೆ ಕಟ್ಟಿಕೊಂಡು ಆತ್ಮಹತ್ಯೆ ಯತ್ನಿಸಿದ್ದಾರೆ. ಹಾಗೆ ಯತ್ನಿಸುತ್ತಲೇ ಫೇಸ್ ಬುಕ್ ಲೈವ್‌ನಲ್ಲಿ ಬಂದಿದ್ದಾರೆ. ಮೋದಿ ಅವರನ್ನು ಉಲ್ಲೇಖಿಸಿ ತನ್ನ ಕತೆಯನ್ನು ಹೇಳಿಕೊಂಡಿದ್ದಾರೆ.
ಷಹತಾಜ್ ಖಾನಂ ಹೇಳಿದ್ದೇನು?
ನಾನು ಶಹತಾಜ್ ಖಾನಂ. ಬೆಂಗಳೂರಿನ ಮಾಜಿ ಉಪಮೇಯರ್. ಮೋದಿಯವರೇ ನೀವು ತಲಾಖನ್ನು ರದ್ದುಗೊಳಿಸಿದ್ರಿ. ಇದು ಇಡೀ ದೇಶವೇ ಹೆಮ್ಮೆ ಪಡುವ ವಿಷಯ. ಆದರೆ, ಒಬ್ಬ ಮಾಜಿ ಉಪಮಹಾಪೌರಳಾದ ನನಗೆ ಅನ್ವಯವಾಗುತ್ತಿಲ್ಲ. ಇನ್ನು ಸಾಮಾನ್ಯ ಜನರಿಗೆ ಹೇಗೆ ಅನ್ವಯವಾಗುತ್ತದೆ?
ನನ್ನ ಗಂಡ ಅನ್ವರ್ ಪಾಷಾ ಖಾಸಗಿ ಶಾಲಾ ಕಾಲೇಜು ನಡೆಸುತ್ತಿದ್ದಾನೆ. ನನಗೆ ಆರು ಜನ ಮಕ್ಕಳಿದ್ದಾರೆ. ಈಗ ನನ್ನ ಗಂಡ ನನಗೆ ತಲಾಖ್ ಅಂತಿದಾರೆ. ನನಗೆ ತಲಾಖ್ ಬೆದರಿಕೆ ಹಾಕುತ್ತಲೇ ನನ್ನ ಮುಂದೆಯೇ ನನ್ನ ಮಕ್ಕಳ ವಯಸ್ಸಿನ ಹೆಣ್ಣು ಮಕ್ಕಳನ್ನು ಕರೆ ತಂದು ನಮ್ಮ ಮುಂದೆಯೇ ಲೈಂಗಿಕ ಕ್ರಿಯೆ ನಡೆಸುತ್ತಾನೆ. ಪ್ರಶ್ನಿಸಿದರೆ ತಲಾಖ್ ಅಂತಾನೆ.
ಪೊಲೀಸ್ ಠಾಣೆಗೆ ದೂರು ಕೊಟ್ಟರೆ ಯಾವುದೇ ಪ್ರಯೋಜನ ಆಗ್ತಿಲ್ಲ. ಈ ಬಗ್ಗೆ ಡಿಸಿಪಿ ಗಿರೀಶ್ ಅವರಿಗೂ ಮಾಹಿತಿ ನೀಡಿದ್ದೇನೆ. ಆದರೆ, ಅದಾದ ಬಳಿಕ ಕೆ.ಆರ್. ಪುರಂ ಇನ್‌ಸ್ಪೆಕ್ಟರ್ ನಂದೀಶ್, ಎಎಸ್ಐ ಅನಿತಾ ನನಗೆ ಪ್ರತಿ ದಿನ ಕಿರುಕುಳ ನೀಡ್ತಿದಾರೆ. ಪೊಲೀಸರು ಕೂಡಾ ನನ್ನ ಮಕ್ಕಳ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಇದನ್ನೆಲ್ಲ ನೋಡಿ ಸಹಿಸಿಕೊಳ್ಳಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ- ಎಂದು ಶಹತಾಜ್ ಖಾನಂ ಆರೋಪಿಸಿದ್ದಾರೆ.
ಮೋದಿಯವರೇ ಈ ದೇಶದಲ್ಲಿ ಮಹಿಳೆಯರಿಗೆ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ. ಅದಕ್ಕೆ ಕಾರಣ ನಿಮ್ಮದೇ ಪಕ್ಷದ ಒಬ್ಬ ಮಂತ್ರಿ ಮತ್ತು ಒಬ್ಬ ಎಂಎಲ್‌ಸಿ (ಹೆಸರು ಹೇಳಿದ್ದಾರೆ) ಎಂದೂ ಷಹತಾಜ್ ಖಾನಂ ಆರೋಪಿಸಿದ್ದಾರೆ. ಈ ಫೇಸ್ ಬುಕ್ ಲೈವ್ ಆತ್ಮಹತ್ಯೆ ವಿದ್ಯಮಾನ ನಡೆದಿರುವುದು ಶುಕ್ರವಾರ (ಆಗಸ್ಟ್ ೧೩). ಕೂಡಲೇ ಪೊಲೀಸರು ಧಾವಿಸಿ ರಕ್ಷಣೆ ಮಾಡಿದ್ದಾರೆ. ಆದರೆ, ಅವರು ಎತ್ತಿರುವ ಪ್ರಶ್ನೆಗಳು ಗಂಭೀರವಾಗಿದ್ದು ಮುಂದೆ ಯಾವ ತಿರುವು ಪಡೆಯುತ್ತದೆ ಎಂದು ಕಾದು ನೋಡಬೇಕಾಗಿದೆ.
ಶಹತಾಜ್ ಖಾನಂ ಅವರು ನೇರವಾಗಿ ಮೋದಿ ಅವರನ್ನೇ ಉಲ್ಲೇಖಿಸಿ ಮಾತನಾಡಿರುವುದರಿಂದ ಪ್ರಧಾನಿ ಕಾರ್ಯಾಲಯವೇನಾದರೂ ಗಮನಿಸಿ ವಿಚಾರಣೆ ನಡೆಸಿದರೆ ಇದು ತೀವ್ರ ಸ್ವರೂಪವನ್ನು ಪಡೆಯುವ ಸಾಧ್ಯತೆ ಇದೆ.
ಇದನ್ನೂ ಓದಿ| ಪೊಲೀಸರಿಂದ ಅನ್ಯಾಯವಾಗಿದೆ ಎಂದು ಕಮಿಷನರ್ ಕಚೇರಿ ಬಳಿ ವಿಷ ಸೇವಿಸಿ ಆತ್ಮಹತ್ಯೆ ಯತ್ನ