ಬೆಂಗಳೂರು: ಸಿದ್ದರಾಮಯ್ಯ ಅವರಿಗೆ 75 ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ನಡೆಸುತ್ತಿರುವ ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಕಾಂಗ್ರೆಸಿಗರು ಸೇri ಮಾಡುತ್ತಿದ್ದೇವಾದರೂ ಇದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಅಲ್ಲ ಎಂದು ಮಾಜಿ ಸಭಾಪತಿ ಬಿ.ಎಲ್. ಶಂಕರ್ ಹೇಳಿದ್ದಾರೆ.
ಸಿದ್ದರಾಮೋತ್ಸವ ಎಂದೇ ಈಗಾಗಲೆ ಪ್ರಸಿದ್ಧವಾಗಿರುವ, ದಾವಣಗೆರೆಯಲ್ಲಿ ಆಗಸ್ಟ್ 3 ರಂದು ನಡೆಯಲಿರುವ ಕಾರ್ಯಕ್ರಮದ ಸಂಚಾಲನ ಸಮಿತಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಶಂಕರ್ ಮಾತನಾಡಿದರು.
ಈ ಕಾರ್ಯಕ್ರಮ ಆಯೋಜನೆ ಮಾಡಲು, ಸಿದ್ದರಾಮಯ್ಯಗೆ 75 ವರ್ಷ ಆಗಿರುವುದು ಒಂದು ನೆಪ. ಸಿದ್ದರಾಮೋತ್ಸವ ಎಂದು ನಾವು ಯಾರೂ ಹೆಸರು ಕೊಟ್ಟಿಲ್ಲ, ಆ ಹೆಸರಿನಿಂದ ಕಾರ್ಯಕ್ರಮ ಮಾಡುತ್ತಿಲ್ಲ. ಕಾಂಗ್ರೆಸಿಗರೇ ಈ ಕಾರ್ಯಕ್ರಮ ಮಾಡುತ್ತಿದ್ದರೂ ಕಾಂಗ್ರೆಸ್ ಪಕ್ಷದಿಂದ ಕಾರ್ಯಕ್ರಮ ಮಾಡುತ್ತಿಲ್ಲ.
ಈ ಕಾರ್ಯಕ್ರಮ ಯಾವುದೇ ವ್ಯಕ್ತಿಯನ್ನು ವೈಭವೀಕರಿಸಲು ಅಲ್ಲ, ಆ ವ್ಯಕ್ತಿ ಹಿಂದೆ ಇರುವ ವಿಚಾರಗಳನ್ನು ಬಿಂಬಿಸಲು. ಈ ಕಾರ್ಯಕ್ರಮವು ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದ ದಿಕ್ಕು ದೆಸೆ ಬದಲಿಸಲಿದೆ ಎಂದು ತಿಳಿಸಿದರು.
ಇದನ್ನೂ ಓದಿ | ಸಿದ್ದರಾಮೋತ್ಸವ ಕೇವಲ ಜನುಮ ದಿನ ಕಾರ್ಯಕ್ರಮವೆ? srlopcm75ನಲ್ಲಿದೆ ಈ ಒಗಟಿಗೆ ಉತ್ತರ!
ಅಮೃತಮಹೋತ್ಸವ ಸಮಿತಿ ಅಧ್ಯಕ್ಷ ಕೆ.ಎನ್.ರಾಜಣ್ಣ ಮಾತನಾಡಿ, ಮೊದಲು ಸಿದ್ದರಾಮಯ್ಯರವರು ಈ ಆಚರಣೆ ಅವಶ್ಯಕತೆ ಇಲ್ಲ ಎಂದಿದ್ದರು. ಬಳಿಕ ನಾವೆಲ್ಲರೂ ಮನವೊಲಿಸಿ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ. ರಾಹುಲ್ ಗಾಂಧಿ ಕೂಡ ಈ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಸಿದ್ದರಾಮಯ್ಯ ನಡೆದು ಬಂದ ಹಾದಿ ಬಗ್ಗೆ ಹೊಸ ಪೀಳಿಗೆಗೆ ತಿಳಿಸಬೇಕು. ಅವರು ಸಿಎಂ ಆಗಿದ್ದಾಗ ಕೊಟ್ಟಿರುವ ಪ್ರತಿಯೊಂದು ಕಾರ್ಯಕ್ರಮಗಳಿಗೂ ಕಾರಣಗಳಿವೆ. ಅವರು ಅನುಭವಿಸಿದ ಕಷ್ಟವನ್ನು ಯೋಜನೆ ರೂಪದಲ್ಲಿ ತಂದು ಲಕ್ಷಾಂತರ ಮಂದಿಗೆ ಸಹಾಯ ಮಾಡಿದರು. ಈ ಕಾರ್ಯಕ್ರಮದ ಬಗ್ಗೆ ಯಾರೂ ಅನ್ಯಥಾ ಭಾವಿಸಬಾರದು. ಅಪಾರ್ಥ ಕಲ್ಪಿಸುವುದು ಬೇಡವೆಂದು ಕೆ.ಎನ್. ರಾಜಣ್ಣ ಮನವಿ ಮಾಡಿದರು.
ಸಮಿತಿ ಗೌರವ ಅಧ್ಯಕ್ಷ ಆರ್.ವಿ.ದೇಶಪಾಂಡೆ ಮಾತನಾಡಿ, ಸಿದ್ದರಾಮಯ್ಯ ಅವರಿಗೆ ವಿದ್ಯೆ ಸಂಪಾದನೆ ಮಾಡಲು ಕಷ್ಟವಿದ್ದ ಕಾಲದಲ್ಲಿ Bsc ಮಾಡಿ ನಂತರ ಲಾಯರ್ ಆದರು. ಲಾಯರ್ ಆದರೂ ಪ್ರ್ಯಾಕ್ಟಿಸ್ ಮಾಡಿದ್ದು ಕಡಿಮೆ, ಬಡವರಿಗಾಗಿ ಹೋರಾಟ ಮಾಡಲು ರಾಜಕೀಯಕ್ಕೆ ಬಂದರು. ರೈತ ಕುಟುಂಬದಿಂದ ಬಂದು ಕಷ್ಟಪಟ್ಟು ಸಾಧನೆ ಮಾಡಿದ್ದು, ಅವರನ್ನು ಅಭಿನಂದಿಸಲು ಅವರ ಅನುಮತಿ ಪಡೆದು ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದರು.
ಕಾರ್ಯಕ್ರಮದ ಸಿದ್ಧತೆ ಕುರಿತು ಮಾಹಿತಿ ನೀಡಿದ ಮಾಜಿ ಸಚಿವ ಹಾಗೂ ಸಮಿತಿ ಮಹಾಪ್ರಧಾನ ಕಾರ್ಯದರ್ಶಿ ಬಸವರಾಜ್ ರಾಯರಡ್ಡಿ, ಸಿದ್ದರಾಮಯ್ಯ ಅವರಿಗೆ 75 ವರ್ಷ ತುಂಬಿದ ಕಾರಣಕ್ಕೆ ದಾವಣಗೆರೆಯಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ. ರಾಜ್ಯಾದ್ಯಂತ ಸಿದ್ದರಾಮಯ್ಯರಿಗೆ ಅಭಿಮಾನಿಗಳು ಇದ್ದು, ಎಲ್ಲರೂ ಬರಲು ಅನುಕೂಲವಂತೆ ಆಯೋಜನೆ ಮಾಡಿದ್ದೇವೆ ಎಂದರು. ಕಾರ್ಯಕ್ರಮದ ಇಮೇಲ್ ವಿಳಾಸದಲ್ಲಿ ಸಿಎಂ ಎಂದು ಇರುವುದರ ಕುರಿತು ಪ್ರತಿಕ್ರಿಯಿಸಿ, ಯಾಕಾಗಬಾರದು? ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಲಿ ಎಂಬುದು ನಮ್ಮ ಅಭಿಲಾಷೆ ಎಂದರು.
ಇದನ್ನೂ ಓದಿ | ಸಿದ್ದರಾಮಯ್ಯ ʼಆಪ್ತʼರ ಲಿಸ್ಟ್‌ನಲ್ಲಿ ಡಿ.ಕೆ. ಶಿವಕುಮಾರ್ ಹೆಸರು ಇಲ್ಲ !