Site icon Vistara News

ಶಿಷ್ಟಾಚಾರ ಉಲ್ಲಂಘನೆ; ಮಾಗಡಿ ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಕಾರಿನ ಮೇಲೆ ಕಲ್ಲು ತೂರಾಟ

ಕಲ್ಲು ತೂರಾಟ

ರಾಮನಗರ: ವಿಧಾನಸಭಾ ಚುನಾವಣೆ ಸಮೀಪ ಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ರಾಜಕೀಯ ಪಕ್ಷಗಳ ನಡುವೆ ಹೆಚ್ಚಿನ ಘರ್ಷಣೆಗಳು ನಡೆಯುತ್ತಿರುವುದು ಕಂಡುಬರುತ್ತಿದೆ. ಈ ನಡುವೆ ಡೇರಿ ಉದ್ಘಾಟನೆ ಆಹ್ವಾನ ಪತ್ರಿಕೆಯಲ್ಲಿ ಶಿಷ್ಟಾಚಾರ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಕಾರಿಗೆ ಜೆಡಿಎಸ್ ಬೆಂಬಲಿಗರು ಕಲ್ಲು ತೂರಾಟ ನಡೆಸಿರುವುದು ಕಂಡುಬಂದಿದೆ.

ಜಿಲ್ಲೆಯ ಮಾಗಡಿ ತಾಲೂಕು ಕಾಮಸಂದ್ರ ಗ್ರಾಮದಲ್ಲಿ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರ ಅವಧಿಯಲ್ಲಿ ಡೇರಿ ಮಂಜೂರಾಗಿತ್ತು ಎನ್ನಲಾಗಿದೆ. ಹೀಗಾಗಿ ಬುಧವಾರ ಡೇರಿ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ, ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಹೆಸರು ಮೊದಲ ಸಾಲಿನಲ್ಲಿ ಹಾಕಿ, ಹಾಲಿ ಜೆಡಿಎಸ್ ಶಾಸಕ ಎ.ಮಂಜುನಾಥ್‌ ಹೆಸರು ಎರಡನೇ ಸಾಲಿನಲ್ಲಿ ಹಾಕಿರುವ ವಿಚಾರಕ್ಕೆ ಜೆಡಿಎಸ್‌ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | ಬೊಮ್ಮಾಯಿಗೆ ಕುರುಬರ ಮೇಲೆ ಪ್ರೀತಿ ಇದ್ದರೆ ಎಸ್‌ಟಿಗೆ ಸೇರಿಸಲಿ, ಈಶ್ವರಪ್ಪರನ್ನು ಸಿಎಂ ಮಾಡಲಿ: ಸಿದ್ದು ಸವಾಲು

ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಗಲಾಟೆ ನಡೆಯಿತು. ಈ ವೇಳೆ ಶಿಷ್ಟಾಚಾರ ಉಲ್ಲಂಘನೆ ಮಾಡಲಾಗಿದೆ ಎಂದು ಜೆಡಿಎಸ್‌ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿ, ಮಾಜಿ ಶಾಸಕ ಎಚ್‌.ಸಿ.ಬಾಲಕೃಷ್ಣ ಕಾರಿಗೆ ಕಲ್ಲು ಎಸೆದು ಆಕ್ರೋಶ ಹೊರಹಾಕಿದರು. ಉದ್ವಿಗ್ನ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಪರದಾಡಿದರು.

ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಇತ್ತೀಚೆಗೆ ಜಿಲ್ಲೆಯ ಚನ್ನಪಟ್ಟಣ ತಾಲೂಕು ರಾಂಪುರ ಗ್ರಾಮದಲ್ಲಿ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಶಾಸಕ, ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಆಹ್ವಾನಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಜೆಡಿಎಸ್‌ ಬೆಂಬಲಿಗರು, ಬಿಜೆಪಿ ಎಂಎಲ್‌ಸಿ ಸಿ.ಪಿ.ಯೋಗೇಶ್ವರ್‌ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿ ಮೊಟ್ಟೆ ಎಸೆದಿದ್ದರು. ಈ ವೇಳೆ ಬಿಜೆಪಿ ಹಾಗೂ ಜೆಡಿಎಸ್‌ ಕಾರ್ಯಕರ್ತರು ನಡುವೆ ಘರ್ಷಣೆ ಉಂಟಾಗಿತ್ತು. ಇದರಿಂದ ಗುಂಪು ಚದುರಿಸಲು ಪೊಲೀಸರು ಲಾಠಿಚಾರ್ಜ್‌ ಮಾಡಿದ್ದರು.

ಇದನ್ನೂ ಓದಿ | Election 2023 | ಮಾಜಿ ಸಂಸದ ಮುದ್ದಹನುಮೇಗೌಡ ಬಿಜೆಪಿಗೆ ಸೇರ್ಪಡೆ ಮುಹೂರ್ತ ಫಿಕ್ಸ್‌

Exit mobile version