ಹಾಸನ: ಮಾಜಿ ಸಚಿವ ಎ .ಮಂಜು ಬಿಜೆಪಿ ತೊರೆದು ಅಧಿಕೃತವಾಗಿ ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ರಾಮನಗರದ ತೋಟದ ಮನೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಸಮ್ಮುಖದಲ್ಲಿ (JDS Politics) ಪಕ್ಷ ಸೇರ್ಪಡೆಯಾಗಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ ಅವರ ಬಿಡದಿಯ ತೋಟದ ಮನೆಯಲ್ಲಿ ಶನಿವಾರ ಆಯುತ ಚಂಡಿಕಾಯಾಗ ಏರ್ಪಡಿಸಲಾಗಿತ್ತು. ಪೂರ್ಣಾಹುತಿ ಪೂಜೆಯಲ್ಲಿ ಮಾಜಿ ಸಚಿವ ಎ.ಮಂಜು ಭಾಗಿಯಾಗಿದ್ದ ವೇಳೆ ಜೆಡಿಎಸ್‌ಗೆ ಸೇರ್ಪಡೆಯಾದರು. ಮಾಜಿ ಸಚಿವ ಎಚ್.ಡಿ. ರೇವಣ್ಣ, ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಉಪಸ್ಥಿತರಿದ್ದರು.
ವಿಧಾನಪರಿಷತ್ ಚುನಾಚಣೆಯ ಬಳಿಕ ಬಿಜೆಪಿಯಿಂದ ಎ.ಮಂಜು ಅಂತರ ಕಾಯ್ದುಕೊಂಡಿದ್ದರು. ಕಾಂಗ್ರೆಸ್ ಟಿಕೆಟ್‌ಗೆ ಪ್ರಯತ್ನ ಮಾಡುತ್ತಿದ್ದ ಅವರು ಅಚ್ಚರಿಯೆಂಬಂತೆ ಅರಕಲಗೂಡು ಜೆಡಿಎಸ್ ಟಿಕೆಟ್ ಗಿಟ್ಟಿಸಿಕೊಂಡಿದ್ದರು. ಅರಕಲಗೂಡಲ್ಲಿ ಎ.ಮಂಜುಗೆ ಟಿಕೆಟ್ ನೀಡಲಾಗುತ್ತದೆ ಎಂದು ಇತ್ತೀಚೆಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಘೋಷಿಸಿದ್ದರು. ಆದ್ದರಿಂದ ಈಗ ಅಧಿಕೃತವಾಗಿ ಜೆಡಿಎಸ್‌ಯಾಗಿದ್ದಾರೆ.
ಅರಕಲಗೂಡಿನಲ್ಲಿ ಹಾಲಿ ಶಾಸಕ ಎ.ಟಿ.ರಾಮಸ್ವಾಮಿಗೆ ಸೆಡ್ಡು ಹೊಡೆಯಲು ಜೆಡಿಎಸ್ ನಾಯಕರು ಎ.ಮಂಜುಗೆ ಗಾಳ ಹಾಕಿದ್ದಾರೆ. ಕಳೆದೊಂದು ವರ್ಷದಿಂದ ಜೆಡಿಎಸ್‌ನಿಂದ ಶಾಸಕ ಎ.ಟಿ.ರಾಮಸ್ವಾಮಿ ಅಂತರ ಕಾಯ್ದುಕೊಂಡಿದ್ದರು. ಹಾಗಾಗಿ ಎ.ಮಂಜು ಜತೆ ಮಾತುಕತೆ ನಡೆಸಿ ಅವರನ್ನು ದಳಪತಿಗಳು ಪಕ್ಷಕ್ಕೆ ಕರೆತಂದಿದ್ದಾರೆ.
ಇದನ್ನೂ ಓದಿ | PM Modi: ನಾಳೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರ ಬಂದ್; ಪರ್ಯಾಯ ಮಾರ್ಗಗಳು ಯಾವುವು?
ಭಿನ್ನಾಭಿಪ್ರಾಯ ಬಿಟ್ಟು ಪಕ್ಷದ ಏಳಿಗೆಗಾಗಿ ದುಡಿಯಿರಿ: ಎಚ್.ಡಿ. ದೇವೇಗೌಡ ಸಲಹೆ
ಬಿಡದಿ ತೋಟದ ಮನೆಯಲ್ಲಿ ನಡೆದ ಆಯುತ ಚಂಡಿಕಾಯಾಗದ ಪೂರ್ಣಾಹುತಿಗೆ ಎಚ್.ಡಿ. ದೇವೆಗೌಡರ ಕುಟುಂಬ ದೇವೆಗೌಡರ ಕುಟುಂಬದ ಎಲ್ಲ ಸದಸ್ಯರು ಭಾಗಿಯಾಗಿದ್ದರು. ಈ ವೇಳೆ ಅನೌಪಚಾರಿಕವಾಗಿ
ಎಚ್‌ಡಿಕೆ ಮತ್ತು ಎಚ್.ಡಿ.ರೇವಣ್ಣ ಜತೆ ದೇವೇಗೌಡ ಅವರು ಮಾತುಕತೆ ನಡೆಸಿದರು.
ಚುನಾವಣೆಗೆ ಪಕ್ಷದ ಸಿದ್ಧತೆ ಮತ್ತು ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯದ ಬಗ್ಗೆ ಮಾತನಾಡಿರುವ ದೇವೇಗೌಡರು, ಹಾಸನ ಟಿಕೆಟ್ ವಿಚಾರ ಪ್ರಸ್ತಾಪಿಸದೆ, ಪಕ್ಷವನ್ನು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು. ಈ ಮೂಲಕ ಆಂತರಿಕ ಭಿನ್ನಾಭಿಪ್ರಾಯ ಬಿಟ್ಟು ಪಕ್ಷದ ಏಳಿಗೆಗಾಗಿ ಒಗ್ಗಟ್ಟಾಗಿ ಮುಂದೆ ಸಾಗಬೇಕು ಎಂದು ಕುಮಾರಸ್ವಾಮಿ ಹಾಗೂ ರೇವಣ್ಣರಿಗೆ ಸೂಚನೆ ನೀಡಿದ್ದಾರೆ.