ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ (BJP State President) ಸ್ಥಾನಕ್ಕೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರ ಪುತ್ರ, ಶಿಕಾರಿಪುರ ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ಆಯ್ಕೆಯಾಗುತ್ತಿದ್ದಂತೆ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಆದರೆ, ಈ ಹುದ್ದೆ ಮೇಲೆ ಕಣ್ಣಿಟ್ಟಿದ್ದ ಮಾಜಿ ಸಚಿವ ಸಿ.ಟಿ. ರವಿ (CT Ravi) ಪರೋಕ್ಷ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳು ಏನೇ ಪ್ರತಿಕ್ರಿಯೆ ಕೇಳಿದರೂ ತುಸು ಬೇಸರದ ಭಾವದಿಂದ ಮುಗುಂ ಆಗಿಯೇ ಉತ್ತರ ಕೊಟ್ಟಿದ್ದಾರೆ. ಅಲ್ಲದೆ, ಬಿ.ವೈ. ವಿಜಯೇಂದ್ರ ಅವರಿಗೆ ಬೆಟ್ಟದಷ್ಟು ಸವಾಲುಗಳು ಇವೆ ಎಂದೂ ಹೇಳಿದ್ದಾರೆ.
ಮಧ್ಯಪ್ರದೇಶದಲ್ಲಿ ಚುನಾವಣೆ ಪ್ರಚಾರ ಮುಗಿಸಿ ದೇವನಹಳ್ಳಿ ಏರ್ಪೋರ್ಟ್‌ಗೆ ಆಗಮಿಸಿದ ಸಿ.ಟಿ. ರವಿ ಅವರು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿ, ಬಿ.ವೈ. ವಿಜಯೇಂದ್ರ ಅವರನ್ನು ಪಕ್ಷ ನೇಮಕ ಮಾಡಿದೆ. ವೈಚಾರಿಕ ಭದ್ರತೆ ಜತೆಗೆ ಪಕ್ಷ ಕಟ್ಟುವ, ಬೆಳೆಸುವ ಕೆಲಸ ಮಾಡಬೇಕಿದೆ. ಜತೆಗೆ 28ಕ್ಕೆ 28 ಸ್ಥಾನವನ್ನು ಗೆಲ್ಲಿಸುವ ಹೊಣೆಗಾರಿಕೆ ಅವರ ಮೇಲೆ ಇದೆ. ಇದರಲ್ಲಿ ಅವರು ಯಶಸ್ವಿಯಾಗಲಿ ಎಂದು ಹೇಳಿದರು.
ಇದನ್ನೂ ಓದಿ: Karnataka Weather : ಸದ್ಯಕ್ಕೆ ಮಳೆ ಬಂದರೆ ಬಂತು, ಇಲ್ಲದಿದ್ದರೆ ಇಲ್ಲ; ಬಿಸಿಲೇ ಎಲ್ಲ, ಚಳಿ ಇಲ್ಲವೆಂದೇನಿಲ್ಲ!
ಬದಲಾಗದೆ ಇರೋದು ಕಾರ್ಯಕರ್ತ ಅನ್ನೋದು. ನಾನೊಬ್ಬ ಈಗ ಸಾಮಾನ್ಯ ಕಾರ್ಯಕರ್ತ. ಅಸಮಾಧಾನದ ಬಗ್ಗೆ ಈಗ ನಾನು ಏನನ್ನೂ ಮಾತನಾಡಲ್ಲ. ಈಗಾಗಲೇ ಬಹಳಷ್ಟು ಮಾತನಾಡಿದ್ದೇನೆ. 35 ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿದ್ದೇನೆ. ಬೂತ್ ಅಧ್ಯಕ್ಷನಿಂದ ರಾಷ್ಟ್ರಿಯ ಪ್ರಧಾನ ಕಾರ್ಯದರ್ಶಿವರೆಗೂ ಜವಬ್ದಾರಿ ನಿರ್ವಹಿಸಿದ್ದೇನೆ. ಈಗಾಗಲೇ ಬಹಳ ವಿಷಯ ಮಾತನಾಡಿಬಿಟ್ಟಿದ್ದೇನೆ. ಈಗ ಏನಾದರೂ ಮಾತನಾಡಿದರೆ ನಮ್ಮ ಮಾತೇ ನಮಗೆ ತಿರುಗುಬಾಣವಾಗುತ್ತದೆ ಎಂದು ಸಿ.ಟಿ. ರವಿ ಪ್ರತಿಕ್ರಿಯೆ ನೀಡಿದ್ದಾರೆ.
ತಲೆ ಮೇಲೆ ಕೈ ಹೊತ್ತು ನಡೆದ ಸಿ.ಟಿ. ರವಿ!
ಮಾಧ್ಯಮಗಳು ಎಷ್ಟೇ ಪ್ರಶ್ನೆ ಮಾಡಿದರೂ ಅಳೆದೂ ತೂಗಿ ಮಾತನಾಡಿದ ಸಿ.ಟಿ. ರವಿ ಬಳಿಕ ಅಲ್ಲಿಂದ ತಮ್ಮ ಕಾರಿನತ್ತ ನಿರ್ಗಮಿಸುವ ವೇಳೆ ತಲೆ ಮೇಲೆ ಕೈಹೊತ್ತು ನಡೆದರು.
ಮಾಧ್ಯಮಗಳ ಲೋಗೋ ತಳ್ಳಿ ನಡೆದ ಅರವಿಂದ್ ಬೆಲ್ಲದ್!
ಬಿ.ವೈ. ವಿಜಯೇಂದ್ರ ಅವರನ್ನು ನೇಮಕ ಬಗ್ಗೆ ಧಾರವಾಡದಲ್ಲಿ ಮಾಧ್ಯಮದವರು ಪ್ರತಿಕ್ರಿಯೆ ಕೇಳಿದರೂ ಕೊಡಲು ಒಪ್ಪದ ಅರವಿಂದ ಬೆಲ್ಲದ್, ಮಾಧ್ಯಮಗಳ ಲೋಗೋ ತಳ್ಳಿ ಅವಸರವಸರವಾಗಿ ಅಲ್ಲಿಂದ ಹೊರಟು ಹೋದರು. ಅಲ್ಲದೆ, ತಮ್ಮ ಕಾರನ್ನು ಬಿಟ್ಟು ಬೇರೆಯವರ ಕಾರಿನಲ್ಲಿ ಹತ್ತಿ ಅಲ್ಲಿಂದ ನಿರ್ಗಮಿಸಿದರು.
ಸ್ಪಷ್ಟ ಸಂದೇಶ ರವಾನಿಸಿದ ವಿಜಯೇಂದ್ರ
ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಬಿ.ವೈ. ವಿಜಯೇಂದ್ರ ಅವರು ಬೂತ್ ಅಧ್ಯಕ್ಷರ ಮನೆಗೆ ಭೇಟಿ ನೀಡುವ ಮೂಲಕ ಅಧ್ಯಕ್ಷ ಸ್ಥಾನದ ಕಾರ್ಯಭಾರವನ್ನು ಆರಂಭ ಮಾಡಿದ್ದಾರೆ. ಈ ಮೂಲಕ ತನ್ನ ಕೆಲಸ ಬೂತ್ ಮಟ್ಟದಿಂದಲೇ ಶುರುವಾಗುತ್ತದೆ (Work Starts from Booth level) ಎಂಬ ಸಂದೇಶವನ್ನು ರವಾನಿಸಿದ್ದಾರೆ. ಜತೆಗೆ ಬೂತ್ ಮಟ್ಟದ ಕಾರ್ಯಕರ್ತರೇ ಪಕ್ಷದ ನಿಜವಾದ ಆಸ್ತಿ ಎಂದೂ ತಮ್ಮ ನಡೆಯ ಮೂಲಕ ಸ್ಪಷ್ಟಪಡಿಸಿದ್ದಾರೆ.
ಪಕ್ಷದ ರಾಜ್ಯಾಧ್ಯಕ್ಷರಾಗಿ ಶನಿವಾರ ಬೆಳಗ್ಗಿನಿಂದಲೇ ಕೆಲಸ ಶುರು ಮಾಡಿದ ಅವರು ಮೊದಲು ಭೇಟಿಯಾಗಿದ್ದೇ ಗಾಂಧಿನಗರ ಬೂತ್ 40ರ ಅಧ್ಯಕ್ಷ ಶಶೀಂದ್ರ (Booth President Shasheendra) ಅವರ ಮನೆಗೆ. ಬಿಜೆಪಿ ಯಾವತ್ತಿದ್ದರೂ ಕೇಡರ್ ಬೇಸ್ಡ್ ಪಾರ್ಟಿ (Cadre based party). ಕಾರ್ಯಕರ್ತರೇ ಅದರ ನಿಜವಾದ ಆಸ್ತಿ ಎಂದು ಆಗಾಗ ಹೇಳಲಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡೇ ವಿಜಯೇಂದ್ರ ಅವರು ತಮ್ಮ ಕಾರ್ಯಾಚರಣೆ ಶುರು ಮಾಡಿದ್ದಾರೆ. ದೊಡ್ಡ ನಾಯಕರನ್ನು ಭೇಟಿ ಮಾಡುವ ಮೊದಲು ಸಾಮಾನ್ಯ ಕಾರ್ಯಕರ್ತರನ್ನು ಭೇಟಿ ಮಾಡಿ ತಮ್ಮ ಮುಂದಿನ ನಡೆಯೇನು ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.
ಬೂತ್ ಅಧ್ಯಕ್ಷರು ಪಕ್ಷದ ಜೀವಾಳ ಎಂದ ಬಿ.ವೈ.ವಿಜಯೇಂದ್ರ
ರಾಜ್ಯದ ಪ್ರತಿಯೊಂದು ಬೂತ್ ಅಧ್ಯಕ್ಷರು ಕೂಡ ಪಕ್ಷದ ಜೀವಾಳ. ಪಕ್ಷದ ಎಲ್ಲ ಬೂತ್‍ಗಳನ್ನು ಬಲಪಡಿಸಲು ಆದ್ಯತೆ ನೀಡುತ್ತೇನೆ ಎಂದು ಶಶೀಂದ್ರ ಅವರ ಮನೆಗೆ ಭೇಟಿ ನೀಡಿದ ಬಳಿಕ ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಗಾಂಧಿ ನಗರ ಬೂತ್ 40ರ ಅಧ್ಯಕ್ಷ ಶಶೀಂದ್ರ ಅವರ ಮನೆಗೆ ಭೇಟಿ ಕೊಟ್ಟಿದ್ದೇನೆ. ದೀಪಾವಳಿ ಶುಭಾಶಯ ಕೋರಿದ್ದೇನೆ. ರಾಜ್ಯದಲ್ಲಿ 58,282 ಬೂತ್‍ಗಳು ಇವೆ. ಎಲ್ಲ ಬೂತ್‍ಗಳಲ್ಲಿ ಪಕ್ಷದ ಸಂಘಟನೆ ಬಲಪಡಿಸಲಾಗುವುದು ಎಂದು ತಿಳಿಸಿದರು.
ಎಲ್ಲರೂ ಬೂತ್ ಮಟ್ಟದಿಂದಲೇ ಬಂದವರು
ಪ್ರತಿ ಬೂತ್ ಪ್ರಮುಖ ಮತ್ತು ಪಕ್ಷದ ಜೀವಾಳ ಎಂಬುದು ಹಿಂದಿನ ರಾಷ್ಟ್ರೀಯ ಅಧ್ಯಕ್ಷರು ಮತ್ತು ಇಂದಿನ ಕೇಂದ್ರ ಗೃಹ ಸಚಿವರು ಆದ ಅಮಿತ್ ಶಾ, ಇಂದಿನ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರ ಕಲ್ಪನೆ ಮತ್ತು ಚಿಂತನೆಯಾಗಿದೆ. ಅವರ ಚಿಂತನೆಯಂತೆ ಬೂತ್ ಅಧ್ಯಕ್ಷರ ಮನೆಗೆ ಭೇಟಿ ಕೊಡುವ ಮೂಲಕ ಕಾರ್ಯಾರಂಭ ಮಾಡಿದ್ದೇನೆ. ಇಡೀ ರಾಜ್ಯದಲ್ಲಿರುವ ಎಲ್ಲ 58 ಸಾವಿರಕ್ಕೂ ಹೆಚ್ಚು ಬೂತ್‍ಗಳಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸಲು ಹೆಜ್ಜೆ ಇಡುವುದಾಗಿ ತಿಳಿಸಿದರು.
ʻʻಪಕ್ಷದ ರಾಷ್ಟ್ರೀಯ ನಾಯಕರು ಬೂತ್ ಅಧ್ಯಕ್ಷರಾಗಿ ಈ ಮಟ್ಟಕ್ಕೆ ಬೆಳೆದುಬಂದಿದ್ದಾರೆ. ಬಿಜೆಪಿ, ರಾಷ್ಟ್ರೀಯ ಅಧ್ಯಕ್ಷರಂತೆ ಬೂತ್ ಅಧ್ಯಕ್ಷರನ್ನೂ ಗೌರವದಿಂದ ಕಾಣುತ್ತದೆ. ಇದೇ ಬಿಜೆಪಿಯ ವಿಶೇಷತೆʼʼ ಎಂದು ತಿಳಿಸಿದರು.
ಇದನ್ನೂ ಓದಿ: Advertising Policy: ಇನ್ನು ಮುಂದೆ ವೆಬ್‌ಸೈಟ್‌ಗಳಿಗೂ ಸರ್ಕಾರಿ ಜಾಹೀರಾತು: ಹೊಸ ನೀತಿ ಪ್ರಕಟ
ಲೋಕಸಭಾ ಚುನಾವಣೆಯಲ್ಲಿ ಉತ್ತರ ಕೊಡ್ತೇವೆ
ʻʻʻಬಿಜೆಪಿ ಕಾರ್ಯಕರ್ತರು ಹೋರಾಟದಿಂದ ಹಿಂದೆ ಸರಿದ ಉದಾಹರಣೆಗಳಿಲ್ಲ. ನಮ್ಮ ಕಾರ್ಯಕರ್ತರ ರಕ್ತದ ಕಣಕಣದಲ್ಲೂ ಹೋರಾಟದ ಗುಣವಿದೆ. ಕಾಂಗ್ರೆಸ್ ಅಬ್ಬರವನ್ನು ಮೀರಿ ನಮ್ಮ ಪಕ್ಷದ ಕಾರ್ಯಕರ್ತರು ಸಂಘಟನೆ ಮಾಡುತ್ತಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡಲಿದ್ದೇವೆʼʼ ಎಂದು ವಿಶ್ವಾಸದಿಂದ ನುಡಿದರು. ಈ ಸಂದರ್ಭದಲ್ಲಿ ಸಂಸದ ಪಿ.ಸಿ.ಮೋಹನ್, ಜಿಲ್ಲಾಧ್ಯಕ್ಷ ಮಂಜುನಾಥ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಇದ್ದರು.