ಬೆಂಗಳೂರು: ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ಹಗರಣ ನಡೆದಿದೆ ಎಂಬ ಕುರಿತು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಸುದ್ದಿಗೋಷ್ಠಿ ನಡೆಸಿದ್ದು, ತಮ್ಮ ಹಂತದಲ್ಲಿ ಈ ನೇಮಕಾತಿ ನಡೆದಿಲ್ಲ. ಅಧಿಕಾರಿಗಳು ನಡೆಸಿದ್ದಾರೆ ಎಂದಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಿಮ್ಮನೆ ರತ್ನಾಕರ, ಈ ನೇಮಕಾತಿ ಹಗರಣ ಇಲಾಖೆಯ ಕಾರ್ಯದರ್ಶಿಗಳಿಗಿಂತ ಕೆಳ ಹಂತದಲ್ಲಿ ನಡೆದಿದೆ. ಶಿಕ್ಷಣ ಇಲಾಖೆಯಲ್ಲಿ ಎಷ್ಟು ಹುದ್ದೆ ಖಾಲಿ ಇವೆ, ಅವುಗಳ ಮಂಜೂರಾತಿಗಾಗಿ ಇಲಾಖೆ ಆಯುಕ್ತರು ಹಾಗೂ ಕಾರ್ಯದರ್ಶಿಗಳ ಮೂಲಕ ಸಚಿವಾಲಯಕ್ಕೆ ಪ್ರಸ್ತಾವನೆ ಬರುತ್ತದೆ.
ನಂತರ ಅವುಗಳನ್ನು ಆರ್ಥಿಕ ಇಲಾಖೆಗೆ ಕಳುಹಿಸಿದ ನಂತರ ಮುಖ್ಯಮಂತ್ರಿಗಳು, ಸಚಿವರ ಜತೆ ಚರ್ಚಿಸಿ ಎಷ್ಟು ಜನರ ನೇಮಕಾತಿಗೆ ಅವಕಾಶ ಮಾಡಿಕೊಡಬೇಕು ಎಂದು ನಿರ್ಧರಿಸಲಾಗುತ್ತದೆ. ನಂತರ ಈ ವಿಚಾರ ಜಂಟಿ ಆಯುಕ್ತರ ಬಳಿ ಹೋಗುತ್ತದೆ. ನಂತರದ ನೇಮಕಾತಿ ಪ್ರಕ್ರಿಯೆ ಸಚಿವರು ಹಾಗೂ ಮುಖ್ಯಮಂತ್ರಿಗಳ ವ್ಯಾಪ್ತಿಗೆ ಬರುವುದಿಲ್ಲ. ಜಂಟಿ ಆಯುಕ್ತರು ಹಾಗೂ ವಲಯ ಮಟ್ಟದ ಅಧಿಕಾರಿಗಳ ವ್ಯಾಪ್ತಿಯಲ್ಲಿ ಈ ನೇಮಕಾತಿ ಪ್ರಕ್ರಿಯೆ ನಡೆಯುತ್ತದೆ ಎಂದರು.
ಇದನ್ನೂ ಓದಿ | Police Recruitment | ಈ ವರ್ಷ 5,000 ಕಾನ್ಸ್‌ಟೆಬಲ್ ನೇಮಕಾತಿಗೆ ಅಧಿಸೂಚನೆ: ಗೃಹಸಚಿವ ಜ್ಞಾನೇಂದ್ರ
100 ಹುದ್ದೆ ಖಾಲಿ ಇದ್ದರೆ ಆನ್‌ಲೈನ್‌ನಲ್ಲಿ ಆಹ್ವಾನ ನೀಡಲಾಗುವುದು. ನಂತರ ಬಂದ ಅರ್ಜಿಗಳನ್ನು ಪರಿಶೀಲಿಸಿ 1:2 ಅನುಪಾತದಲ್ಲಿ ಸಂದರ್ಶನಕ್ಕೆ ಆಹ್ವಾನ ನೀಡಲಾಗುವುದು. ಉದಾಹರಣೆಗೆ 100 ಹುದ್ದೆಗೆ 200 ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು. ಈ ಪ್ರಕ್ರಿಯೆಯನ್ನು ಜಂಟಿ ಆಯುಕ್ತರು ಹಾಗೂ ಆಡಳಿತ ವಿಭಾಗದವರು ಸೇರಿ ಮಾಡುತ್ತಾರೆ. ಇಲ್ಲಿ ಯಾವುದೇ ಅವ್ಯವಹಾರ ನಡೆದಿದ್ದರೂ ಅಥವಾ ನಕಲಿ ದಾಖಲೆಗಳನ್ನು ಸಲ್ಲಿಸಿದ್ದರೆ ಅದು ಆ ವ್ಯಾಪ್ತಿಯಲ್ಲಿ ನಡೆದಿರುತ್ತದೆ. ಈ ಸಂದರ್ಭದಲ್ಲಿ ಸಂದರ್ಶನ ಅಂತಿಮವಾದಾಗ 100 ಹುದ್ದೆ ಇದ್ದರೆ 110 ಅಭ್ಯರ್ಥಿಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಾರೆ. ಆಯ್ಕೆಯಾದ ಮೊದಲ 100 ಅಭ್ಯರ್ಥಿಗಳಲ್ಲಿ ಯಾರಾದರೂ ಮೃತಪಟ್ಟರೆ, ಹುದ್ದೆಗೆ ಬಾರದೇ ಇದ್ದರೆ, ಅಥವಾ ಬೇರೆ ಹುದ್ದೆಗೆ ಹೋದರೆ ಈ ಹೆಚ್ಚುವರಿ 10 ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗುವುದು.
ಈ ಅಕ್ರಮದ ವಿಚಾರವಾಗಿ ಸಂಪೂರ್ಣವಾಗಿ ದಾಖಲೆ ಒದಗಿಸುವಂತೆ ನಾನು ಇಲಾಖೆಗೆ ಪತ್ರ ಬರೆದಿದ್ದು, ಅದಕ್ಕೆ ಪಾವತಿಸಬೇಕಾದ ಶುಲ್ಕ ಪಾವತಿಸಿದ್ದೇನೆ. ಯಾರೇ ದಾಖಲೆ ತಿರುಚಿ, ನಕಲಿ ದಾಖಲೆ ಮೂಲಕ ನೇಮಕಾತಿ ಆಗಿದ್ದರೆ, ಅವರನ್ನು ಶಿಕ್ಷೆಗೆ ಗುರಿಪಡಿಸಬೇಕು. ಇಲಾಖೆಯಲ್ಲಿನ ಅಧಿಕಾರಿಗಳ ಸಹಾಯ ಇಲ್ಲದೆ ಈ ರೀತಿ ಅಕ್ರಮ ಮಾಡಲು ಸಾಧ್ಯ.ನಕಲಿ ದಾಖಲೆ ಸಲ್ಲಿಸಿರುವವರು ಹಾಗೂ ಅಭ್ಯರ್ಥಿಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಪೂರೈಸಿರುವವರನ್ನು ಶಿಕ್ಷೆಗೆ ಗುರಿಪಡಿಸಬೇಕು. ಈ ನೇಮಕಾತಿ ವಿಚಾರ ಆರ್ಥಿಕ ಇಲಾಖೆ ಒಪ್ಪಿಗೆ ಪಡೆಯುವುದಕ್ಕಾಗಿ ಮಾತ್ರ ನಮ್ಮ ವ್ಯಾಪ್ತಿಗೆ ಬರುತ್ತದೆಯೇ ಹೊರತು ಅದನ್ನು ಹೊರತುಪಡಿಸಿ ನೇಮಕಾತಿ ಪ್ರಕ್ರಿಯೆ ನಮ್ಮ ಹಂತಕ್ಕೆ ಬರುವುದಿಲ್ಲ ಎಂದರು.
ಈ ನೇಮಕಾತಿ ಎರಡು ಬಾರಿ ನಡೆದಿದ್ದು, ಏಪ್ರಿಲ್ 02, 2012ರಲ್ಲಿ ಮೊದಲ ನೇಮಕಾತಿ ಪ್ರಕ್ರಿಯೆ ಆರಂಭವಾಗಿ, ಡಿ.26, 2012ರಲ್ಲಿ ಮುಕ್ತಾಯವಾಗಿದೆ. ಆಗ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಶಿಕ್ಷಣ ಸಚಿವರಾಗಿದ್ದರು. ನನ್ನ ಅವಧಿಯಲ್ಲಿ 2015ರಲ್ಲಿ ನೇಮಕಾತಿ ಆಗಿದ್ದು, ಇದರ ಪ್ರಕ್ರಿಯೆ ಜೂನ್ 15ರಂದು ನೇಮಕಾತಿ ಪ್ರಕ್ರಿಯೆ ಅಂತ್ಯವಾಗಿತ್ತು. ಈ ನೇಮಕಾತಿಯಲ್ಲಿ ಸಚಿವರು, ಶಾಸಕರು ಭಾಗಿಯಾಗಿರುವ ಬಗ್ಗೆ ವರದಿ ಬಂದಿಲ್ಲ. ಆದರೆ ಈ ರೀತಿ ನೇಮಕಾತಿಯಲ್ಲಿ ಹಗರಣ ಆಗಿದೆ ಎಂದು ಮಾಧ್ಯಮದಲ್ಲಿ ಬಂದಾಗ ಸಾರ್ವಜನಿಕರ ಮುಂದೆ ನಮ್ಮ ಸಚಿವಾಲಯದ ಅಧಿಕಾರ ವ್ಯಾಪ್ತಿಯನ್ನು ತಿಳಿಸುವುದು ಉತ್ತಮ. ಆಗ ಜನರಿಗೆ ಸ್ಪಷ್ಟ ಚಿತ್ರಣ ಸಿಗುತ್ತದೆ.
ಈ ಪ್ರಕರಣದಲ್ಲಿ ತನಿಖೆ ಆಗಬೇಕು, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು, ಅವರನ್ನು ಜೈಲಿಗೆ ಹಾಕಬೇಕು. ನಮ್ಮ ಅವಧಿಯಲ್ಲಿ ವರ್ಗಾವಣೆಗೆ ನಕಲಿ ಆರೋಗ್ಯ ಪ್ರಮಾಣಪತ್ರ ಸಲ್ಲಿಸಿದ್ದರು. ಆಗ ನಾನು ಅವರನ್ನು ಅಮಾನತುಗೊಳಿಸಲು ಮುಂದಾದಾಗ ಅವರು ಕುಟುಂಬ ಸಮೇತರಾಗಿ ನನ್ನ ಮನೆ ಮುಂದೆ ಪ್ರತಿಭಟನೆ ಮಾಡಿದ್ದರು. ಆದರೆ ಇಲ್ಲಿ ಅರ್ಹತೆ ಇಲ್ಲದೆ ನೇಮಕಾತಿ ಪಡೆಯುವುದಾಗಿದ್ದು, ಇದು ಮಹಾಪರಾಧ. ನೇಮಕಾತಿ ಅಧಿಕಾರಿಗಳ ಸಹಕಾರ ಇಲ್ಲದೆ ಈ ಅಕ್ರಮ ನಡೆಯಲು ಸಾಧ್ಯವಿಲ್ಲ. ಅವರಿಗೂ ಶಿಕ್ಷೆ ಆಗಬೇಕು.
ಬಿಜೆಪಿ ಸರ್ಕಾರ ಅವಧಿಯಲ್ಲಾಗಲಿ, ನಮ್ಮ ಸರ್ಕಾರದ ಅವಧಿಯಲ್ಲಾಗಲಿ ಈ ಅಕ್ರಮ ಮುಖ್ಯಮಂತ್ರಿಗಳಾಗಲಿ ಅಥವಾ ಆಗಿನ ಕಾಲದ ಸಚಿವರ ಮಟ್ಟದಲ್ಲಿ ಈ ಅಕ್ರಮ ನಡೆದಿಲ್ಲ ಎಂಬ ಸ್ಪಷ್ಟನೆ ನೀಡಲು ಬಯಸುತ್ತೇನೆ. ಇದು ಅಧಿಕಾರಿಗಳ ಮಟ್ಟದಲ್ಲಿ ನಡೆದಿರುವ ಅಕ್ರಮ. ಒಂದು ವೇಳೆ ಇದರಲ್ಲಿ ನಮ್ಮ ಹಸ್ತಕ್ಷೇಪ ಇದ್ದರೆ ಅದರ ಬಗ್ಗೆ ಆರೋಪ ಮಾಡಿ ಸಾಕ್ಷಿಗಳನ್ನು ನೀಡಲಿ. ನಮ್ಮ ವಿರುದ್ಧ ನೇರ ಆರೋಪ ಇದ್ದರೆ ನಾನು ಅದಕ್ಕೆ ಪ್ರತಿಕ್ರಿಯೆ ನೀಡುತ್ತೇನೆ. ಆದರೆ ಲೋಕಾರೂಢಿಯಾಗಿ ಮಾಡುವ ಆರೋಪಕ್ಕೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಕಿಮ್ಮನೆ ರತ್ನಾಕರ ಹೇಳಿದರು.
ಬಿಜೆಪಿಯವರು ಗಾಳಿಯಲ್ಲಿ ಗುಂಡು ಹೊಡೆಯುತ್ತಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಕಿಮ್ಮನೆ ರತ್ನಾಕರ, ಬಿಜೆಪಿಯವರು ವಿರೋಧ ಪಕ್ಷದಲ್ಲಿದ್ದೇವೆ ಎಂದು ಗೊಂದಲದಲ್ಲಿದ್ದಾರೆ. ಹೀಗಾಗಿ ಅವರು ಪ್ರತಿಯೊಂದಕ್ಕೂ ಸಿದ್ದರಾಮಯ್ಯ ಅವರು ಕಾರಣ ಎಂದು ಆರೋಪ ಮಾಡುತ್ತಿದ್ದಾರೆ. ಇವರು ತಮ್ಮ ಆಡಳಿತದಲ್ಲಿನ ಅಕ್ರಮದ ಬಗ್ಗೆ ಸ್ಪಷ್ಟನೆ ನೀಡಬೇಕೆ ಹೊರತು, ಹಳೆಯ ವಿಚಾರವನ್ನು ಕೆದಕುವುದಲ್ಲ ಎಂದರು.
ನಿಮ್ಮ ಅವಧಿಯಲ್ಲಿ ಈ ಅಕ್ರಮ ನಿಮ್ಮ ಗಮನಕ್ಕೆ ಬಂದಿರಲಿಲ್ಲವೇ ಎಂಬ ಪ್ರಶ್ನೆಗೆ, ‘ಈ ಅಕ್ರಮವನ್ನು ಇವರು ಕಂಡುಹಿಡಿದಿಲ್ಲ. ಅನ್ಯಾಯಕ್ಕೆ ಒಳಗಾದವರು, ಮಾಹಿತಿ ಕಲೆಹಾಕಿ ದೂರು ನೀಡಿ ಅಕ್ರಮ ಈಗ ಬೆಳಕಿಗೆ ಬಂದಿದ್ದು, ನಮ್ಮ ಅವಧಿಯಲ್ಲಿ ಇದು ಬೆಳಕಿಗೆ ಬಂದಿರಲಿಲ್ಲ. ಪಿಎಸ್ಐ ನೇಮಕಾತಿ ಅಕ್ರಮಕ್ಕೂ ಈ ನೇಮಕಾತಿ ಅಕ್ರಮಕ್ಕೂ ಬಹಳ ವ್ಯತ್ಯಾಸವಿದ್ದು, ಒಂದಕ್ಕೊಂದು ಹೋಲಿಕೆ ಮಾಡಬಾರದು. ಬಿಜೆಪಿ ಶಾಸಕರೇ ಈ ನೇಮಕಾತಿಯಲ್ಲಿ 15 ಲಕ್ಷ ಹಣ ಪಡೆದು ಅದನ್ನು ಸರ್ಕಾರಕ್ಕೆ ನೀಡಿರುವುದಾಗಿ ತಿಳಿಸಿದ್ದಾರೆ. ಈ ಸರ್ಕಾರ ಎಂದರೆ ಯಾರು? ಹೀಗಾಗಿ ಪಿಎಸ್ಐ ಅಕ್ರಮ ನ್ಯಾಯಾಂಗ ತನಿಖೆ ಆಗಬೇಕು. ಆಗ ನ್ಯಾಯ ಸಿಗುತ್ತದೆ ಎಂದರು.
ನಂದಿತಾ ಅವರ ಸಾವಿನ ಪ್ರಕರಣದ ಕುರಿತು ಉದಾಹರಿಸಿದ ಕಿಮ್ಮನೆ ರತ್ನಾಕರ ಅವರು, ಆತ್ಮಹತ್ಯೆ ಪ್ರಕರಣವನ್ನು ತಿರುಚಿ ಕೋಮುಗಲಭೆ ಸೃಷ್ಟಿಸಿದ್ದರು. ಆಗ ಆರಗ ಜ್ಞಾನೇಂದ್ರ ಅವರು ಸಿಬಿಐ ತನಿಖೆ ಆಗಬೇಕು ಎಂದಿದ್ದರು. ಈಗ ಅವರು ಬೇಕಾದರೆ ಮರುತನಿಖೆ ಮಾಡಲಿ. ನಾವು ತಪ್ಪು ಮಾಡಿಲ್ಲ ಎಂದಾದರೆ ನಾವ್ಯಾಕೆ ಹೆದರಬೇಕು? ವಿನಯ್ ಕುಲಕರ್ಣಿ ಅವರ ಮೇಲೆ ಪ್ರಕರಣ ಇಲ್ಲದಿದ್ದರೂ ಈಗ ಮರು ತನಿಖೆ ಮಾಡಿ ಹಾಕಿದ್ದಾರೆ. ಅದೇ ರೀತಿ ನಂದಿತಾ ಅವರ ಪ್ರಕರಣವನ್ನು ತನಿಖೆ ಮಾಡಲಿ ಎಂದು ತಿಳಿಸಿದರು.
ಇದನ್ನೂ ಓದಿ | ಮತ್ತಷ್ಟು ಶಿಕ್ಷಕರು ಆಗಲಿದ್ದಾರ ಅರೆಸ್ಟ್? ಅಕ್ರಮದಿಂದ ನೇಮಕವಾದವರು 16 ಅಲ್ಲ 40 ಎಂದ ಶಿಕ್ಷಣ ಸಚಿವ