ಬೆಂಗಳೂರು: ಮಾಜಿ ಸಚಿವ ದಿವಂಗತ ಎಲ್.ಜಿ ಹಾವನೂರು ಅವರ ಪುತ್ರ ಅಶೋಕ್ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ ನಡೆದಿದೆ. ತುಮಕೂರು-ಬೆಂಗಳೂರು ಮುಖ್ಯರಸ್ತೆಯ ಹಾವನೂರು ಲೇಔಟ್‌ನಲ್ಲಿರುವ ನಿವಾಸದಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಭಾನುವಾರ ಮಧ್ಯಾಹ್ನದವರೆಗೂ ಕೊಠಡಿಯಿಂದ ಹೊರಗೆ ಬಾರದಿದ್ದಾಗ, ಅವರ ಪತ್ನಿ ಮತ್ತು ಮಕ್ಕಳು ಹೋಗಿ ಪರಿಶೀಲಿಸಿದಾಗ ಒಳಗಿನಿಂದ ಬಾಗಿಲು ಹಾಕಿರುವುದು ಕಂಡು ಬಂದಿದೆ. ನಂತರ ಬಾಗಿಲು ಒಡೆದು ನೋಡಿದಾಗ ಫ್ಯಾನ್‌ಗೆ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ. ಆದರೆ, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಈ ಸಂಬಂಧ ಪೊಲೀಸರು ಅಸಹಜ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕೆಲವು ದಿನಗಳಿಂದ ಒಬ್ಬಂಟಿಯಾಗಿರುತ್ತಿದ್ದ ಅವರು ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮೃತರು ಕಳೆದ ಹದಿನೈದು ದಿನಗಳಿಂದ ಮನೆಯಲ್ಲಿದ್ದರು ಮತ್ತು ಹೊರಗೆ ಎಲ್ಲಿಯೂ ಹೋಗುತ್ತಿರಲಿಲ್ಲ. ಅವರು ಖಿನ್ನತೆಯಿಂದ ಬಳಲುತ್ತಿದ್ದ ಕಾರಣ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಇದನ್ನೂ ಓದಿ | Road Rage Case: ಕಾರಿನ ಬಾನೆಟ್ ಮೇಲೆ ಕ್ಯಾಬ್ ಡ್ರೈವರ್‌ನ 400 ಮೀ. ಎಳೆದೊಯ್ದ ವ್ಯಕ್ತಿ!
ಹಾವನೂರು ಕುಟುಂಬದ ಸದಸ್ಯರು ಬೆಂಗಳೂರಿನಲ್ಲಿಯೇ ನೆಲೆಸಿದ್ದರು. ರಾಮಮೂರ್ತಿ ನಗರದಲ್ಲಿ ಎಲ್.ಜಿ.ಹಾವನೂರು ಅವರ ಹೆಸರಿನಲ್ಲಿಯೇ ಕಾನೂನು ಮಹಾವಿದ್ಯಾಲಯ ಆರಂಭಿಸಲಾಗಿದ್ದು, ಕಾಲೇಜು ಸಮಿತಿಯ ಅಧ್ಯಕ್ಷರಾಗಿ ಅಶೋಕ್ ಹಾವನೂರು ಅವರು ಕಾರ್ಯನಿರ್ವಹಿಸುತ್ತಿದ್ದರು.