ತುಮಕೂರು: ಸ್ವಾತಂತ್ರ್ಯ ಯೋಧ ವೀರ್ ಸಾವರ್ಕರ್ ಅವರ ಫೋಟೊ ಇರುವ ಫ್ಲೆಕ್ಸ್ ಹರಿದು ಹಾಕಿದವರನ್ನು ಕಂಡಲ್ಲಿ ಗುಂಡಿಕ್ಕಬೇಕು ಎಂದು ರೋಷಾವೇಶದಲ್ಲಿ ಮಾತನಾಡಿದ್ದಾರೆ ಮಾಜಿ ಸಚಿವ ಸೊಗಡು ಶಿವಣ್ಣ.
ತುಮಕೂರಿನ ಎಂಪ್ರೆಸ್ ಕಾಲೇಜಿನ ಎದುರು ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಹಾಕಲಾಗಿದ್ದ ಫ್ಲೆಕ್ಸ್‌ಗಳಲ್ಲಿ, ವೀರ ಸಾವರ್ಕರ್ ಚಿತ್ರವಿದ್ದ ಫ್ಲೆಕ್ಸ್‌ನ್ನು ದುಷ್ಕರ್ಮಿಗಳು ಸೋಮವಾರ ರಾತ್ರಿ ಹರಿದು ಹಾಕಿದ್ದರು. ಸಾವರ್ಕರ್ ಅವರ ಚಿತ್ರವನ್ನಷ್ಟೇ ಹರಿದು ಹಾಕಿದ್ದು, ಇದು ಸಾವರ್ಕರ್ ಮೇಲಿನ ದ್ವೇಷದಿಂದ ನಡೆಸಿದ ಕೃತ್ಯ ಎಂದೇ ಭಾವಿಸಲಾಗಿದೆ.
ಈ ಘಟನೆಗೆ ಪ್ರತಿಕ್ರಿಯಿಸಿರುವ ಸೊಗಡು ಶಿವಣ್ಣ ಅವರು, ʻʻಸಾರ್ವಕರ್ ಪೋಟೋ ಹರಿದವರನ್ನು ಕಂಡಲ್ಲಿ ಗುಂಡಿಕ್ಕಿ ಕೊಲ್ಲಬೇಕು. ನಾವಿಲ್ಲಿ ಶಾಂತಿಯಿಂದ ಬದುಕುತ್ತಿದ್ದೇವೆ. ಇದಕ್ಕೆ ಕಲ್ಲು ಹಾಕುವವರನ್ನು ಬಿಡಬಾರದು.ʼʼ ಎಂದು ಹೇಳಿದರು.
ತುಮಕೂರು, ಶಿವಮೊಗ್ಗಗಳು ಕೆಜೆ ಹಳ್ಳಿ, ಡಿಜೆಹಳ್ಳಿ ಆಗಲು ಅವಕಾಶ ನೀಡುವುದು ಬೇಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ತಕ್ಷಣವೇ ಆರೋಪಿಗಳನ್ನು ಬಂಧಿಸಬೇಕು ಎಂದು ಹೇಳಿದ ಶಿವಣ್ಣ ಅವರು, ʻʻಸಾರ್ವಕರ್ ಚಿತ್ರ ಹರಿದು ಹಾಕಿದವರು ಪಾಪಿಗಳು. ಸಾವರ್ಕರ್, ಕಿತ್ತೂರು ರಾಣಿ ಚೆನ್ನಮ್ಮ ಅವರ ಭಯದಿಂದಲೇ ಫ್ಲೆಕ್ಸ್ ಹರಿದು ಹಾಕಿದ್ದಾರೆʼʼ ಎಂದರು.
ಈ ನಡುವೆ, ಮಹಾನಗರ ಪಾಲಿಕೆಯ ಅಧಿಕಾರಿಗಳು ನಗರದಲ್ಲಿ ಹಾಕಲಾದ ಎಲ್ಲ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿದ್ದನ್ನು ಶಿವಣ್ಣ ಖಂಡಿಸಿದ್ದಾರೆ. ʻʻಪಾಲಿಕೆಯರು ತೆರವು ಮಾಡಿದ್ದು ತಪ್ಪು. ಯಾಕೆ ತೆಗೆಯಬೇಕು. ತೆಗೆಯಲು ಆದೇಶ ನೀಡಿದ ಆಯುಕ್ತರನ್ನು ಸಸ್ಪೆಂಡ್ ಮಾಡಲಿʼʼ ಎಂದು ಆಗ್ರಹಿಸಿದ್ದಾರೆ.
ʻʻನಾವು ಇಲ್ಲಿ ಹಿಂದೂ-ಮುಸ್ಲಿಮರು ಎಲ್ಲರೂ ಒಂದಾಗಿದ್ದೇವೆ. ಮೂವತ್ತು ವರ್ಷಗಳಿಂದ ಚೆನ್ನಾಗಿ ಬಾಳುತ್ತಿದ್ದೇವೆ. ಕಿಡಿಗೇಡಿಗಳನ್ನು ಮೊದಲು ಗಡಿಪಾರು ಮಾಡಿದೆ. ಹೆಚ್ಚು ಕಡಿಮೆ ಆದರೆ ಕಂಡಲ್ಲಿ ಗುಂಡಿಟ್ಟು ಹೊಡೆಯಿರಿʼʼ ಎಂದು ಶಿವಣ್ಣ ಹೇಳಿದ್ದಾರೆ.
ಇದನ್ನೂ ಓದಿ| ತುಮಕೂರಿನಲ್ಲೂ ಫ್ಲೆಕ್ಸ್ ವಿವಾದ: ವೀರ ಸಾವರ್ಕರ್ ಚಿತ್ರವಿರುವ ಬ್ಯಾನರ್ ಹರಿದ ಕಿಡಿಗೇಡಿಗಳು