ಶಿವಮೊಗ್ಗ: ಶಿವಮೊಗ್ಗ: ಸಾಗರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘ ಸ್ಥಾಪನೆ ಸೇರಿದಂತೆ ಅಂತಾರಾಜ್ಯ ಸಂಸ್ಥೆ ಕ್ಯಾಂಪ್ಕೋ, ಸಾಗರದ ಆಪ್ಸ್‌ಕೋಸ್‌ನಂತಹ ಸಂಸ್ಥೆಗಳನ್ನು ಹುಟ್ಟುಹಾಕುವಲ್ಲಿ ಅತ್ಯಂತ ಮುಖ್ಯ ಪಾತ್ರ ವಹಿಸಿದ್ದ ಮಾಜಿ ಶಾಸಕ, ಸಹಕಾರಿ ಧುರೀಣ ಎಲ್.ಟಿ.ತಿಮ್ಮಪ್ಪ ಹೆಗಡೆ ಕಾನಕೊಪ್ಪ (94) ವಯೋಸಹಜ ಕಾರಣಗಳಿಂದ ಮಂಗಳವಾರ ಬೆಳಿಗ್ಗೆ ನಿಧನ ಹೊಂದಿದರು.
ಒಟ್ಟು ಕುಟುಂಬ ಜೀವನದ ಮೌಲ್ಯಗಳನ್ನು ಎತ್ತಿಹಿಡಿದಿದ್ದ ಹೆಗಡೆಯವರು ತಮ್ಮ ಜೊತೆಗಿದ್ದ ಸಹೋದರ ಗಣಪತಿ ಹೆಗಡೆ, ಪತ್ನಿ ಸಾವಿತ್ರಮ್ಮ, ಪುತ್ರರಾದ ತಿಮ್ಮಪ್ಪ ಹಾಗೂ ಅಶೋಕ, ಸೊಸೆ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಾಂಧವರನ್ನು ಅಗಲಿದ್ದಾರೆ.
ಸಾಗರದ ಆಪ್ಸ್‌ಕೋಸ್, ತೋಟಗಾರ್ಸ್, ಅಡಿಕೆ ಬೆಳೆಗಾರರ ಸಂಘಗಳ ಸಂಸ್ಥಾಪಕ ಅಧ್ಯಕ್ಷರಾಗಿದ್ದ ಹೆಗಡೆಯವರು ಕ್ಯಾಂಪ್ಕೋ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ್ದರು. 1978, 83ರಲ್ಲಿ ಸಾಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿ ಕಾರ್ಯನಿರ್ವಹಿಸಿದ್ದರು. ಹಟ್ಟಿಯಂಗಡಿಯ ಸಿದ್ಧಿವಿನಾಯಕ ಕ್ಷೇತ್ರಾಭಿವೃದ್ಧಿ ಟ್ರಸ್ಟ್ ಹಾಗೂ ಸಿದ್ಧಿ ಶಿಕ್ಷಣ ಪ್ರತಿಷ್ಠಾನ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷರಾಗಿ ಹಟ್ಟಿಯಂಗಡಿ ಗಣಪತಿ ದೇವಸ್ಥಾನ ಹಾಗೂ ಶಿಕ್ಷಣ ಸಂಸ್ಥೆಗಳ ಬೆಳವಣಿಗೆಯಲ್ಲಿ ಪಾತ್ರ ವಹಿಸಿದ್ದರು. ಹೊಸನಗರದ ರಾಮಚಂದ್ರಾಪುರ ಮಠದ ಚಟುವಟಿಕೆಯಲ್ಲಿ ಮುಂಚೂಣಿಯ ನಾಯಕತ್ವ ವಹಿಸಿದ್ದರು. ಸಾಗರದ ಶಿಕ್ಷಣ ಸಂಸ್ಥೆ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಎಲ್‌ಬಿ ಕಾಲೇಜು, ಪ್ರಗತಿ ಸಂಯುಕ್ತ ಶಾಲೆ ಮೊದಲಾದವುಗಳ ಸ್ಥಾಪನೆಯಲ್ಲಿ ಭಾಗವಹಿಸಿ ಸಂಸ್ಥೆಯ ಉಪಾಧ್ಯಕ್ಷ ಹುದ್ದೆಯನ್ನು ಬಹುಕಾಲ ನಿರ್ವಹಿಸಿದರು. ಕೇಂದ್ರ ಸಾಂಬಾರು ಮಂಡಳಿಯ ನಿರ್ದೇಶಕರಾಗಿ, ಭೂ ನ್ಯಾಯ ಮಂಡಳಿ, ಲ್ಯಾಂಡ್ ಗ್ರಾಂಟ್ ಸಮಿತಿಗಳಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.
ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತನು ನೀಡಲಿ ಎಂದು ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಹರನಾಥರಾವ್, ಉಪಾಧ್ಯಕ್ಷ ರವಿಕುಮಾರ್ ಹುಣಲಮಡಿಕೆ, ಬಿ.ಅರ್.ಜಯಂತ್, ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಖಜಾಂಚಿ ಕವಲಕೋಡು ವೆಂಕಟೇಶ್, ಸಹ ಕಾರ್ಯದರ್ಶಿ ಸತ್ಯನಾರಾಯಣ ಶರಾವತಿ ರಾವ್, ಅಡಳಿತ ಮಂಡಳಿ, ಪ್ರಿನ್ಸಿಪಾಲ್ ಮತ್ತು ಅಧ್ಯಾಪಕ ವೃಂದ ಬೇಡಿಕೊಡಿದ್ದಾರೆ.
ಇದನ್ನೂ ಓದಿ | H Narasimha Murthy : ಕನ್ನಡ ಪ್ರಭ ಮಾಜಿ ಸುದ್ದಿ ಸಂಪಾದಕ ಎಚ್.ಎನ್. ಮೂರ್ತಿ ನಿಧನ; ನೇತ್ರ, ದೇಹದಾನಕ್ಕೆ ಕುಟುಂಬಸ್ಥರ ನಿರ್ಧಾರ