Site icon Vistara News

Karnataka Election 2023: ಬಿಜೆಪಿ ಸೇರಿದ ಮಾಜಿ ಸಂಸದ ಬಿ.ವಿ.ನಾಯಕ್, ಮಾನ್ವಿ ಟಿಕೆಟ್‌ ಫಿಕ್ಸ್?‌

Former MP and Raichur Congress district president B V Nayak joins BJP

ರಾಯಚೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ವಿವಿಧ ಪಕ್ಷಗಳಲ್ಲಿ ಟಿಕೆಟ್‌ ಕೈತಪ್ಪಿದ ನಾಯಕರು ಪಕ್ಷಾಂತರಗೊಳ್ಳುತ್ತಿರುವುದು (Karntaka Election 2023) ಹೆಚ್ಚಾಗಿದೆ. ಈ ನಡುವೆ ರಾಯಚೂರು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಮಾಜಿ ಸಂಸದ ಬಿ.ವಿ. ನಾಯಕ್ ಅವರು ಬಿಜೆಪಿ‌ ಸೇರ್ಪಡೆಯಾಗಿದ್ದಾರೆ. ಹುಬ್ಬಳ್ಳಿಯಲ್ಲಿ ಮಂಗಳವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಸಮ್ಮುಖದಲ್ಲಿ ಅವರು ಕಮಲ ಪಾಳಯ ಸೇರಿದ್ದಾರೆ. ಇವರು ಬಿಜೆಪಿ ಟಿಕೆಟ್‌ ಪಡೆದು ಮಾನ್ವಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ತಿಳಿದುಬಂದಿದೆ.

ರಾಯಚೂರು ಜಿಲ್ಲೆ ಮಾನ್ವಿ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ಗೆ ಬಿ.ವಿ.ನಾಯಕ್ ಬೇಡಿಕೆ ಇಟ್ಟಿದ್ದರು. ಕೊನೆ ಘಳಿಗೆಯಲ್ಲಿ‌ ಮಾನ್ವಿ ಟಿಕೆಟ್ ಮಿಸ್ ಆಗಿದ್ದರಿಂದ ಅಸಮಾಧಾನಗೊಂಡಿದ್ದರು. ಜತೆಗೆ ಜಿಲ್ಲಾ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯಕ್ಕೆ ಬೇಸತ್ತು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದಾರೆ. ಆದಾಗ್ಯೂ, ಬಿಜೆಪಿಯು ಶಿವಮೊಗ್ಗ ಹಾಗೂ ಮಾನ್ವಿ ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಹಾಗಾಗಿ, ನಾಯಕ್‌ ಅವರಿಗೇ ಮಾನ್ವಿ ಟಿಕೆಟ್‌ ಸಿಗುವ ಸಾಧ್ಯತೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ | Karnataka Election 2023 : ಕಾಂಗ್ರೆಸ್‌ ನಾಲ್ಕನೇ ಪಟ್ಟಿ ಪ್ರಕಟ; ಸಿಎಂ ಬೊಮ್ಮಾಯಿ ವಿರುದ್ಧ ಮಹ್ಮದ್ ಯೂಸುಫ್ ಕಣಕ್ಕೆ

ಬಿಜೆಪಿ ಟಿಕೆಟ್ ತಪ್ಪಿದ್ದಕ್ಕೆ ಕಣ್ಣೀರು ಹಾಕಿದ ಮಹೇಂದ್ರ ನಾಯಕ

Congress candidate Baburao Chinchansur campaigns from hospital Karnataka Election 2023 updates

ವಿಜಯಪುರ:‌ ಜಿಲ್ಲೆಯ ನಾಗಠಾಣ ಮೀಸಲು ಮತಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಹೇಂದ್ರ ನಾಯಕ ಅವರು ಟಿಕೆಟ್ ತಪ್ಪಿದ್ದಕ್ಕೆ ಕಣ್ಣೀರು ಹಾಕಿದ್ದಾರೆ. ಬಿಜೆಪಿ 3ನೇ ಪಟ್ಟಿಯಲ್ಲಿ ನಾಗಠಾಣ ಟಿಕೆಟ್ ಸಂಜೀವ್ ಐಹೊಳೆ ಪಾಲಾದ ಹಿನ್ನೆಲೆಯಲ್ಲಿ ಬೆಂಬಲಿಗರೊಂದಿಗೆ ಏರ್ಪಡಿಸಿದ್ದ ಸಭೆಯಲ್ಲಿ ಅವರು ಭಾವುಕರಾಗಿದ್ದಾರೆ.

ವಿಜಯಪುರ ನಗರದ ರಾಣಿ ಚನ್ನಮ್ಮ ಭವನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಸಹಸ್ರಾರು ಬೆಂಬಲಿಗರು ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಮಾಜಿ ಪೊಲೀಸ್‌ ಅಧಿಕಾರಿಯೂ ಆದ ಮಹೇಂದ್ರ ನಾಯಕ, ನಾನು ನಂಬಿದ ಪಕ್ಷವೇ ನನಗೆ ಮೋಸ ಮಾಡಿತು ಎಂದು ಅಸಮಾಧಾನ ಹೊರಹಾಕಿದ್ದಾರೆ.

ಆಸ್ಪತ್ರೆ ಬೆಡ್‌ನಿಂದಲೇ ಕಾಂಗ್ರೆಸ್‌ ಅಭ್ಯರ್ಥಿ ಬಾಬುರಾವ್ ಚಿಂಚನಸೂರ್ ಪ್ರಚಾರ

Congress candidate Baburao Chinchansur campaigns from hospital Karnataka Election 2023 updates

ಯಾದಗಿರಿ: ರಾಜ್ಯ ವಿಧಾನಸಭಾ ಚುನಾವಣೆ (Karnataka Election 2023) ದಿನೇ ದಿನೆ ಕಾವು ಪಡೆದುಕೊಳ್ಳುತ್ತಿದೆ. ಆಯಾ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ, ಪ್ರಚಾರ ಕಾರ್ಯಗಳಲ್ಲಿ ಕಾರ್ಯನಿರತರಾಗಿದ್ದಾರೆ. ಸಭೆ, ಸಮಾರಂಭಗಳನ್ನು ಏರ್ಪಡಿಸುವುದು, ರೋಡ್‌ ಶೋ (Road Show) ಮಾಡುವುದು ಸೇರಿದಂತೆ ಭರ್ಜರಿ ಪ್ರಚಾರ ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಇತ್ತ ಕಾರು ಅಪಘಾತದಲ್ಲಿ (Road Accident) ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗುರುಮಠಕಲ್‌ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಬಾಬುರಾವ್ ಚಿಂಚನಸೂರ್ (Baburao Chinchansur) ಅವರು ಆಸ್ಪತ್ರೆಯಿಂದಲೇ ಮತ ಯಾಚನೆ ಮಾಡಿದ್ದಾರೆ.

ಏಪ್ರಿಲ್ 16ರಂದು ರಸ್ತೆ ಅಪಘಾತದಲ್ಲಿ ಬಾಬುರಾವ್ ಚಿಂಚನಸೂರ್‌ಗೆ ಭಾರಿ ಪೆಟ್ಟಾಗಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಅಲ್ಪ ಮಟ್ಟಿಗೆ ಚೇತರಿಕೆ ಕಂಡಿರುವ ಚಿಂಚನಸೂರ್‌ ಅವರು ಆಸ್ಪತ್ರೆಯಲ್ಲಿಯೇ ವಿಡಿಯೊ (Video) ಮಾಡಿಸಿ, ಆ ಮೂಲಕ ಮತ ಪ್ರಚಾರ ಮಾಡಿದ್ದಾರೆ. ‌ ಆಸ್ಪತ್ರೆಯ ಬೇಡ್ ಮೇಲೆ ಕುಳಿತಿರುವ ಚಿಂಚನಸೂರ್‌ ಅವರು ವಿಡಿಯೊ ಮೂಲಕ ತಮಗೆ ಮತ ಹಾಕುವಂತೆ ಮನವಿ ಮಾಡಿದ್ದಾರೆ. ಮುಖದಲ್ಲಿ ಗಲ್ಲ ಹಾಗೂ ಕಣ್ಣಿನ ಪಕ್ಕ ಪೆಟ್ಟಾಗಿದ್ದು, ಬ್ಯಾಂಡೇಜ್‌ ಹಾಕಿರುವುದು ಕಾಣುತ್ತದೆ.

ವಿಡಿಯೊದಲ್ಲೇನಿದೆ?

ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ರಾಷ್ಟ್ರ ಮಟ್ಟದ ಉನ್ನತ ಸ್ಥಾನದಲ್ಲಿ ಬೆಳೆದಿದ್ದಾರೆ. ಇವತ್ತು ಇಡೀ ವಿಶ್ವವೇ ಅವರನ್ನು ತಿರುಗಿ ನೋಡುತ್ತಿದೆ. ಹಳ್ಳಿಯಿಂದ ದಿಲ್ಲಿವರೆಗೆ ಅವರು ಬೆಳವಣಿಗೆ ಸಾಧಿಸಿದ್ದಾರೆ. ಇಂದು ಅವರು ನನ್ನ ಮೇಲೆ ವಿಶ್ವಾಸವಿಟ್ಟು ಟಿಕೆಟ್ ನೀಡಿ ಗುರಮಠಕಲ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಸಮಸ್ತ ಕುಲ ಬಾಂಧವರಲ್ಲಿ ಕೈ ಮುಗಿದು ನಮಸ್ಕಾರ ಮಾಡುತ್ತೇನೆ. ಇವತ್ತು ಬಿದ್ದು ಹೋಗುವ ಶರೀರ, ಮಣ್ಣು ಪಾಲಾಗುವ ಶರೀರ ಇದು. ಹೀಗೆ ಸಾಯುವುದಕ್ಕಿಂದ ಬಡ ಜನರ ಸೇವೆ ಮಾಡಿ ಸಾಯಬೇಕು ಅಂತ ಬಂದಿದ್ದೀನಿ. ನನ್ನ ಆರೋಗ್ಯ ಚೆನ್ನಾಗಿದೆ. ಸಮಸ್ತ ಮತ ಬಾಂಧವರ ಆಶೀರ್ವಾದ ನನ್ನ ಮೇಲಿರಲಿ. ಮತದಾರರ ಪಾದ ಕಮಲಗಳಿಗೆ ಶಿರಸಾಷ್ಟಾಂಗ ನಮಸ್ಕಾರ ಎಂದು ಚಿಂಚನಸೂರ್‌ ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ.

ಚಿಂಚನಸೂರ್‌ ಅವರು ಅಪಘಾತ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರಿಂದ ಅವರ ಪರ ಪ್ರಚಾರ ಮಾಡಲು ಕುಟುಂಬಸ್ಥರು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೆ, ಅವರು ಆಸ್ಪತ್ರೆಯಲ್ಲಿರುವುದರಿಂದ ಈಗ ಕಾಂಗ್ರೆಸ್‌ಗೆ ಸಹ ಪ್ರಚಾರದ ಆತಂಕ ಎದುರಾಗಿದೆ. ಸೋಮವಾರ (ಏ. 17) ಬಾಬುರಾವ್‌ ಚಿಂಚನಸೂರ್‌ ಪರವಾಗಿ ಅವರ ಪತ್ನಿ ನಾಮಪತ್ರವನ್ನು ಸಲ್ಲಿಸಿದ್ದರು.

Exit mobile version