Site icon Vistara News

ಹಳೇ ರೌಡಿ ಕ್ರಿಸ್ಟೋಫರ್‌ ಚಕ್ರವರ್ತಿ ಅಲಿಯಾಸ್‌ ಚಕ್ರೆ ಬ್ರೇನ್‌ ಸ್ಟ್ರೋಕ್‌ಗೆ ಬಲಿ

ಕ್ರಿಸ್ಟೋಫರ್‌ ಚಕ್ರವರ್ತಿ

ಬೆಂಗಳೂರು: ತೊಂಬತ್ತರ ದಶಕದಲ್ಲಿ ಬೆಂಗಳೂರು ಭೂಗತ ಜಗತ್ತಿನಲ್ಲಿ ಮುಂಚೂಣಿಯಲ್ಲಿದ್ದ ಶ್ರೀರಾಂಪುರದ ರೌಡಿ ಶೀಟರ್ ಕ್ರಿಸ್ಟೋಫರ್ ಚಕ್ರವರ್ತಿ ಅಲಿಯಾಸ್‌ ಚಕ್ರೆ(೫೭) ಮೆದುಳಿನ ರಕ್ತಸ್ರಾವದಿಂದ ಭಾನುವಾರ ಮೃತಪಟ್ಟಿದ್ದಾನೆ.

ಕುಖ್ಯಾತ ಭೂಗತ ದೊರೆ ಎಂ ಪಿ ಜಯರಾಜ್‌, ಕಾಟನ್‌ಪೇಟೆ ಪುಷ್ಪ, ಬೆಕ್ಕಿನ ಕಣ್ಣು ರಾಜೇಂದ್ರ ಮುಂತಾದವರ ಜತೆ ಹಲವಾರು ಕ್ರಿಮಿನಲ್‌ ಕೃತ್ಯಗಳಲ್ಲಿ ಭಾಗಿಯಾಗಿದ್ದ ಚಕ್ರೆ ಹಲವಾರು ವರ್ಷ ಜೈಲು ವಾಸ ಅನುಭವಿಸಿದ್ದ. ಡೆಡ್ಲಿ ಸೋಮ ಎಂದೇ ಕುಖ್ಯಾತನಾಗಿದ್ದ ಸೋಮನಾಥ್‌ ಅಲಿಯಾಸ್‌ ಸೋಮನ ಸಹಚರ ರಾಜಶೇಖರನನ್ನು ಶಂಕರಪುರಂ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕೊಚ್ಚಿ ಕೊಂದಿದ್ದ ಪ್ರಕರಣದಲ್ಲಿ ಈತನ ಹೆಸರು ಕೇಳಿ ಬಂದಿತ್ತು.

ರೌಡಿಸಂನಲ್ಲಿ ಸಕ್ರಿಯನಾಗಿ, ಬಳಿಕ ಸಮಾಜ ಸೇವೆಯಲ್ಲಿ ತೊಡಗಿದ್ದ ಚಕ್ರೆ ಚುನಾವಣೆಗೆ ನಿಂತು ಕಾರ್ಪೊರೇಟರ್‌ ಕೂಡ ಆಗಿದ್ದ. ಪ್ರಥಮ ಬಾರಿಗೆ ಹೆಲಿಕಾಪ್ಟರ್ ಮೂಲಕ ಚುನಾವಣಾ ಪಾಂಪ್ಲೆಟ್‌ ಹಂಚಿ ಪ್ರಚಾರ ಮಾಡಿ ಭಾರಿ ಸುದ್ದಿ ಮಾಡಿದ್ದ. ಆ ಬಳಿಕ ಪತ್ನಿ ವಿಕ್ಟೋರಿಯಾಳನ್ನು ಕಾರ್ಪೊರೇಷನ್‌ ಎಲೆಕ್ಷನ್‌ ನಿಲ್ಲಿಸಿದ್ದ. ಈ ಸಂದರ್ಭದಲ್ಲಿ ಮತ್ತೊಬ್ಬ ರೌಡಿ ಬಾಂಬ್‌ ನಾಗ ಮತ್ತು ಈತನ ಗ್ಯಾಂಗ್‌ ನಡುವೆ ಹೊಡೆದಾಟ ನಡೆದಿತ್ತು. ಆಗ ಭೂಗತ ಜಗತ್ತಿನಲ್ಲಿ ಮತ್ತೆ ಚಕ್ರೆಯ ಹೆಸರು ಮುಂಚೂಣಿಗೆ ಬಂದಿತ್ತು. ಬ್ರೇನ್ ಸ್ಟ್ರೋಕ್‌ಗೆ ಒಳಗಾಗಿ ಯಶವಂತಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಚಕ್ರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಇದನ್ನೂ ಓದಿ | ಕ್ಯಾಂಟರ್‌-ಸ್ಕೂಟರ್‌ ಅಪಘಾತದಲ್ಲಿ ತಂದೆ-ಮಗ ಮೃತ್ಯು, ತುಂಬಿದ ಕೆರೆಗೆ ನುಗ್ಗಿದ ಬಸ್‌, ಪ್ರಯಾಣಿಕರು ಪಾರು

Exit mobile version