ಚಿಕ್ಕಮಗಳೂರು: ಟಿ20 ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ ತಂಡ ಗೆದ್ದ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ನಡೆಸಿ, ಪಾಕ್ ಪರ ಘೋಷಣೆ ಕೂಗಿದ (Pro-Pak Slogans) ಆರೋಪದಲ್ಲಿ 4 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ತಪ್ಪೊಪ್ಪಿಕೊಂಡಿದ್ದರಿಂದ ಕ್ಷಮಾಪಣೆ ಪತ್ರ ಬರೆಸಿಕೊಂಡು ಬಿಟ್ಟುಕಳುಹಿಸಲಾಗಿದೆ.
ಅಸ್ಸಾಂ ಮೂಲದ ಅಜ್ಮಲ್ ಅಲಿ, ಅಹಿಲ್ ಉದ್ದೀನ್ ಹಾಗೂ ಇಬ್ಬರು ಅಪ್ರಾಪ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಕಾಫಿ ಎಸ್ಟೇಟ್ ಕಾರ್ಮಿಕರಾದ ಆರೋಪಿಗಳು, ನ.9 ರಂದು ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ ತಂಡವು ಜಯ ಗಳಿಸಿದ್ದರಿಂದ ಸಂಭ್ರಮಾಚರಣೆ ನಡೆಸಿ, ಪಾಕಿಸ್ತಾನ್ ಜಿಂದಾಬಾದ್ ಎಂದು ಜೈಕಾರ ಹಾಕಿದ್ದಾರೆ. ಈ ಬಗ್ಗೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿ ಕಾಫಿ ಎಸ್ಟೇಟ್ ಮ್ಯಾನೇಜರ್ ಗಮನಕ್ಕೆ ತಂದಿದ್ದಾರೆ. ಮ್ಯಾನೇಜರ್ ನಾರಾಯಣ ಮೂರ್ತಿ ಪೊಲೀಸರ ಗಮನಕ್ಕೆ ತಂದಿದ್ದಾರೆ.
ಇದನ್ನೂ ಓದಿ | ನಿಗೂಢವಾಗಿ ನಾಪತ್ತೆಯಾಗಿದ್ದ ಬದಿಯಡ್ಕದ ದಂತವೈದ್ಯರ ಶವ ಪತ್ತೆ
ಸ್ಥಳಕ್ಕೆ ಬಾಳೆಹೊನ್ನೂರು ಠಾಣೆ ಪೊಲೀಸರು ಆಗಮಿಸಿ ಆರೋಪಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿಚಾರಣೆ ವೇಳೆ ಮುಜೇ ಮಾಫ್ ಕರೋ ಸರ್… ಎಂದು ಆರೋಪಿಗಳು ಕಣ್ಣೀರಿಟ್ಟು, ಆಟ ನೋಡಿ ಖುಷಿಯಾಯಿತು. ಅದಕ್ಕೆ ಹಾಗೆ ಕೂಗಿದೆವು. ಇನ್ಮುಂದೆ ಆ ರೀತಿ ಕೂಗುವುದಿಲ್ಲ ಎಂದು ಕ್ಷಮೆ ಕೇಳಿದ್ದಾರೆ. ಬಳಿಕ ಇನ್ನು ಮುಂದೆ ಈ ರೀತಿ ತಪ್ಪು ಪುನರಾವರ್ತನೆ ಆಗುವುದಿಲ್ಲ ಎಂದು ಆರೋಪಿಗಳಿಂದ ಪೊಲೀಸರು ಮುಚ್ಚಳಿಕೆ ಬರೆಸಿಕೊಂಡು, ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಎಸ್‌ಪಿ ಉಮಾ ಪ್ರಶಾಂತ್ ಪ್ರತಿಕ್ರಿಯಿಸಿ, ಪಾಕಿಸ್ತಾನ್ ಮತ್ತು ನ್ಯೂಜಿಲೆಂಡ್ ಟಿ20 ವಿಶ್ವಕಪ್ ಸೆಮಿ ಫೈನಲ್ ನಂತರ ಕಾಫಿ ಎಸ್ಟೇಟ್‌ನ ನಾಲ್ವರು ಕಾರ್ಮಿಕರು, ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದರು. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರು ಬಂದಿತ್ತು. ಹೀಗಾಗಿ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಅವರು ತಪ್ಪೊಪ್ಪಿಕೊಂಡು ಕ್ಷಮಾಪಣೆ ಕೇಳಿದ್ದರಿಂದ ಮುಚ್ಚಳಿಕೆ ಬರೆಸಿಕೊಂಡು ಬಿಟ್ಟು ಕಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಜಿಲ್ಲೆಯ ಕಾಫಿ ಎಸ್ಟೇಟ್‌ಗಳಲ್ಲಿ ಸಾವಿರಾರು ಮಂದಿ ಬಾಂಗ್ಲಾ ಅಕ್ರಮ ವಲಸಿಗರು ಇದ್ದಾರೆ ಎಂಬ ಆರೋಪವಿದೆ. ಇವರು ಅಸ್ಸಾಂನವರಲ್ಲ, ಬಾಂಗ್ಲಾ ಅಕ್ರಮ ವಲಸಿಗರು. ಇಂತಹವರ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಸ್ಥಳಿಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ | Road Accident | ಅರಬೈಲ್ ಘಟ್ಟದಲ್ಲಿ ಟ್ಯಾಂಕರ್‌ಗೆ ಸ್ಕೂಲ್ ಬಸ್ ಡಿಕ್ಕಿ; 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ