Site icon Vistara News

Karnataka Election: ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ; ನಾಲ್ವರು ದಳ ಕಾರ್ಯಕರ್ತರಿಗೆ ಗಾಯ

Four injured in clash between BJP and JDS workers in yelahanka

Four injured in clash between BJP and JDS workers in yelahanka

ಬೆಂಗಳೂರು: ಯಲಹಂಕದಲ್ಲಿ ವಿಧಾನಸಭಾ ಚುನಾವಣೆ (Karnataka Election) ಪ್ರಚಾರದ ವೇಳೆ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದ್ದು, ನಾಲ್ವರು ಜೆಡಿಎಸ್‌ ಕಾರ್ಯಕರ್ತರಿಗೆ ಗಾಯಗಳಾಗಿವೆ. ಪ್ರಚಾರದ ವೇಳೆ ದೇವೆಗೌಡರಿಗೆ ಜೈ ಎಂದಿದ್ದಕ್ಕೆ ಬಿಜೆಪಿ ಕಾರ್ಯಕರ್ತರು ಜೆಡಿಎಸ್‌ ಕಾರ್ಯಕರ್ತರನ್ನು ಥಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ರ‍್ಯಾಲಿ ವೇಳೆ ಎರಡು ಗುಂಪುಗಳು ಪರಸ್ಪರ ಹೊಡೆದಾಡಿಕೊಂಡಿವೆ. ಬಿಜೆಪಿ ಕಾರ್ಯಕರ್ತರ ಸಂಖ್ಯೆ ಹೆಚ್ಚಿದ್ದರಿಂದ ಜೆಡಿಎಸ್ ಕಾರ್ಯಕರ್ತರನ್ನು ಥಳಿಸಿದ್ದಾರೆ ಎನ್ನಲಾಗಿದೆ. ಗಾಯಗೊಂಡ ನಾಲ್ವರು ಜೆಡಿಎಸ್ ಕಾರ್ಯಕರ್ತರನ್ನು ಚಿಕಿತ್ಸೆಗಾಗಿ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇವರಲ್ಲಿ ಒಬ್ಬರಿಗೆ ಗಂಭೀರ ಗಾಯಗಳಾಗಿವೆ.

ಹಲ್ಲೆ ಮಾಡಿರುವ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಜೆಡಿಎಸ್‌ ಕಾರ್ಯಕರ್ತರು, ಯಲಹಂಕ ನ್ಯೂಟೌನ್‌ ಪೊಲೀಸ್‌ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ವರುಣ ಕ್ಷೇತ್ರದಲ್ಲಿ ಬಿಜೆಪಿ ಬೂತ್ ಅಧ್ಯಕ್ಷನ ಮೇಲೆ ಹಲ್ಲೆ

ಮೈಸೂರು: ವರುಣದಲ್ಲಿ ರಾಜಕೀಯ ಗಲಾಟೆ ಮುಂದುವರಿದಿದೆ. ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಬೂತ್ ಅಧ್ಯಕ್ಷನ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ವರುಣ ಕ್ಷೇತ್ರದ ಬೂತ್ ನಂಬರ್‌ 109ರ ಬಿಜೆಪಿ ಬೂತ್ ಅಧ್ಯಕ್ಷ ದಿಲೀಪ್ ಕುಮಾರ್ ಗಾಯಾಳು. ಬಿಜೆಪಿಗೆ ನೀವು ಬೆಂಬಲ ನೀಡುತ್ತಿದ್ದೀರಿ, ಅದನ್ನು ನಿಲ್ಲಿಸಿ ಕಾಂಗ್ರೆಸ್ ಬೆಂಬಲಿಸಿ ಎಂದು ಕೈ ಕಾರ್ಯಕರ್ತರು ಹಲ್ಲೆ ಮಾಡಿದ್ದು, ದಿಲೀಪ್ ಕುಮಾರ್ ತಲೆಗೆ ಗಾಯವಾಗಿದೆ. ಅವರನ್ನು ತಿ.ನರಸೀಪುರ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ಕ್ಷುಲ್ಲಕ ಕಾರಣಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಗಲಾಟೆ ಮಾಡಿ ಹಲ್ಲೆ ಮಾಡಿದ್ದಾರೆ ಎಂದು ಗಾಯಾಳು ದಿಲೀಪ್ ಕುಮಾರ್‌, ತಿ.ನರಸೀಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಜೆಡಿಎಸ್-ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ

ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದ ಬಾಣಾವರ ಗೇಟ್ ಬಳಿ ಜೆಡಿಎಸ್ ರೋಡ್ ಶೋ ವೇಳೆ ಜೆಡಿಎಸ್- ಬಿಜೆಪಿ ಕಾರ್ಯಕರ್ತರ ನಡುವೆ ತೀವ್ರ ವಾಗ್ವಾದ ನಡೆದಿದೆ. ಬಿಜೆಪಿ ಕಚೇರಿ ಮೂಲಕ ರೋಡ್ ಶೋ ಹಾದು ಹೋಗುತ್ತಿದ್ದಾಗ, ಉಭಯ ಪಕ್ಷದ ಕಾರ್ಯಕರ್ತರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಹಬದಿಗೆ ತಂದಿದ್ದಾರೆ.

ಬಂದೂಕು ತೋರಿಸಿ ತರೀಕೆರೆ ಮಾಜಿ‌ ಶಾಸಕನ ಮನೆ ದರೋಡೆ; ಚಿನ್ನಾಭರಣ ಕದ್ದು ಪರಾರಿ

ಚಿಕ್ಕಮಗಳೂರು: ಇಲ್ಲಿನ ಅಜ್ಜಂಪುರ ತಾಲೂಕಿನ ಗಡಿಹಳ್ಳಿಯಲ್ಲಿ ತಡರಾತ್ರಿ ಮನೆಗೆ ನುಗ್ಗಿದ (Robbery Case) ದರೋಡೆಕೋರರು ಮನೆ ಮಂದಿಗೆ ಗನ್ ತೋರಿಸಿ ಲೂಟಿ ಮಾಡಿದ ಘಟನೆ ನಡೆದಿದೆ. ತರೀಕೆರೆ ಮಾಜಿ‌ ಶಾಸಕನ (Tarikere Ex MLA) ಮನೆಗೆ ದರೋಡೆಕೋರರು ಕನ್ನ ಹಾಕಿದ್ದಾರೆ.

ಮಾಜಿ ಶಾಸಕ ಎಸ್.ಎಂ ನಾಗರಾಜು ಅವರ ತೋಟದ ಮನೆಗೆ ನುಗ್ಗಿದ 15ಕ್ಕೂ ಹೆಚ್ಚು ದುಷ್ಕರ್ಮಿಗಳು, ಬಂದೂಕು, ಮಚ್ಚು ತೋರಿಸಿ ದರೋಡೆ ಮಾಡಿದ್ದಾರೆ. ಮನೆಯ ಬಾಗಿಲು ಮುರಿದು ನಾಗರಾಜ್‌ ಮತ್ತು ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿ ರಾಬರಿ ಮಾಡಿದ್ದಾರೆ. ಮನೆಯಲ್ಲಿದ್ದ 1 ಕೆ.ಜಿ.ಗೂ ಅಧಿಕ ಚಿನ್ನಾಭರಣ, ನಗದು ದೋಚಿ ಪರಾರಿ ಆಗಿದ್ದಾರೆ.

ಇದನ್ನೂ ಓದಿ | Fire Accident: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌; ಬ್ಯಾಂಗಲ್‌ ಸ್ಟೋರ್‌ ಸೇರಿ ಸುಟ್ಟು ಭಸ್ಮವಾದ ನಾಲ್ಕು ಅಂಗಡಿಗಳು

ಚುನಾವಣೆ ವೇಳೆ ನಡೆದಿರುವ ದರೋಡೆ ಪ್ರಕರಣವು ಹಲವು ಅನುಮಾನವನ್ನು ಮೂಡಿಸಿದೆ. ಸ್ಥಳಕ್ಕೆ ಎಸ್‌ಪಿ ಉಮಾ ಪ್ರಶಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದುಷ್ಕರ್ಮಿಗಳ ಶೋಧಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಚುನಾವಣೆಯ ದ್ವೇಷವೋ? ಹಣಕ್ಕಾಗಿಯೇ ನಡೆದಿರುವ ದರೋಡೆ ಕೃತ್ಯವೋ ಎಂಬ ಆಯಾಮದಲ್ಲಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

Exit mobile version