Site icon Vistara News

Car Accident: ಚಾಲಕನ ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ನಾಲ್ವರ ದುರ್ಮರಣ

Car accident

ಚಿಕ್ಕಬಳ್ಳಾಪುರ: ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಬದಿಯ ಗುಂಡಿಗೆ ಬಿದ್ದು ನಾಲ್ವರು ದುರ್ಮರಣ ಹೊಂದಿದ ಘಟನೆ (Car Accident) ನಗರದ ಬೈಪಾಸ್ ಬಳಿಯ ಅಂಜನೇಯ ಸ್ವಾಮಿ ದೇವಾಲಯದ ಬಳಿ ನಡೆದಿದೆ. ಬೆಂಗಳೂರು-ಹೈದರಾಬಾದ್ ಹೆದ್ದಾರಿಯ ಅಂಡರ್ ಪಾಸ್‌ನಲ್ಲಿ ವೇಗವಾಗಿ ಬಂದು ಗುಂಡಿಯೊಳಗೆ ಬಿದ್ದಿದ್ದರಿಂದ ಕಾರಿನೊಳಗಿದ್ದ ನಾಲ್ವರು ಜಲಸಮಾಧಿಯಾಗಿದ್ದಾರೆ.

ಸ್ಥಳಕ್ಕೆ ಪೊಲೀಸರು ಅಗ್ನಿಶಾಮಕ ದಳ ಸಿಬ್ಬಂದಿ ಧಾವಿಸಿ ಕಾರನ್ನು ಗುಂಡಿಯಿಂದ ಹೊರತೆಗೆಯುವ ಕೆಲಸ ಮಾಡುತ್ತಿದ್ದಾರೆ. ಮೃತರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಕಾರು ಹರಿದು ಅಯ್ಯಪ್ಪ ಮಾಲಾಧಾರಿ ಸಾವು, ಇಬ್ಬರಿಗೆ ಗಂಭೀರ ಗಾಯ

ಚಿಕ್ಕಬಳಾಪುರ: ಕಾರು ಹರಿದ ಪರಿಣಾಮ ಅಯ್ಯಪ್ಪಸ್ವಾಮಿ ಮಾಲಾಧಾರಿಯೊಬ್ಬರು ಮೃತಪಟ್ಟು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥ ಬಳಿ ನಡೆದಿದೆ.

ಹಿಂದೂಪುರ ಮೂಲದ ಪ್ರಹ್ಲಾದ (36) ಮೃತರು. ಗಾಯಗೊಂಡ ಮಣಿಕಂಠ ಹಾಗು ವೆಂಕಟೇಶ್ ಎಂಬುವರ ಸ್ಥಿತಿ ಚಿಂತಾಜನಕವಾಗಿದೆ. ಹಿಂದೂಪುರದಿಂದ ಶಬರಿಮಲೆಗೆ ಪಾದಯಾತ್ರೆ ಮಾಡುತಿದ್ದ ವೇಳೆ ಕಾರು ಹರಿದಿದ್ದರಿಂದ ದುರಂತ ಸಂಭವಿಸಿದೆ. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Bus Accident: ಬಸ್‌ ಪಲ್ಟಿಯಾಗಿ ನಾಲ್ವರ ಸಾವು; ಮದುವೆಗೆ ಹೊರಟಿದ್ದವರು ಮಸಣ ಸೇರಿದರು

ಬೈಕ್ ಸ್ಕಿಡ್ ಆಗಿ ಬಿದ್ದು ಇಬ್ಬರ ಸವಾರರ ಸಾವು

ಆನೇಕಲ್: ಬೈಕ್‌ನಿಂದ ಬಿದ್ದು ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಜಿಗಣಿ ಸಮೀಪದ ಮಾದ ಪಟ್ಟಣದ ಬಳಿ ಶನಿವಾರ ನಡೆದಿದೆ. ರಸ್ತೆ ಹಂಪ್ ಗೊತ್ತಾಗದೇ ಸಾಗಿದ್ದರಿಂದ ಬೈಕ್ ಸ್ಕಿಡ್ ಆಗಿ ಅಪಘಾತ (Bike Accident) ಸಂಭವಿಸಿದೆ.

ಒಡಿಶಾ ಮೂಲದ ಕಾರ್ಮಿಕರಾದ ಫೋಕೀರ್ ಚರಣ್ ಪ್ರಧಾನ್ (29), ಬೀರ್ ಸಿಂಗ್ ನಾಯಕ್(24) ಮೃತರು. ಕೆಲಸ ಮುಗಿಸಿಕೊಂಡು ಜಿಗಣಿಯಿಂದ ಇಂಡ್ಲವಾಡಿಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಮಾದಪಟ್ಟಣ ಬಳಿ ರಸ್ತೆ ಹಂಪ್ ಗೊತ್ತಾಗದೆ ಸವಾರ ಬ್ರೇಕ್ ಹಾಕಿದ್ದಾನೆ. ಈ ವೇಳೆ ನಿಯಂತ್ರಣ ಕಳೆದುಕೊಂಡು ಮುಂಭಾಗದಲ್ಲಿ ನಿಂತಿದ್ದ ಬಸ್‌ಗೆ ಬೈಕ್‌ ಡಿಕ್ಕಿಯಾಗಿದೆ. ಇದರಿಂದ ಸವಾರರು ಹಾರಿ ಬಿದ್ದಾಗ ಬಸ್‌ಗೆ ತಲೆ ತಗುಲಿ ಗಂಭೀರ ಗಾಯಗೊಂಡಿದ್ದರಿಂದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ | Someshwara Beach: ದ್ವಿತೀಯ ಪಿಯುಸಿ ಇಬ್ಬರು ವಿದ್ಯಾರ್ಥಿಗಳು ಸೋಮೇಶ್ವರದಲ್ಲಿ ಸಮುದ್ರಪಾಲು

L&t ಕಂಪನಿಯಲ್ಲಿ ಹೆಲ್ಪರ್‌ ಆಗಿ ಫೋಕೀರ್ ಚರಣ್ ಪ್ರಧಾನ್, ಶಕ್ತಿ ಪ್ರೊಸೆಸಿಂಗ್ ಕಂಪನಿಯಲ್ಲಿ ಸಹಾಯಕನಾಗಿ ಬೀರ್ ಸಿಂಗ್ ನಾಯಕ್ ಕೆಲಸಮಾಡುತ್ತಿದ್ದ. ಮೃತ ದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಜಿಗಣಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version