ಉಡುಪಿ: ಬ್ರಹ್ಮಾವರ ತಾಲೂಕಿನಲ್ಲಿ (Udupi) ಮೀನು ಹಿಡಿಯಲು ಹೋದ ನಾಲ್ವರು ಯುವಕರು ನೀರುಪಾಲಾಗಿದ್ದಾರೆ. ಇಬಾಜ್, ಫಜಾನ್, ಸೂಫಾನ್ ಫರ್ಹಾನ್ ಮೃತಪಟ್ಟಿದ್ದಾರೆ. ಮತ್ತೊಬ್ಬ ನಾಪತ್ತೆಯಾಗಿದ್ದು, ಆತನ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ರಂಜಾನ್ ಹಬ್ಬಕ್ಕೆಂದು ಬ್ರಹ್ಮಾವರದಲ್ಲಿರುವ ಸಂಬಂಧಿಕರ ಮನೆಗೆ ಆಗಮಿಸಿದ್ದ ಏಳು ಯುವಕರು, ಕುಕ್ಕುಡೆ ಕಿಣಿಯರ ಕುದ್ರು ಸಮೀಪದ ನದಿಯಲ್ಲಿ ಚಿಪ್ಪು ಮೀನು ಹಿಡಿಯಲು ತೆರಳಿದ್ದರು. ದೋಣಿಯ ಮೂಲಕ ಮೀನು ಹಿಡಿಯಲು ಯತ್ನಿಸುತ್ತಿದ್ದರು. ಆದರೆ, ಸಂಜೆಯಾಗುತ್ತಲೇ ನೀರಿನ ಮಟ್ಟ ಏರಿಕೆಯಾಗಿ, ದೋಣಿ ಮಗುಚಿರಬಹುದು ಎಂದು ತಿಳಿದುಬಂದಿದೆ.
ಇದನ್ನೂ ಓದಿ: Davanagere News: ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಮೂವರು ಯುವಕರ ಸಾವು
ನೀರಿನ ರಭಸದ ಮಧ್ಯೆಯೂ ಮೂವರು ಅಪಾಯದಿಂದ ಪಾರಾಗಿದ್ದಾರೆ. ಮೂವರು ಮೃತಪಟ್ಟಿರುವುದು ದೃಢಪಟ್ಟಿದ್ದು, ಇನ್ನೊಬ್ಬನಿಗಾಗಿ ತೀವ್ರ ಶೋಧ ನಡೆಯುತ್ತಿದೆ. ಸ್ಥಳೀಯರ ಸಹಾಯದಿಂದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಯು ರಾತ್ರಿಯಾದರೂ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲೂ ಇಂತಹ ದುರಂತ ಸಂಭವಿಸಿದೆ. ಜಿಲ್ಲೆಯ ಹೊನ್ನಾಳಿ ತಾಲೂಕಿನ ಹಿರೇಗೋಣಗೆರೆ ಗ್ರಾಮದ ಬಳಿಯ ತುಂಗಭದ್ರಾ ನದಿಯಲ್ಲಿ ಭಾನುವಾರ ಈಜಾಡಲು ಹೋಗಿದ್ದ ಮೂವರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತರನ್ನು ವರುಣ್ (18), ಕಿರಣ್ (20), ಪವನ್ (18) ಎಂದು ಗುರುತಿಸಲಾಗಿದೆ.